Bombay High Court, Remdesivir 
ಸುದ್ದಿಗಳು

ಸೆಲೆಬ್ರಿಟಿಗಳು, ರಾಜಕಾರಣಿಗಳು ಔಷಧ ಪೂರೈಸಿ ಮೈಲೇಜ್‌ ಗಿಟ್ಟಿಸಲು ಅವಕಾಶ ನೀಡಲಾಗದು: ಬಾಂಬೆ ಹೈಕೋರ್ಟ್‌

ಔಷಧಗಳನ್ನು ಕೇಂದ್ರವು ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಹೀಗಿರುವಾಗ ಕೆಲವರಿಗೆ ಔಷಧ ಹೇಗೆ ಸಿಗುತ್ತಿದೆ ಎಂದು ಆಲೋಚನಾ ಮಗ್ನವಾದ ಪೀಠವು, ಈ ಸಂಬಂಧ ಕ್ರಮ ಕೈಗೊಂಡಿರುವುದರ ಕುರಿತು ಪ್ರತಿಕ್ರಿಯಿಸಲು ರಾಜ್ಯ ಮತ್ತು ಕೇಂದ್ರಕ್ಕೆ ಸೂಚಿಸಿತು.

Bar & Bench

ಕೋವಿಡ್‌ ಸೋಂಕಿತರು ಅಗತ್ಯ ಔಷಧಗಳು ಸಿಗದೇ ಪರದಾಡುತ್ತಿರುವ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಔಷಧ ಸಂಗ್ರಹಿಸಿ ಅವುಗಳನ್ನು ಜನರಿಗೆ ಹಂಚುವ ಮೂಲಕ ಮೈಲೇಜ್‌ ಗಿಟ್ಟಿಸುತ್ತಿರುವುದನ್ನು ಬಾಂಬೆ ಹೈಕೋರ್ಟ್‌ ಬುಧವಾರ ಗಂಭೀರವಾಗಿ ಆಕ್ಷೇಪಿಸಿದೆ.

ಇಂಥ ಚಟುವಟಿಕೆ ನಡೆಯುವುದಕ್ಕೆ ಅವಕಾಶ ನೀಡಲಾಗದು ಎಂದಿರುವ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕೋವಿಡ್‌ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್‌ ಔಷಧ ಅದರಲ್ಲೂ ಅದರ ಪೂರೈಕೆ ಕೊರತೆ ಕಾಡುತ್ತಿರುವಾಗ ಅದನ್ನು ರಾಜಕಾರಣಿಗಳು ಮತ್ತು ಸಿನಿಮಾ ತಾರೆಯರು ಪರ್ಯಾಯ ಮಾರ್ಗದ ಮೂಲಕ ಹಂಚಿಕೆ ಮಾಡುತ್ತಿರುವುದರ ಕುರಿತು ಪೀಠವು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿವರಣೆ ಬಯಸಿತ್ತು.

ಎರಡು ಸೆಲಿಬ್ರಿಟಿ ಫೌಂಡೇಶನ್‌ಗಳಾದ ಜೀಶನ್‌ ಸಿದ್ದಿಕಿ ಮತ್ತು ಸೂದ್‌ ಚಾರಿಟಿ ಫೌಂಡೇಶನ್‌ಗಳಿಗೆ ಷೋಕಾಸ್‌ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬುಧವಾರ ಪೀಠಕ್ಕೆ ತಿಳಿಸಲಾಗಿದೆ. ಆದರೆ, ತನ್ನ ನಿರ್ದೇಶನಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಯಿಂದ ನ್ಯಾಯಾಲಯ ಸಂತುಷ್ಟವಾಗಲಿಲ್ಲ.

ಬ್ಲ್ಯಾಕ್‌ ಫಂಗಸ್‌ ರೋಗ ಸೇರಿದಂತೆ ಕೋವಿಡ್‌ ಔಷಧಗಳ ಹಂಚಿಕೆ ಕುರಿತಾಗಿ ಪ್ರಕರಣ ಇರುವಾಗ ಕೇವಲ ರೆಮ್‌ಡಿಸಿವಿರ್‌ ಕುರಿತಾಗಿ ಮಾತ್ರ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲ ರಾಜೇಶ್‌ ಇನಾಂದಾರ್‌ ವಾದಿಸಿದರು. “ಫಾರ್ಮಸಿ ನಡೆಸುತ್ತಿದ್ದಾರೇನೋ” ಎಂಬ ರೀತಿಯಲ್ಲಿ ಇಂದಿಗೂ ಆ ಔಷಧಗಳನ್ನು ಸೆಲೆಬ್ರಿಟಿಗಳು ಹಂಚಿಕೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇನಾಂದಾರ್‌ ವಾದಕ್ಕೆ ಸಮ್ಮತಿಸಿದ ಪೀಠವು ನ್ಯಾಯಾಲಯದ ಆದೇಶದ ಬಗ್ಗೆ ಅಥವಾ ನ್ಯಾಯಾಲಯವು ಪ್ರಸಿದ್ಧ ವ್ಯಕ್ತಿಗಳಿಂದ ಹೇಳಿಕೆಯನ್ನು ನಿರೀಕ್ಷಿಸುತ್ತಿದೆ ಎಂಬ ಅಂಶದ ಬಗ್ಗೆ ಯಾವುದೇ ಸರ್ಕಾರದಿಂದ ಉಲ್ಲೇಖವಿಲ್ಲ ಎಂದು ಪೀಠ ಹೇಳಿತು.

