ಶಾಲೆ ತೆರೆದು ಗುಂಪು ಸೇರಲು ಅನುಮತಿಸುವುದಾದರೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಬಾರದೇಕೆ? ರಾಜ್ಯಕ್ಕೆ ಹೈಕೋರ್ಟ್‌ ಪ್ರಶ್ನೆ

“ಸಂವಿಧಾನದ 21ಎ ವಿಧಿಯಡಿ ಶಿಕ್ಷಣ ಮೂಲಭೂತ ಹಕ್ಕು. ಮಕ್ಕಳನ್ನು ಹಸಿದ ಹೊಟ್ಟೆಯಲ್ಲಿ ಅಭ್ಯಾಸ ಮಾಡುವಂತೆ ಹೇಳಲಾಗದು, ಹೀಗಾಗಿ ಮಧ್ಯಾಹ್ನದ ಬಿಸಿಯೂಟ ನೀಡುವುದೂ ಮೂಲಭೂತ ಹಕ್ಕಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.
Mid-day meal scheme, Karnataka High Court
Mid-day meal scheme, Karnataka High Court
Published on

ಶಾಲೆಗಳನ್ನು ಪುನಾರಂಭಿಸಿ ಗುಂಪುಗೂಡಲು ಒಂದೆಡೆ ಅವಕಾಶ ಕಲ್ಪಿಸಿ, ಮತ್ತೊಂದೆಡೆ ಕೋವಿಡ್‌ ನೆಪವೊಡ್ಡಿ ಮಧ್ಯಾಹ್ನದ ಬಿಸಿಯೂಟ ತಡೆದಿರುವ ರಾಜ್ಯ ಸರ್ಕಾರದ ನಡೆಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ಕಠಿಣವಾಗಿ‌ ಪ್ರಶ್ನಿಸಿದೆ.

ಕೋವಿಡ್‌ ವ್ಯಾಪಕವಾಗುತ್ತಿರುವ ಪ್ರದೇಶಗಳಲ್ಲಿ ಮತ್ತು ಕೇರಳ-ಕರ್ನಾಟಕ ಗಡಿ ಭಾಗದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪುನಾರಂಭಿಸಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ನಿರಾಕರಿಸಿತು.

“ಒಂದು ವರ್ಷದಿಂದಲೂ ಇವುಗಳ ಪರಿಣಾಮದ ಬಗ್ಗೆ ನಿಮಗೆ ತಿಳಿದಿದೆ, ಹಾಗಿದ್ದರೂ ಯಾವುದೇ ಯೋಜನೆ ಸಿದ್ಧಪಡಿಸಿಲ್ಲ. ನೀವು ಶಾಲೆ ಪುನಾರಂಭಿಸಲು ಅನುಮತಿಸಿದರೆ, ಗುಂಪುಗೂಡಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅದಕ್ಕೆ ನೀವು ಅನುಮತಿ ನೀಡುವುದಾದರೆ, ಮಧ್ಯಾಹ್ನದ ಬಿಸಿಯೂಟ ಆರಂಭಿಸಲು ಏಕೆ ಆಗುವುದಿಲ್ಲ” ಎಂದು ನ್ಯಾ. ನಾಗರತ್ನ ಪ್ರಶ್ನಿಸಿದ್ದಾರೆ.

“ಸಂವಿಧಾನದ 21ಎ ವಿಧಿಯಡಿ ಶಿಕ್ಷಣ ಮೂಲಭೂತ ಹಕ್ಕು ಎಂದಾದರೆ ಬಿಸಿಯೂಟವೂ ಆ ಹಕ್ಕಿನ ಮತ್ತೊಂದು ಭಾಗವಾಗಿದೆ. ಮಕ್ಕಳನ್ನು ಹಸಿದ ಹೊಟ್ಟೆಯಲ್ಲಿ ಅಭ್ಯಾಸ ಮಾಡಲು ಸೂಚಿಸಲಾಗದು. ಅದು ಯೋಜನೆಯ ರೂಪದಲ್ಲಿದ್ದರೂ ಅಂತಿಮವಾಗಿ ನಾವು ಅದನ್ನು ಮೂಲಭೂತ ಹಕ್ಕು ಎಂದು ಹೇಳಲೇಬೇಕು. ಹಸಿದ ಹೊಟ್ಟೆ ಇಟ್ಟುಕೊಂಡು ಯಾರೂ ಅಭ್ಯಾಸ ಮಾಡಲಾಗದು” ಎಂದು ಪೀಠ ಹೇಳಿದೆ.

