Covid-19 vaccine 
ಸುದ್ದಿಗಳು

[ಕೋವಿಡ್‌] ಮುಂಚೂಣಿ ಕಾರ್ಯಕರ್ತರ ವಿಭಾಗಕ್ಕೆ ಬೋಧಕರು, ಬೋಧಕತೇರರನ್ನು ಸೇರಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕೋವಿಡ್‌ ಹಿನ್ನೆಲೆಯಲ್ಲಿ ಶಾಲೆ ಪುನಾರಂಭ ಕುರಿತಾದ ಮನವಿಯ ವಿಚಾರಣೆ ನಡೆಸಿದ ಪೀಠವು “ಶಾಲೆ ಪುನಾರಂಭವಾದಾಗ ಮಕ್ಕಳಲ್ಲಿ ಸೋಂಕು ಹರಡದಂತೆ ಎಚ್ಚರವಹಿಸಬೇಕು ಎಂದು ಹೇಳಿದೆ.

Bar & Bench

ಕೋವಿಡ್‌ ಲಸಿಕೆ ನೀಡಲು ಬೋಧಕರು ಮತ್ತು ಬೋಧಕರೇತರರನ್ನು ಮುಂಚೂಣಿ ಕಾರ್ಯಕರ್ತರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಇಲ್ಲಿಯವರೆಗೆ ಲಸಿಕೆ ನೀಡಲಾಗಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಬೋಧಕರು ಮತ್ತು ಬೋಧಕೇತರರ ಜಿಲ್ಲಾವಾರು ಪಟ್ಟಿಯನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಪಿ ಕೃಷ್ಣ ಭಟ್‌ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.

ಶಾಲೆಗಳನ್ನು ಪುನಾರಂಭಿಸುವ ಕುರಿತಾದ ವಿಚಾರ ನಿರ್ಧರಿಸುವುದಕ್ಕೂ ಮುನ್ನ ಲಸಿಕೆ ಮೊದಲ ಹೆಜ್ಜೆಯಾಗಿದೆ ಎಂದು ಪೀಠ ಮೌಖಿಕವಾಗಿ ಹೇಳಿದೆ. ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ಮತ್ತು ತಜ್ಞರ ಅಭಿಪ್ರಾಯ ಆಧರಿಸಿ ರಾಜ್ಯ ಸರ್ಕಾರವು ಶಾಲೆ ಪುನಾರಂಭ ದಿನಾಂಕ ನಿರ್ಧರಿಸಲಿದೆ. ಈ ವಿಚಾರದಲ್ಲಿ ಇಂದೇ ಶಾಲೆಯನ್ನು ಪುನಾರಂಭಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

“ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡಾಗ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದೆ. ಈಗ ಕೆಲವು ಜಿಲ್ಲೆಗಳಲ್ಲಿ ಮತ್ತೆ ಕೋವಿಡ್‌ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ...” ಎಂದು ಪೀಠ ಹೇಳಿದೆ. “ಶಾಲೆಗಳು ಪುನಾರಂಭವಾದಾಗ ಮಕ್ಕಳನ್ನು ವೈರಸ್‌ ವ್ಯಾಪಿಸಬಾರದು” ಎಂದೂ ನ್ಯಾಯಾಲಯ ಹೇಳಿದೆ.

ಶಾಲೆ ಪುನಾರಂಭ ಕುರಿತು ನಿರ್ಧರಿಸಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ ಎಂದು ಸರ್ಕಾರವು ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ತಿಳಿಸಿತ್ತು. ಜುಲೈ 15ರಂದು ಸಮಿತಿಯ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಲಾಗಿದೆ. ಶಾಲೆ ಪುನಾರಂಭ ಕುರಿತು ಸರ್ಕಾರ ನಿರ್ಧರಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ಬೋಧಕರ ಜೊತೆಗೆ ಬೋಧಕೇತರರಿಗೂ ಲಸಿಕೆ ನೀಡಬೇಕು ಎಂದರು.

ಭೌತಿಕವಾಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಆರಂಭವಾಗುವುದಕ್ಕೂ ಮುನ್ನ ಶಾಲೆಯನ್ನು ಸ್ಯಾನಿಟೈಸ್‌ ಮತ್ತು ಸ್ವಚ್ಛಗೊಳಿಸಬೇಕು. ಶಿಕ್ಷಕರು ಮತ್ತು ಸಿಬ್ಬಂದಿಗೆ ಹೊಸ ಹೊಂದಾಣಿಕೆಯ ತರಬೇತಿ ನೀಡಬೇಕು. ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂಬುದನ್ನು ಪೀಠ ಪರಿಗಣಿಸಿತು.

ಮಕ್ಕಳು ಭೌತಿಕವಾಗಿ ಶಾಲೆಗೆ ತೆರಳುವುದಕ್ಕೂ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಜಯ್ನಾ ಕೊಠಾರಿ ಪೀಠಕ್ಕೆ ಕೋರಿದರು. ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಲಾಗಿದೆ.