ಅಗತ್ಯ ಸೌಲಭ್ಯಗಳು ಹಾಗೂ ಅನುಕೂಲಗಳನ್ನು ಪಡೆಯಲು ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯ ಎಂಬ ಷರತ್ತನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ (ಡಾ. ಜೇಕಬ್ ಪುಲಿಯೆಲ್ ವರ್ಸಸ್ ಭಾರತ ಸರ್ಕಾರ).
ಯಾವುದೇ ರೀತಿಯಲ್ಲಿ ಅಗತ್ಯ ಸೇವೆ ಮತ್ತು ಸೌಲಭ್ಯ ಪಡೆಯಲು ಕೋವಿಡ್‌ಗೆ ಲಸಿಕೆ ಪಡೆಯುವುದು ಕಡ್ಡಾಯ ಎಂಬ ಪೂರ್ವ ಷರತ್ತು ವಿಧಿಸುವುದು ಜನರ ಹಕ್ಕುಗಳ ಉಲ್ಲಂಘನೆಯಾಗಲಿದ್ದು, ಅದು ಅಸಾಂವಿಧಾನಿಕ ಎಂದು ರೋಗ ನಿರೋಧಕ ಚುಚ್ಚುಮದ್ದಿಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ ಮಾಜಿ ಸದಸ್ಯರಾದ ಡಾ. ಜೇಕಬ್ ಪುಲಿಯೆಲ್ ಮನವಿಯಲ್ಲಿ ತಿಳಿಸಿದ್ದಾರೆ.
“ದೇಶದ ವಿವಿಧೆಡೆ ಉದ್ಯೋಗ ನಷ್ಟ ಭೀತಿ ಅಥವಾ ಅಗತ್ಯ ಸೇವೆಗಳಿಂದ ವಂಚಿತವಾಗುವ ಆತಂಕವನ್ನು ಜನರಲ್ಲಿ ಭಿತ್ತಿ ಒತ್ತಾಯಪೂರ್ವಕವಾಗಿ ಅವರು ಲಸಿಕೆ ಪಡೆಯುವಂತೆ ಮಾಡುವುದು ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ. ಅದರಲ್ಲೂ ಲಸಿಕೆ ತಯಾರಿಕೆಗೆ ತುರ್ತು ಒಪ್ಪಿಗೆ ನೀಡಲಾಗಿದ್ದು, ಅಗತ್ಯ ಮತ್ತು ಸಮಂಜಸವಾದ ಪರೀಕ್ಷೆ ಮತ್ತು ಲಸಿಕಾ ಪ್ರಯೋಗ ದತ್ತಾಂಶ ಮತ್ತು ಲಸಿಕೆ ನೀಡಿದ ದತ್ತಾಂಶದ ಬಗ್ಗೆ ಪಾರದರ್ಶಕತೆ ಇಲ್ಲದಿರುವಾಗ ಹೀಗೆ ಮಾಡಬಾರದು” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ಲಸಿಕೆ ಸ್ವಯಂಪ್ರೇರಿತವಾಗಿ ಪಡೆಯುವಂಥದ್ದು ಎಂದು ಹಲವು ಮಾಹಿತಿ ಹಕ್ಕು ಅರ್ಜಿಗಳಿಗೆ ಸರ್ಕಾರ ಉತ್ತರಿಸಿದೆ. ಇದೇ ಸಂದರ್ಭದಲ್ಲಿ ಹಲವು ಪ್ರಾಧಿಕಾರಿಗಳು ಲಸಿಕೆ ಪಡೆಯುವುದು ಕಡ್ಡಾಯ ಎನ್ನುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಕೆ ಎಸ್ ಪುಟ್ಟಸ್ವಾಮಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. "ವ್ಯಕ್ತಿಯ ʼಸ್ವಾಯತ್ತತೆʼಯ ಹಕ್ಕು ಆತ/ಆಕೆಯ ಆರೋಗ್ಯದ ವಿಷಯಕ್ಕೆ ಬಂದಾಗ 'ತಾನೇ ನಿರ್ಧರಿಸುವ' ಹಕ್ಕಾಗಿದ್ದು, ಸಂವಿಧಾನದ 21ನೇ ವಿಧಿಗೆ ಅನುಗುಣವಾಗಿದ್ದು, ಅದು ಅವರ ಗೌಪ್ಯತೆಯ ಹಕ್ಕಿನ ಭಾಗವಾಗಿದೆ" ಎಂದು ವಿವರಿಸಲಾಗಿದೆ.
ಸದ್ಯ ಜನರಿಗೆ ನೀಡಲಾಗುತ್ತಿರುವ ಲಸಿಕೆಯ ಸಂರಕ್ಷಣೆ ಮತ್ತು ಪರಿಣಾಮಕಾರಿತನದ ಬಗ್ಗೆ ಇನ್ನೂ ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆದಿಲ್ಲ. ತುರ್ತು ಬಳಕೆ ಅನುಮತಿ ಅಡಿ ಪರವಾನಗಿ ಕಲ್ಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ದತ್ತಾಂಶವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಒಕ್ಕೂಟ (ಐಸಿಎಂಆರ್) ರೂಪಿಸಿರುವ ಕ್ಲಿನಿಕಲ್ ಔಷಧ ಪ್ರಯೋಗ ದತ್ತಾಂಶ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದ ಮಾರ್ಗದರ್ಶಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತದಲ್ಲಿ ಲಸಿಕೆ ತಯಾರಿಕೆಗೆ ಪರವಾನಗಿ ನೀಡಿರುವುದು ಮತ್ತು ಭವಿಷ್ಯದಲ್ಲಿ ಲಸಿಕೆಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುವ ಸಾಧ್ಯತೆಯನ್ನು ಸಹ ಇದು ತಡೆಯುತ್ತದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರತೀಯ ಔಷಧ ನಿಯಂತ್ರಕರು ನೀಡಿದ ತುರ್ತು ಬಳಕೆಯ ದೃಢೀಕರಣದ ಅಡಿಯಲ್ಲಿ ಭಾರತೀಯರಿಗೆ ನೀಡಲಾಗುವ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಕ್ಲಿನಿಕಲ್ ಔಷಧ ಪ್ರಯೋಗ ದತ್ತಾಂಶದಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ ಎಂದು ವಿವರಿಸಲಾಗಿದೆ.
“ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೋವ್ಯಾಕ್ಸಿನ್ ಅಥವಾ ಭಾರತೀಯ ಸಿರಂ ಸಂಸ್ಥೆ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಗಳಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಸಂಪೂರ್ಣವಾದ ಗೌಪ್ಯತೆ ಕಾಪಾಡಿದ್ದು, ಲಸಿಕೆ ತಯಾರಿಕೆಗೆ ಸಂಬಂಧಿಸಿದಂತೆ ಯಾವುದೇ ದತ್ತಾಂಶ ಬಹಿರಂಗಪಡಿಸಿಲ್ಲ” ಎನ್ನಲಾಗಿದೆ.
ಹೀಗಾಗಿ, ಲಸಿಕೆ ಪಡೆಯುವವರನ್ನು ಸೂಕ್ಷ್ಮವಾಗಿ ಗಮನಿಸಿ, ಪ್ರತಿಕೂಲ ಬೆಳವಣಿಗೆಗಳನ್ನು ಅಧಿಕಾರಿಗಳು ಸಾರ್ವಜನಿಕವಾಗಿ ದಾಖಲಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಿ ಹೇಳಲಾಗಿದೆ. “ಲಸಿಕೆ ಮೌಲ್ಯಮಾಪನವಾಗದೇ ಅದನ್ನು ನೀಡದಂತೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಅಸ್ಟ್ರಾಜೆನಿಕಾ (ಭಾರತದಲ್ಲಿ ಕೋವಿಶೀಲ್ಡ್) ಲಸಿಕೆಗೆ ಡೆನ್ಮಾರ್ಕ್ ಸಂಪೂರ್ಣ ನಿಷೇಧ ವಿಧಿಸಿದೆ” ಎಂದು ಹೇಳಲಾಗಿದೆ.
59ನೇ ಸಂಸದೀಯ ಸ್ಥಾಯಿ ಸಮಿತಿ ವರದಿಯಲ್ಲಿ ಲಸಿಕೆಗೆ ಸಂಬಂಧಿಸಿದಂತೆ ವಿಷಯ ತಜ್ಞರ ಸಮಿತಿಯ ಸಭೆಯ ಪ್ರಮುಖ ಅಂಶಗಳು ಹಾಗೂ ಎನ್‌ಟಿಜಿಎಐ (ಲಸಿಕೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ) ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಕೇಂದ್ರೀಯ ಔಷಧ ನಿಯಂತ್ರಕ ಸಂಸ್ಥೆಗೆ ಸೂಚಿಸುವಂತೆಯೂ ಕೋರಲಾಗಿದೆ.