ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ, ಅತ್ಯಂತ ಕೊರತೆ ಇರುವ ರೆಮ್‌ಡಿಸಿವಿರ್ ಔಷಧವು ರಾಜಕಾರಣಿಗಳು ಮತ್ತು ಸಿನಿಮಾ ತಾರೆಯರ ಬಳಿ ಪರ್ಯಾಯ ಮಾರ್ಗದ ಮೂಲಕ ದೊರಕುತ್ತಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವರಣೆಯನ್ನು ಬುಧವಾರ ಬಾಂಬೆ ಹೈಕೋರ್ಟ್ ಬಯಸಿದೆ.
ಅಂತಹ ಪರ್ಯಾಯ ಮಾರ್ಗಗಳ ಮೂಲಕ ಔಷಧಿ ಲಭ್ಯವಾಗುವಂತೆ ಮಾಡುವುದು ಆ ಔಷಧಿಗಳ ಅಕ್ರಮ ಸಂಗ್ರಹ / ಅಕ್ರಮ ದಾಸ್ತಾನಿಗೆ ಸಮನಾಗಿರುತ್ತದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಈ ವಿಚಾರವು ತಮ್ಮನ್ನು ತೀವ್ರವಾಗಿ ಕಂಗೆಡಿಸಿದೆ ಎಂದಿದ್ದಾರೆ.
“ಸುಪ್ರೀಂ ಕೋರ್ಟ್ ಮತ್ತು ದೇಶದ ವಿವಿಧ ಹೈಕೋರ್ಟ್‌ಗಳ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಹಂಚಿಕೆ ಮಾಡುವಂಥ ರೆಮ್‌ಡಿಸಿವಿರ್‌ನಂಥ ಔಷಧವು ರಾಜಕಾರಣಿಗಳು ಮತ್ತು ಸಿನಿಮಾ ತಾರೆಯ ಬಳಿ ಖಾಸಗಿಯಾಗಿ ಹಂಚಿಕೆಗೆ ದೊರೆಯುತ್ತಿದೆ ಎಂಬುದನ್ನು ತಿಳಿದು ನಮಗೆ ಆತಂಕವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ರೆಮ್‌ಡಿಸಿವಿರ್ ನಂತಹ ಔಷಧಿಗಳನ್ನು ಅಕ್ರಮವಾಗಿ ಸಂಗ್ರಹಿಸುವುದರಿಂದ ಅಂತಹ ಔಷಧಿಗಳ ತುರ್ತು ಅಗತ್ಯವಿರುವ ರೋಗಿಗಳಲ್ಲಿ ಗಂಭೀರ ಪೂರ್ವಾಗ್ರಹಗಳಿಗೆ ಕಾರಣವಾಗಬಹುದು ಎಂಬುದು ನಮ್ಮ ಅಭಿಪ್ರಾಯ ಎಂದು ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್‌ನ ದಯನೀಯ ನಿರ್ವಹಣೆ ಕುರಿತು ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಇತ್ತೀಚೆಗೆ ಪೀಠ ಕೈಗೊಂಡಿದ್ದ ವೇಳೆ ಮೇಲಿನ ಸಂಗತಿಗಳನ್ನು ಗಮನಿಸಿತು. ರೆಮ್‌ಡಿಸಿವಿರ್ ಮತ್ತು ಟೊಸಿಲಿಜುಮಾಬ್ ಔಷಧಿಗಳ ಸಂಗ್ರಹ ಮತ್ತು ಪೂರೈಕೆಯನ್ನು ಹೇಗೆ ಮಾಡಲಾಗುತ್ತಿದೆ ಎಂಬುದರ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿ ವಕೀಲ ರಾಜೇಶ್ ಇನಾಂದಾರ್ ಎಂಬವರು ಮನವಿ ಸಲ್ಲಿಸಿದ್ದರು.
ರಾಜಕಾರಣಿಗಳು ಮತ್ತು ಸಿನಿಮಾ ತಾರೆಯರು ರೆಮ್‌ಡಿಸಿವಿರ್ ಔಷಧವನ್ನು ಪೂರೈಸುತ್ತಿರುವ ದಂಧೆಯಲ್ಲಿ ತೊಡಗಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪೋಸ್ಟ್‌ಗಳನ್ನು ಹಾಕಲಾಗಿದೆ ಎಂದು ಇನಾಂದಾರ್ ಅವರು ಪೀಠದ ಗಮನಸೆಳೆದರು.
“ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಮುಖಂಡರು ಮತ್ತು ಸಿನಿಮಾ ತಾರೆಯರು ರೆಮ್‌ಡಿಸಿವಿರ್ ಔಷಧಿ ಪೂರೈಕೆ ಮಾಡುತ್ತಿರುವುದು ಅದರ ಲಾಭ ಪಡೆದ ಜನರು ಔಷಧಿ ಪೂರೈಸಿದವರಿಗೆ ಕೃತಜ್ಞತೆ ಸಲ್ಲಿಸುವ ಸಂದೇಶಗಳು ವ್ಯಾಪಕವಾಗಿವೆ” ಎಂಬುದನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.