Supreme Court, Vaccine, Modi 
ಸುದ್ದಿಗಳು

[ಕೋವಿಡ್‌ ಲಸಿಕೆ] ಸುಪ್ರೀಂ ಕೋರ್ಟ್‌ ಹೇಳಿದ್ದೇನು, ಪ್ರಧಾನ ಮಂತ್ರಿ ಪ್ರತಿಕ್ರಿಯಿಸಿದ್ದು ಹೇಗೆ? ಇಲ್ಲಿದೆ ವಿವರ

ಲಸಿಕಾ ನೀತಿಯ ಬಗ್ಗೆ ಮೇ 31ರಂದು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಗಂಭೀರ ಅಭಿಪ್ರಾಯವು ಕೇಂದ್ರ ಸರ್ಕಾರವು ತನ್ನ ಲಸಿಕಾ ನೀತಿಯ ಬಗ್ಗೆ ಮರು ಚಿಂತನೆಗೆ ಹಚ್ಚಿರುವ ಸಾಧ್ಯತೆ ಢಾಳಾಗಿ ಕಂಡುಬರುತ್ತಿದೆ.

Bar & Bench

ಸುಪ್ರೀಂ ಕೋರ್ಟ್‌ ಕಳೆದ ಮೇ 31ರಂದು ಕೇಂದ್ರ ಸರ್ಕಾರದ ಕೋವಿಡ್‌ ಲಸಿಕಾ ನೀತಿಯಲ್ಲಿನ ಸಮಸ್ಯೆ ಮತ್ತು ತೊಂದರೆಗಳ ಬಗ್ಗೆ ಕಟುವಾದ ಪದಗಳನ್ನು ಬಳಸಿ ತೀರ್ಪು ಪ್ರಕಟಿಸಿತ್ತು. ಇದರ ಜೊತೆಗೇ ಇನ್ನೂ ಹಲವು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ತನ್ನ ಲಸಿಕಾ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವುದು ಇಂದಿನ ಪ್ರಧಾನ ಮಂತ್ರಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ಪಷ್ಟವಾಗಿದೆ.

ಹಿಂದಿನ ಲಸಿಕಾ ನೀತಿಯ ಪ್ರಕಾರ, ಮೇ 1ರಿಂದ ಶೇ. 25ರಷ್ಟು ಲಸಿಕೆಯನ್ನು ನೇರವಾಗಿ ರಾಜ್ಯಗಳು ಪಡೆಯುತ್ತಿದ್ದರೆ, ಶೇ. 25ರಷ್ಟು ಲಸಿಕೆಯನ್ನು ಖಾಸಗಿಯವರು ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಇನ್ನುಳಿದ ಶೇ. 50ರಷ್ಟು ಲಸಿಕೆ ಕೇಂದ್ರ ಸರ್ಕಾರಕ್ಕೆ ಹೋಗುತ್ತಿತ್ತು.

ಈಗ ಕೇಂದ್ರ ಸರ್ಕಾರವು ರಾಜ್ಯಗಳ ಜವಾಬ್ದಾರಿಯನ್ನೂ ತಾನೇ ತೆಗೆದುಕೊಳ್ಳುತ್ತಿದ್ದು, ಶೇ. 75ರಷ್ಟು ಲಸಿಕೆಯನ್ನು ಖರೀದಿಸಿ ಉಚಿತವಾಗಿ ಜನರಿಗೆ ನೀಡಲಿದೆ. ಉಳಿದ ಶೇ. 25ರಷ್ಟು ಲಸಿಕೆಯನ್ನು ಖಾಸಗಿ ಸಂಸ್ಥೆಗಳು ಖರೀದಿಸಲಿವೆ.

ಇಷ್ಟುಮಾತ್ರವಲ್ಲದೇ, 18-44 ವಯೋಮಾನದವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಹಿಂದೆ ಅದನ್ನು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದ್ದು, ಹಲವು ರಾಜ್ಯಗಳು ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ್ದವು. ಸೋಮವಾರ ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಸಿಕಾ ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ಘೋಷಿಸಿದರು.

ಕೇಂದ್ರ ಸರ್ಕಾರದ ಲಸಿಕಾ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು, ಆನಂತರ ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಮಾಡಿದ ಬದಲಾವಣೆಗಳೇನು? ಈ ಬಗ್ಗೆ ಇಲ್ಲಿದೆ ಮಹತ್ವದ ವಿವರ:

ಸುಪ್ರೀಂ ಕೋರ್ಟ್‌: 18-44 ವಯೋಮಾನದವರು ಹಣ ಪಾವತಿಸಿ ಲಸಿಕೆ ಪಡೆಯಬೇಕೆನ್ನುವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳ ಹಾಗೂ ಖಾಸಗಿ ಆಸ್ಪತ್ರೆಗಳ ನೀತಿಯು ಮೇಲ್ನೋಟಕ್ಕೇ ಗೋಚರಿಸುವಂತೆ ಮನಸೋಇಚ್ಛೆಯಿಂದ ಕೂಡಿದ್ದು, ತರ್ಕಹೀನವಾಗಿದೆ.

ಪ್ರಧಾನ ಮಂತ್ರಿ: ಜೂನ್ 21ರ ಯೋಗ ದಿನದಿಂದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಲಿದೆ (ಈ ಹಿಂದೆ ಲಸಿಕೆ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿತ್ತು).

ಸುಪ್ರೀಂ ಕೋರ್ಟ್‌: ಹಲವು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಟೆಂಡರ್‌ ಕರೆದು ವಿದೇಶಿ ಕಂಪೆನಿಗಳ ಜೊತೆ ವ್ಯವಹಾರ ಕುದುರಿಸುವ ಪ್ರಯತ್ನದಲ್ಲಿ ವಿಫಲವಾಗಿವೆ. ವಿದೇಶಿ ಲಸಿಕಾ ಉತ್ಪಾದಕರು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳೊಡನೆ ವ್ಯವಹರಿಸುವ ಬದಲಿಗೆ ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಲು ಹೆಚ್ಚು ಒಲವು ತೋರಿವೆ.

ಪ್ರಧಾನ ಮಂತ್ರಿ: ಲಸಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಶೇ. 25ರಷ್ಟು ಲಸಿಕೆ ಖರೀದಿ ಜವಾಬ್ದಾರಿಯನ್ನು ಸಹ ಕೇಂದ್ರ ಸರ್ಕಾರ ತಾನೇ ಪಡೆಯಲು ನಿರ್ಧರಿಸಿದೆ.

ಸುಪ್ರೀಂ ಕೋರ್ಟ್‌: ಖರೀದಿ ಮತ್ತು ಹಂಚಿಕೆ ಸಂಬಂಧಿಸಿದಂತೆ ಭಾರತದಲ್ಲಿ ಅಂತರ ರಾಜ್ಯ ಸಮಸ್ಯೆಗಳು ಸೂಕ್ಷ್ಮವಾಗಿವೆ. ಅಲ್ಲದೇ ಜನರು ಒಂದು ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಲು ಸ್ವತಂತ್ರವಾಗಿದ್ದು, ಈ ವಲಸೆಯು ಜನನಿಬಿಡವಾದ ಮತ್ತು ಕೈಗಾರಿಕಾ ಪ್ರದೇಶಗಳೆಡೆಗೆ ಹಾಗೂ ನಗರ/ಕೇಂದ್ರಾಡಳಿತ ಪ್ರದೇಶದ ಕಡೆಗೆ ಇರುತ್ತದೆ. ಇದರ ಪ್ರಮಾಣಕ್ಕೆ ಅನುಗುಣವಾಗಿ ಲಸಿಕೆ ಹಂಚಿಕೆ ಮಾಡುವುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಪ್ರಧಾನ ಮಂತ್ರಿ: ರಾಜ್ಯಗಳ ಶೇ. 25ರಷ್ಟು ಲಸಿಕಾ ಜವಾಬ್ದಾರಿಯನ್ನು ತಾನೇ ಪಡದುಕೊಳ್ಳಲು ಕೇಂದ್ರ ನಿರ್ಧಾರ ಮಾಡಿದೆ.

ಸುಪ್ರೀಂ ಕೋರ್ಟ್‌: ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಿದರೂ ಅವು ಖಾಸಗಿ ಸಂಸ್ಥೆಗಳಾಗಿದ್ದು, ಆದಾಯ ಕೇಂದ್ರಿತವಾಗಿರುತ್ತವೆ. ಹೀಗಾಗಿ, ಕಠಿಣ ಷರತ್ತುಗಳನ್ನು ವಿಧಿಸದ ಹೊರತು ಅವುಗಳು ತಾವು ಖರೀದಿಸಿದ ಲಸಿಕೆಯನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತವೆ.

ಪ್ರಧಾನ ಮಂತ್ರಿ: ಖಾಸಗಿ ಆಸ್ಪತ್ರೆಗಳು ಗರಿಷ್ಠ ರೂ. 150 ಸೇವಾ ಶುಲ್ಕ ಮಾತ್ರವೇ ವಿಧಿಸಬಹುದು.

ಪರಿಗಣನೆಗೆ ಒಳಪಡದ ವಿಚಾರಗಳು

ಡಿಜಿಟಲ್‌ ಕಂದರ: ಡಿಜಿಟಲ್‌ ಕಂದರವು ಸಾರ್ವತ್ರಿಕ ಲಸಿಕಾ ನೀತಿ ಅನುಷ್ಠಾನಕ್ಕೆ ಭಾರಿ ಸಮಸ್ಯೆಯಾಗಬಹುದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿತ್ತು. ಸದ್ಯ ಜಾರಿಯಲ್ಲಿರುವ ಲಸಿಕಾ ನೀತಿಯು ಕೋವಿನ್‌ ಪೋರ್ಟಲ್‌ ಆಧರಿಸಿದ್ದು, ಬಹುತೇಕ 18-44 ವಯೋಮಾನದವರು ಇಲ್ಲಿ ನೋಂದಣಿ ಮಾಡಿಸಿಯೇ ಲಸಿಕೆ ಪಡೆಯಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್‌ ಸಮಸ್ಯೆಯು ಲಸಿಕೆ ಪಡೆಯುವುದಕ್ಕೆ ಸಮಸ್ಯೆ ಉಂಟು ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಸಮಸ್ಯೆಗೆ ಇನ್ನಷ್ಟೇ ಪರಿಹಾರ ಹುಡುಕಬೇಕಿದೆ.

ಲಸಿಕೆ ನೀಡುವುದು ಯಾವಾಗ ಪೂರ್ಣಗೊಳ್ಳಲಿದೆ? ಈ ಮಹತ್ವದ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ ಎತ್ತಿತ್ತು. ಲಸಿಕೆ ಉತ್ಪಾದನೆಯ ವೇಗ ಹೆಚ್ಚಿಸುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರಾದರೂ ಇಡೀ ದೇಶದ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡಲಿಲ್ಲ.