ಆರ್‌ಬಿಐನ 2016 ರ ಪ್ರಧಾನ ಸುತ್ತೋಲೆ (ಮಾಸ್ಟರ್ ಸರ್ಕ್ಯುಲರ್) ಅನ್ವಯಿಸಿ ಯಾವುದೇ ಖಾತೆ ಅಥವಾ ಸಾಲಗಾರನನ್ನು ವಂಚಕ ಎಂದು ಘೋಷಿಸುವ ಮೊದಲು ಸಹಜ ನ್ಯಾಯದ ತತ್ವಗಳನ್ನು ಪರಿಗಣಿಸಿ ಖಾತೆದಾರರ ವಿಚಾರಣೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸುತ್ತೋಲೆ ಅಸಾಂವಿಧಾನಿಕವಾಗಲಿದೆ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. (ರಾಜೇಶ್ ಅಗರ್‌ವಾಲ್ ಮತ್ತು ಆರ್‌ಬಿಐ ಮತ್ತಿತರರ ನಡುವಣ ಪ್ರಕರಣ)
“ಸಹಜ ನ್ಯಾಯದ ತತ್ವಗಳನ್ನು ಅದರಲ್ಲಿಯೂ ವಿಶೇಷವಾಗಿ ಆಡಿ ಆಲ್ಟೆರಮ್ ಪಾರ್ಟೆಂ ಅನ್ನು (ವಿಚಾರಣೆಯ ಅವಕಾಶ) ಮಾಸ್ಟರ್ ಸರ್ಕ್ಯುಲರ್‌ನ 8.9.4 ಮತ್ತು 8.9.5 ನೇ ವಿಧಿಗಳೊಡನೆ ಓದಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಸಿವಿಲ್ ಅಥವಾ ದಂಡಾರ್ಹ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯನ್ನು ಶಿಕ್ಷೆಗೆ ಗುರಿಪಡಿಸುವ ಮೊದಲು ಆ ವ್ಯಕ್ತಿ ಅಥವಾ ಸಂಸ್ಥೆಗೆ ವಿಚಾರಣೆಯ ಅವಕಾಶ ನೀಡಬೇಕು. ವಿಚಾರಣೆಯ ಅವಕಾಶ ನೀಡದೆ ಖಾತೆಗಳ ಜಟಿಲತೆ ಅಥವಾ ವ್ಯವಹಾರದ ಒಪ್ಪಂದ ವಿವರಿಸಲು ಅವಕಾಶ ನೀಡದೆ ವ್ಯಕ್ತಿಯನ್ನು ಖಂಡಿಸುವುದು ಅನ್ಯಾಯ, ವಿವೇಚನಾರಹಿತ ಹಾಗೂ ಸ್ವೇಚ್ಛೆಯಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
"ಆಡಳಿತಾತ್ಮಕ ಕ್ರಿಯೆಯಲ್ಲಿ ಕೂಡ, ನ್ಯಾಯವನ್ನು ಕೇವಲ ಒದಗಿಸುವುದಷ್ಟೇ ಅಲ್ಲದೆ ಎಲ್ಲಾ ಕಡೆಯವರು ಸಂತುಷ್ಟವಾಗುವಂತೆ ಅದನ್ನು ನೀಡಬೇಕು. ಆದ್ದರಿಂದ, ಒಬ್ಬ ವ್ಯಕ್ತಿಯನ್ನು 'ಮೋಸದ ಸಾಲಗಾರ' ಅಥವಾ 'ಮೋಸದ ಖಾತೆ ಹೊಂದಿದವ' ಎಂದು ಘೋಷಿಸುವ ಮೊದಲು ವಿಚಾರಣೆಯ ಅವಕಾಶದ ತತ್ವಗಳನ್ನು ಅವು, ಎಷ್ಟೇ ಚಿಕ್ಕದಾಗಿದ್ದರೂ ಅನ್ವಯಿಸಬೇಕಾಗುತ್ತದೆ” ಎಂದು ತೀರ್ಪು ಹೇಳಿದೆ.
ತೀರ್ಪು ನೀಡುವ ವೇಳೆ ನ್ಯಾಯಾಲಯ ಸಹಜ ನ್ಯಾಯದ ತತ್ವಗಳನ್ನು ʼಸೂರ್ಯನ ಸ್ಪಷ್ಟ ಬೆಳಕಿಗೆʼ ಹೋಲಿಸಿದ್ದು ಅದು ʼಕತ್ತಲೆಯ ಆಳದ ಮೂಲೆಗಳಿಗೂ ತಲುಪಿ ಅನ್ಯಾಯದ ರೋಗಾಣುಗಳನ್ನು ಕೊಲ್ಲುತ್ತದೆʼ ಎಂದಿದೆ.
ಪ್ರಕರಣದ ಹಿನ್ನೆಲೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಂಚನೆ ಪತ್ತೆ ಸಮಿತಿ (ಎಫ್‌ಐಸಿ) ಮತ್ತು ಜಂಟಿ ಸಾಲಗಾರರ ವೇದಿಕೆ (ಜೆಎಲ್‌ಎಫ್) 2019 ರಲ್ಲಿ ಬಿಎಸ್ ಲಿಮಿಟೆಡ್ ಖಾತೆಯನ್ನು "ವಂಚಕ" ಎಂದು ವರ್ಗೀಕರಿಸುವ ನಿರ್ಧಾರ ಕೈಗೊಂಡಿತ್ತು. ಇದನ್ನು ರಾಜೇಶ್ ಅಗರ್ವಾಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆರ್‌ಬಿಐನ 2016 ರ ಮಾಸ್ಟರ್ ಸರ್ಕ್ಯುಲರ್‌ನಲ್ಲಿ ಸಹಜ ನ್ಯಾಯದ ತತ್ವಗಳನ್ನು ಅನ್ವಯಿಸಿಲ್ಲ ಎಂದು ಕೂಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ಎ ಒ ಆರ್ ತರುಣ್ ಜಿ ರೆಡ್ಡಿ ವಾದ ಮಂಡಿಸಿದರು. ಆರ್‌ಬಿಐ ಪರ ಸ್ಥಾಯಿ ಸಲಹೆಗಾರ ನಳಿನ್ ಕುಮಾರ್ ಹಾಜರಾದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು (ಎಸ್‌ಬಿಐ) ಹಿರಿಯ ವಕೀಲ ಬಿ.ಎಸ್. ಪ್ರಸಾದ್, ಎಒಆರ್ ಕೆ ಸುರೇಂದರ್ ಪ್ರತಿನಿಧಿಸಿದರು. ವಕೀಲರಾದ ಎ ಬಿ ಗಂಗಾ ರೆಡ್ಡಿ, ಮಹೇಶ್ವರ ರಾವ್ ಕುಂಚೆಮ್, ಎಂ.ವಿ.ರಮಣ ವಿವಿಧ ಪ್ರತಿವಾದಿ-ಬ್ಯಾಂಕುಗಳ ಪರ ಹಾಜರಾದರು. ಸಹಾಯಕ ಸಾಲಿಸಿಟರ್ ಜನರಲ್ ನಮವರಪು ರಾಜೇಶ್ವರ ರಾವ್ ಅವರು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಎಸ್‌ಎಫ್‌ಐಒ, ಹೈದರಾಬಾದ್ ಮತ್ತು ತೆಲಂಗಾಣದ ಕಂಪನಿಗಳ ರಿಜಿಸ್ಟ್ರಾರ್‌ಗೆ ಹಾಜರಾದರು.