Mid-day meal scheme
Mid-day meal scheme  
ಸುದ್ದಿಗಳು

ಅಸಹಾಯಕ ಮಕ್ಕಳು ಮತ್ತು ಹಾಲುಣಿಸುವ ತಾಯಂದಿರಿಗೆ ಕೋವಿಡ್ ಕೇಂದ್ರಿತ ಪೌಷ್ಟಿಕಾಂಶ ಕಾರ್ಯತಂತ್ರ: ಸುಪ್ರೀಂಗೆ ಮನವಿ

Bar & Bench

ಕೊರೊನಾ ಸಾಂಕ್ರಾಮಿಕದಿಂದಾಗಿ ಶಾಲೆಗಳು ಮತ್ತು ಅಂಗನವಾಡಿಗಳು ಮುಚ್ಚಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಸಹಾಯಕ ಮಕ್ಕಳು ಮತ್ತು ಹಾಲುಣಿಸುವ ತಾಯಂದಿರಿಗೆ ಏಕರೂಪದ ಕೋವಿಡ್ ಕೇಂದ್ರಿತ ಪೌಷ್ಟಿಕತೆ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ಪ್ರಯಾಸ್ ಜುವೆನೈಲ್ ಏಡ್ ಸೆಂಟರ್ ಮತ್ತು ಮೇಕ್ ಎನ್ವಿರಾನ್ಮೆಂಟ್ ಗ್ರೀನ್ ಎಗೈನ್ (ಮೆಗಾ) ಫೌಂಡೇಶನ್ ಅರ್ಜಿ ಸಲ್ಲಿಸಿವೆ. 'ಕೋವಿಡ್- 19ನಿಂದಾಗಿ ಸೂಕ್ತ ತಯಾರಿಯಿಲ್ಲದೆ ಹಠಾತ್ ಲಾಕ್‌ಡೌನ್ ಮಾಡಿದ ಪರಿಣಾಮ ಇದು ದಶಕಗಳ ಕಾಲ ಹೊಡೆತ ನೀಡಲಿದೆ, ಅಪೌಷ್ಟಿಕತೆ ಕಡಿಮೆ ಮಾಡುವಲ್ಲಿ ಮಂದಗತಿಯ ಪ್ರಗತಿಗೆ ಕಾರಣವಾಗುತ್ತದೆ' ಎಂದು ಅರ್ಜಿದಾರರ ಪರ ವಕೀಲರಾದ ಮೋಹಿನಿ ಪ್ರಿಯಾ ವಾದ ಮಂಡಿಸಿದರು.

ಮಾರ್ಚ್ 18 ರಂದು ಸುಪ್ರೀಂ ಕೋರ್ಟ್ ಇದೇ ವಿಷಯವನ್ನು ಸ್ವಯಂ ಪ್ರೇರಿತವಾಗಿ ಪರಿಗಣನೆಗೆ (Suo motu cognizance) ತೆಗೆದುಕೊಂಡಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಾಲಕಾಲಕ್ಕೆ ವಿವಿಧ ಮಾರ್ಗಸೂಚಿಗಳನ್ನು ನೀಡಲು ಇದು ಕಾರಣವಾಯಿತು. ಆದರೂ ಸೂಕ್ತ ಮೇಲ್ವಿಚಾರಣೆಯ ಕೊರತೆ ಮತ್ತು ಹಲವಾರು ಆಡಳಿತಾತ್ಮಕ ಅಡಚಣೆಗಳಿಂದಾಗಿ ತಳಮಟ್ಟದಲ್ಲಿ ಮಾರ್ಗಸೂಚಿಗಳನ್ನು ಜಾರಿಗೆ ತಂದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಲಾಕ್‌ಡೌನ್ ಪರಿಣಾಮ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಡಿ (ಐಸಿಡಿಎಸ್) ಮನೆಗೆ ಒಯ್ಯುವ ಪಡಿತರಕ್ಕಾಗಿ (ಟೇಕ್ ಹೋಮ್ ರೇಷನ್) ಕಚ್ಚಾ ವಸ್ತುಗಳನ್ನು ಸಿದ್ಧಪಡಿಸುವ ಉತ್ಪಾದನಾ ಘಟಕಗಳು ತಾತ್ಕಾಲಿಕವಾಗಿ ಮುಚ್ಚಿವೆ. ಇದಲ್ಲದೆ, ಅನೇಕ ಪ್ರದೇಶಗಳಲ್ಲಿ ಸರಕುಗಳ ಸಾಗಣೆಯನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ, ಇದು ಅನೇಕ ಸ್ಥಳಗಳಲ್ಲಿ ಟಿಎಚ್ಆರ್ ವಿತರಣೆಯ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