ರಾಜ್ಯದಲ್ಲಿ 6ರಿಂದ 8ನೇ ತರಗತಿಗಳು ಈಗಾಗಲೇ ಆರಂಭವಾಗಿದ್ದು, ಆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವಂತೆ ಕೋರಿ ರಾಧಾ ಎಂ ಎಂಬುವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಏಪ್ರಿಲ್‌ 10ರವರೆಗೂ ಮಕ್ಕಳಿಗೆ ಪಡಿತರವನ್ನು ಪೂರೈಸಲಾಗುವುದು. ಬಿಸಿಯೂಟ ಯೋಜನೆಯ ಪುನಾರಂಭದ ಕುರಿತು ಕೇಂದ್ರ ಸರ್ಕಾರದ ನಿರ್ದೇಶನಕ್ಕಾಗಿ ರಾಜ್ಯ ಸರ್ಕಾರ ಕಾದಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿರುವ ಅಂಗನವಾಡಿಗಳಲ್ಲಿ ಬಿಸಿಯೂಟ ನೀಡಬಹುದೇ ಎಂಬುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದೆ. ಕೋವಿಡ್‌ ಎರಡನೇ ಅಲೆ ಶುರುವಾಗಿರುವುದರಿಂದ ಬಿಸಿಯೂಟ ಯೋಜನೆ ಪುನಾರಂಭಿಸಲಾಗಿಲ್ಲ ಎಂದು ಬುಧವಾರ ರಾಜ್ಯ ಸರ್ಕಾರ ಪುನರುಚ್ಚರಿಸಿದೆ.

ದೀಪಿಕಾ ಹಗತ್ರಾಮ್‌ ಸಹಂತ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಆಧರಿಸಿ ಹಿರಿಯ ವಕೀಲ ಜಯ್ನಾ ಕೊಠಾರಿ ಅವರು ರಾಜ್ಯ ಸರ್ಕಾರದ ವಾದವನ್ನು ವಿರೋಧಿಸಿದರು.

Also Read
ಬಿಸಿಯೂಟ ಯೋಜನೆ: ಆಹಾರ ಉತ್ಪನ್ನಗಳ ಬೆಲೆ ಮ್ಯುಚುವಲ್‌ ಫಂಡ್‌ ರೀತಿ ಬದಲಾಗದು ಎಂದು ಹೈಕೋರ್ಟ್‌ನಿಂದ ಸರ್ಕಾರದ ತರಾಟೆ

“ಶಾಲೆಗಳು ಮುಚ್ಚಿದ್ದಾಗ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಈಗ ಶಾಲೆಗಳನ್ನು ತೆರೆಯಲಾಗಿದೆ. 6 ರಿಂದ 8ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲಾಗಿದೆ… ಊಟದ ಜೊತೆಗೆ ಮಕ್ಕಳಿಗೆ ಶಿಕ್ಷಣ ದೊರೆಯುತ್ತದೆ” ಎಂದು ಕೊಠಾರಿ ಹೇಳಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ನ್ಯಾಯಾಲಯವು, "ಮಧ್ಯಾಹ್ನದ ಬಿಸಿಯೂಟ ನೀಡಿದರೆ ಮಕ್ಕಳ ಹಾಜರಾತಿ ಮತ್ತು ನೋಂದಣಿ ಹೆಚ್ಚಾಗಲಿದೆ. ಮಕ್ಕಳು ಶಿಕ್ಷಣ ವ್ಯವಸ್ಥೆಗೆ ಮರಳುತ್ತಾರೆ. ಊಟ ನೀಡುವ ನಿಮ್ಮ ಜವಾಬ್ದಾರಿಯಿಂದ ನೀವೇಕೆ ತಪ್ಪಿಸಿಕೊಳ್ಳುತ್ತಿದ್ದೀರಿ? ನಿಮ್ಮದು ಸ್ವತಂತ್ರ ಸರ್ಕಾರವಾಗಿದ್ದು, ಕೇಂದ್ರ ಸರ್ಕಾರವನ್ನು ನೀವು ಪ್ರಶ್ನಿಸಬಹುದು. ಕ್ರಮವಹಿಸಿ” ಎಂದು ಹೇಳಿದೆ.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. “ಆರೋಗ್ಯದ ವಿಚಾರವಾದ ಸಾಂಕ್ರಾಮಿಕತೆಯನ್ನು ನಿರ್ವಹಿಸುವುದು ಬಹುದೊಡ್ಡ ಸವಾಲು. ಹಾಗೆಂದು ಅದು ಇನ್ನಷ್ಟು ಸವಾಲುಗಳಿಗೆ ಅವಕಾಶ ಮಾಡಿಕೊಡಬಾರದು. ಈಗ ನೀವು ಮಕ್ಕಳಿಗೆ ಬಿಸಿಯೂಟ ನೀಡುವುದನ್ನು ಆರಂಭಿಸಿ. ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಕೋರುವ ಅಗತ್ಯವಿಲ್ಲ” ಎಂದು ಪೀಠ ಪುನರುಚ್ಚರಿಸಿದೆ.

ಭೌತಿಕವಾಗಿ ಶಾಲೆಗೆ ಹೋಗುತ್ತಿರುವ 6ರಿಂದ 8ನೇ ತರಗತಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತದೆಯೇ ಎಂಬುದಕ್ಕೆ ರಾಜ್ಯ ಸರ್ಕಾರ ಪ್ರತಿಕ್ರಿಯಿಸಬೇಕು. ಈ ಸಂಬಂಧ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ. ಮಾರ್ಚ್‌ 31ಕ್ಕೆ ವಿಚಾರಣೆ ಮುಂದೂಡಲಾಗಿದೆ.

Kannada Bar & Bench
kannada.barandbench.com