ಮುಂದಿನ ವಿಚಾರಣೆಯ ವೇಳೆಗೆ ನ್ಯಾಯಾಲಯದ ನಿರ್ದೇಶನ ಪಾಲಿಸುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಜರಾತಿಗೆ ಸೂಚಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ನ್ಯಾಯಾಲಯದ ಆದೇಶ ಪಾಲನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿದೆ.

ಕಾಳಸಂತೆಯಲ್ಲಿ ಔಷಧ ಮಾರಾಟ ಮತ್ತು ಔಷಧಗಳ ಅಕ್ರಮ ದಾಸ್ತಾನು ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಕಲ್ಪಿಸಿದೆ ಎಂದು ಹೆಚ್ಚುವರಿ ಸಾಲಿಸಿಟಿರ್‌ ಜನರಲ್‌ ಅನಿಲ್‌ ಸಿಂಗ್‌ ಹೇಳಿದರು.

ಔಷಧ ಉತ್ಪಾದಕರು ಕೇಂದ್ರ ಸರ್ಕಾರದ ವ್ಯಾಪ್ತಿ ಮತ್ತು ನಿಯಂತ್ರಣಕ್ಕೆ ಒಳಪಡುವುದರಿಂದ ಅವರಿಂದ ಕೇಂದ್ರ ಸರ್ಕಾರ ವರದಿ ಸಂಗ್ರಹಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ. “ದೊಡ್ಡ ಮಟ್ಟದಲ್ಲಿ ಔಷಧಿಯನ್ನು ಹಂಚಿಕೆ ಮಾಡಲಾಗುತ್ತಿದೆ. ಆರೋಪಿಗಳು ಔಷಧವನ್ನು ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸಿಲ್ಲ. ಹೀಗಾಗಿ ಉತ್ಪಾದಕರಿಂದ ಹೇಳಿಕೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಬೃಹತ್‌ ಮಟ್ಟದಲ್ಲಿ ಸೆಲೆಬ್ರಿಟಿಗಳು ಹೇಗೆ ಔಷಧಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಇರಾದೆಯನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. “ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಔಷಧ ಹಂಚಿಕೆ ಮಾಡುತ್ತದೆ. ಅದನ್ನು ರಾಜ್ಯಗಳು ಪಡೆದುಕೊಳ್ಳುತ್ತವೆ. ಪರಿಸ್ಥಿತಿ ಹೀಗಿರುವಾಗ ಈ ಸೆಲೆಬ್ರಿಟಿಗಳು ಎಲ್ಲಿಂದ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ” ಎಂದು ನ್ಯಾಯಾಲಯ ಪ್ರಶ್ನಿಸಿತು.

ಕಾನೂನುಬಾಹಿರವಾಗಿ ಔಷಧಿಗಳನ್ನು ಸಂಗ್ರಹಿಸುವ ವಿಧಾನವು ಕೇಂದ್ರ ಸರ್ಕಾರದ ಹಂಚಿಕೆ ಆದೇಶಗಳ ಉದ್ದೇಶವನ್ನು, ರಾಜ್ಯವು ತಮ್ಮ ನಾಗರಿಕರಿಗೆ ಅವುಗಳ ವಿತರಣೆಯ ಮೂಲಕ ನೀಡಬಹುದಾದ ಪ್ರಯೋಜನಗಳನ್ನು ಮತ್ತು ಅಗತ್ಯವಿರುವ ನಾಗರಿಕರಿಗೆ ಲಭ್ಯತೆಯನ್ನು ವಿಫಲಗೊಳಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಸಂಬಂಧ ಮೇ 25ರ ವರೆಗೆ ಸರ್ಕಾರಿ ಸಂಸ್ಥೆಗಳಿಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ.