ಕೇಂದ್ರದ ಉದಾರ ಕೋವಿಡ್ ಲಸಿಕೆ ನೀತಿ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಒಂದೆಡೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿರುವುದು ಮತ್ತೊಂದೆಡೆ 18ರಿಂದ 44 ವರ್ಷದವರಿಗೆ ಲಸಿಕೆಗಾಗಿ ಹಣ ಪಾವತಿಸುವಂತೆ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳು ಸೂಚಿಸುತ್ತಿರುವುದು ಮನಸೋಇಚ್ಛೆಯ ಹಾಗೂ ಅತಾರ್ಕಿಕವಾದ ಕ್ರಮ ಎಂದು ಅದು ಹೇಳಿದೆ.
ಈ ನೀತಿ ಬೇರೆ ನ್ಯೂನತೆಗಳು, ಕಾಯಿಲೆಗಳು ಹಾಗೂ ಅಂಗವೈಕಲ್ಯಕ್ಕೆ ತುತ್ತಾದ ವ್ಯಕ್ತಿಗಳಿಗೆ ಆದ್ಯತೆ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಹಾಗೂ ರವೀಂದ್ರ ಭಟ್ ಅವರಿದ್ದ ಪೀಠ ಹೇಳಿದೆ. 18ರಿಂದ 44 ವರ್ಷ ವಯೋಮಾನದೊಳಗಿನ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗೂ ವಿಕಲಚೇತನರಿಗೆ ಆದ್ಯತೆ ನೀಡದಿರುವುದು ವಿಶೇಷ ಸಮಸ್ಯೆಯಾಗಿದೆ. ಏಕೆಂದರೆ ಕೋವಿಡ್ ವೈರಾಣು ರೂಪಾಂತರ ಸಾಮರ್ಥ್ಯ ಹೊಂದಿದ್ದು ಈಗ ಈ ವಯೋಮಾನದ ವ್ಯಕ್ತಿಗಳಿಗೆ ಕೂಡ ಅಪಾಯ ಉಂಟು ಮಾಡುತ್ತಿದೆ ಎಂದು ಅದು ತಿಳಿಸಿದೆ.
"ಸಾಂಕ್ರಾಮಿಕ ರೋಗದ ಬದಲಾಗುತ್ತಿರುವ ನಡೆಯಿಂದಾಗಿ, ನಾವೀಗ 18ರಿಂದ 44 ವಯೋಮಾನದವರಿಗೆ ಲಸಿಕೆ ಹಾಕಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಆದರೂ ವೈಜ್ಞಾನಿಕ ಆಧಾರದ ಮೇಲೆ ವಿವಿಧ ವಯೋಮಾನದವರಿಗೆ ಲಸಿಕೆ ನೀಡುವ ಆದ್ಯತೆಯನ್ನು ಉಳಿಸಿಕೊಳ್ಳಬಹುದು" ಎಂದು ತೀರ್ಪು ಸ್ಪಷ್ಟಪಡಿಸಿದೆ.
ವ್ಯಕ್ತಿಗಳು ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗಲು ಹಾಗೂ ಅಲ್ಲಿ ಕೆಲಸ ಮಾಡಲು ಮುಕ್ತರಾಗಿದ್ದು ಕೈಗಾರಿಕೆ ಮತ್ತು ನಗರ ಪ್ರದೇಶ ಹೆಚ್ಚಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಗಮನಿಸಿ ಅದಕ್ಕನುಗುಣವಾಗಿ ಲಸಿಕೆ ಹಂಚಿಕೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಸಾಂಕ್ರಾಮಿಕ ರೋಗದ ಹಂತ, ಆರೋಗ್ಯ ಮೂಲಸೌಕರ್ಯ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಸಾಮರ್ಥ್ಯ, ಸಾಕ್ಷರತಾ ಪ್ರಮಾಣ, ವಯಸ್ಸು ಹಾಗೂ ಅಲ್ಲಿನ ಜನಸಂಖ್ಯೆಯ ಒಟ್ಟಾರೆ ಆರೋಗ್ಯ ಸ್ಥಿತಿ ಮುಂತಾದ ವಿಚಾರಗಳು ಲಸಿಕೆ ಹಂಚಿಕೆ ನಿರ್ಣಯಕ್ಕೆ ಅಗತ್ಯವಾದ ಅಂಶಗಳಾಗಿರಬಹುದು. ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು ನಿರೀಕ್ಷಿಸಿದಂತೆ ನೆರವು ನೀಡಲು ಲಸಿಕೆ ನೀತಿಯಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆಯೇ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.