ಒಮಿಕ್ರಾನ್ ಸೋಂಕಿನ ಅಲೆಯ ನಡುವೆಯೇ ನಡೆಯಲಿರುವ ಮಂಬರುವ ವಿಧಾನಸಭಾ ಚುನಾವಣೆಯಲ್ಲಿ ವರ್ಚುವಲ್ ಸಮಾವೇಶ, ಆನ್‌ಲೈನ್ ಮತದಾನದ ಬಗ್ಗೆ ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಉತ್ತರಾಖಂಡ ಹೈಕೋರ್ಟ್ ಸೂಚಿಸಿದೆ [ಸಚ್ಚಿದಾನಂದ ದಬ್ರಾಲ್ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].
ಉತ್ತರಾಖಂಡ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಬೃಹತ್ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದಿರುವ ನ್ಯಾಯಾಲಯವು ಮುಂದುವರೆದು, "ವರ್ಚುವಲ್ ಮಾದರಿಯಲ್ಲಿ ಚುನಾವಣಾ ಸಭೆಗಳನ್ನು ನಡೆಸುವ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡುವ ಬಗ್ಗೆಯೂ ಆಯೋಗವು ಪರಿಶೀಲಿಸಬೇಕು. ಅದೇ ರೀತಿ, ಭವಿಷ್ಯದಲ್ಲಿ ವರ್ಚುವಲ್ ಮತದಾನದಂತಹ ಪರ್ಯಾಯ ಸಾಧ್ಯತೆಯ ಬಗ್ಗೆಯೂ ಪರಿಶೀಲಿಸುವಂತೆಯೂ ನಾವು ಚುನಾವಣಾ ಆಯೋಗವನ್ನು ಕೋರುತ್ತೇವೆ," ಎಂದು ಪೀಠವು ಹೇಳಿತು.
ಈ ಕುರಿತು ಸೂಚನೆಗಳೊಂದಿಗೆ ಒಂದು ವಾರದೊಳಗೆ ಹಾಜರಾಗುವಂತೆ ಇಸಿಐಗೆ ನ್ಯಾಯಾಲಯ ಸಮಯಾವಕಾಶ ನೀಡಿ ಮುಂದಿನ ವಿಚಾರಣೆಗಾಗಿ ಜನವರಿ 12ಕ್ಕೆ ಪ್ರಕರಣವನ್ನು ಪಟ್ಟಿ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಕೋರಿ ವಕೀಲ ಶಿವ ಭಟ್ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ ಕುಮಾರ್ ಮಿಶ್ರಾ ಮತ್ತು ನ್ಯಾ. ಅಲೋಕ್ ಕುಮಾರ್ ವರ್ಮಾ ಅವರಿದ್ದ ವಿಭಾಗೀಯ ಪೀಠ 29, ಡಿಸೆಂಬರ್ 2021 ರಂದು ಅರ್ಜಿಯ ಕುರಿತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು.
ಓಮಿಕ್ರಾನ್ ತಳಿ ಕೋವಿಡ್‌ನ ಇತರೆ ಯಾವುದೇ ವೈರಸ್‌ಗಳಿಗಿಂತಲೂ ಶೇ 300ರಷ್ಟು ವೇಗವಾಗಿ ಹರಡುತ್ತಿದೆ. ಉತ್ತರಾಖಂಡದಲ್ಲಿ ವೈದ್ಯಕೀಯ ಮೂಲಸೌಕರ್ಯ ನಿರಾಶಾದಾಯಕ ಸ್ಥಿತಿಯಲ್ಲಿದ್ದು ಒಮಿಕ್ರಾನ್ ಅಲೆ ಪರಾಕಷ್ಠೆ ತಲುಪಿದ್ದಾಗ ಚುನಾವಣೆ ನಡೆದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಿಸಲು ಚುನಾವಣಾ ಸಮಾವೇಶಗಳಂತಹ ದೊಡ್ಡ ಸಭೆಗಳನ್ನು ತಪ್ಪಿಸುವುದು ಅವಶ್ಯಕ ಎಂದು ಅರ್ಜಿ ವಿವರಿಸಿದೆ.