" ಸೀಮಿತ ಅಥವಾ ಪೂರ್ಣ ಪ್ರಮಾಣದಲ್ಲಿ ಪಡಿತರ ಫಲಾನುಭವಿಗಳಿಗೆ ತಲುಪುತ್ತಿರುವ ಸ್ಥಳಗಳಲ್ಲಿ ಕೂಡ ಅದು ನಿಜವಾಗಿಯೂ ಮಕ್ಕಳು ಮತ್ತು ಮಹಿಳೆಯರಿಗೆ ದೊರಕದೆ ಇರುವ ಹಾಗೂ ತಲುಪದೇ ಇರುವ ಗಂಭೀರ ಅಪಾಯ ಇದೆ. ಕುಟುಂಬದಲ್ಲಿ ಈ ಆಹಾರ ಹಂಚಿಹೋಗಿ ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ಮಹಿಳೆಯರ ಪೌಷ್ಠಿಕಾಂಶದ ಸ್ಥಿತಿ ಇನ್ನಷ್ಟು ಹದಗೆಟ್ಟು ತೀವ್ರ ಅಪೌಷ್ಟಿಕತೆಗೆ ಎಡೆ ಮಾಡಿಕೊಡಬಹುದು”
- ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿ

ಐಸಿಡಿಎಸ್ ರೀತಿಯ ಸರ್ಕಾರಿ ಪೌಷ್ಠಿಕಾಂಶ ಯೋಜನೆಗಳ ಜೀವನಾಡಿಯಾಗಿರುವ ಆಶಾ (Accredited Social Health Activists) ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಸೇವೆಗಳನ್ನು ಕೋವಿಡ್-19 ವಿಚಕ್ಷಣಾ ಚಟುವಟಿಕೆಗಳಿಗೆ ಬಳಸಲಾಯಿತು. ಇದು ಮಕ್ಕಳು ಮತ್ತು ಅವರ ಪೌಷ್ಟಿಕತೆ ಸ್ಥಿತಿ ನಿರ್ಲಕ್ಷಿತವಾಗಲು ಕಾರಣವಾಯಿತು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

"ವಲಸೆ ಹೋಗುವ ಕುಟುಂಬಗಳಲ್ಲಿನ ಮಕ್ಕಳು ಮತ್ತು ಮಹಿಳೆಯರು ಈಗಾಗಲೇ ಪೂರಕ ಪೌಷ್ಠಿಕಾಂಶ ಸೇವೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಏಕೆಂದರೆ ತಮ್ಮ ಸ್ವಂತ ರಾಜ್ಯಗಳಲ್ಲಿ ಇಲ್ಲದ ಅವರು ಪಡಿತರ ಪಡೆಯಲು ಕೆಲಸದ ಸ್ಥಳದಲ್ಲಿ ಫಲಾನುಭವಿಗಳಾಗಿ ನೋಂದಯಿಸಿಕೊಳ್ಳಬೇಕಾಗುತ್ತದೆ. ಸಂಪನ್ಮೂಲ ಬಿಕ್ಕಟ್ಟು ಉಂಟಾದಾಗ, ವಲಸೆ ಬಂದ ಜನರಿಗೆ ಸೂಕ್ತ ರೀತಿಯಲ್ಲಿ ಆಹಾರ ಪೂರೈಸುವುದು ದೊಡ್ಡ ಸವಾಲಿನ ಕೆಲಸ. ಇದು ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯ ಅಪಾಯವನ್ನು ಹೆಚ್ಚುಮಾಡುತ್ತದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ಕೇಂದ್ರಿತ ಪೌಷ್ಠಿಕಾಂಶದ ಕಾರ್ಯತಂತ್ರದ ಜೊತೆಗೆ, ಕೋವಿಡ್- 19 ಸಾಂಕ್ರಾಮಿಕ ರೋಗದಿಂದ ಉದ್ಭವಿಸುವ ಅಪೌಷ್ಟಿಕತೆಯ ಭೀತಿಯನ್ನು ನಿವಾರಿಸಲು ನಾಗರಿಕ ಸಮಾಜ ಸಂಸ್ಥೆಗಳು (ಸಿಎಸ್ಒ), ಲಾಭರಹಿತ ಸಂಸ್ಥೆಗಳು (ಎನ್ ಪಿಒ), ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಮತ್ತು ನೀತಿ ಆಯೋಗದಲ್ಲಿ ನೋಂದಾಯಿತಗೊಂಡ ಸ್ವಯಂಸೇವಾ ವಲಯವನ್ನು ಒಳಗೊಳ್ಳುವಂತಹ ಕಾರ್ಯನೀತಿ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಆಹಾರ ಮತ್ತು ಪೌಷ್ಠಿಕಾಂಶದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸೂಕ್ತ ಸ್ಪಂದನೆ ಒದಗಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.