Ministry of Finance
Ministry of Finance 
ಸುದ್ದಿಗಳು

[ಮೊರಟೊರಿಯಂ] ಸಾಲದ ಕಂತಿನ ಮೇಲೆ ವಿಧಿಸಿದ್ದ ಚಕ್ರಬಡ್ಡಿ ಸಂಬಂಧ ಎಕ್ಸ್ ಗ್ರೇಷಿಯಾ ಪಾವತಿಸಲು ಮುಂದಾದ ಕೇಂದ್ರ ಸರ್ಕಾರ

Bar & Bench

ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮುಂದೂಡಿಕೆ (ಮೊರಟೊರಿಯಂ) ಸೌಲಭ್ಯ ಪಡೆದಿದ್ದ ಸಾಲಗಾರರು ನಿರಾಳವಾಗುವ ಸುದ್ದಿ ಕೇಂದ್ರ ಸರ್ಕಾರದಿಂದ ಹೊರಬಿದ್ದಿದೆ. ಮೊರಟೊರಿಯಂ ಸೌಲಭ್ಯ ಪಡೆದ ಕಾರಣಕ್ಕೆ ಬಡ್ಡಿಯ ಮೇಲೆ ಬಡ್ಡಿಯನ್ನು (ಚಕ್ರಬಡ್ಡಿಯನ್ನು) ವಿಧಿಸಿದ್ದ ಸಾಲ ನೀಡಿಕೆ ಸಂಸ್ಥೆಗಳ ಕ್ರಮದಿಂದಾಗಿ ಸಾಲದ ಕಂತುಗಳಲ್ಲಿ ಹೆಚ್ಚಳವಾಗಿತ್ತು. ಇದೀಗ ಕೇಂದ್ರ ಸರ್ಕಾರವು ಬಡ್ಡಿಯ ಮೇಲಿನ ಬಡ್ಡಿಯ ಮೊತ್ತವನ್ನು ಎಕ್ಸ್‌ಗ್ರೇಷಿಯಾ (ಕೃಪಾಧನ) ಮೂಲಕ ಪಾವತಿಸಲು ಮುಂದಾಗಿದೆ.

ಮೊರಟೊರಿಯಂ ಅವಧಿಗೆ ಸೀಮಿತವಾಗಿ ಮತ್ತು ನಿರ್ದಿಷ್ಟ ಸಾಲದ ಖಾತೆಗಳಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಎಕ್ಸ್‌ಗ್ರೇಷಿಯಾ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿಗೆ ನೀಡಿದೆ. ಸರ್ಕಾರದ ನಿರ್ಧಾರವು ಮಾರ್ಚ್‌ 1, 2020 ರಿಂದ ಆಗಸ್ಟ್‌ 31, 2020ರವರೆಗಿನ ಮೊರಟೊರಿಯಂ ಅವಧಿಗೆ ಅನ್ವಯಿಸಲಿದ್ದು, ಕೆಳಗೆ ಉಲ್ಲೇಖಿಸಲಾದ ಸಾಲಗಾರರು ಯೋಜನೆಗೆ ಅರ್ಹರಾಗಿದ್ದಾರೆ.

  • ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಸಾಲಗಳು

  • ಶೈಕ್ಷಣಿಕ ಸಾಲಗಳು

  • ಗೃಹ ಸಾಲಗಳು

  • ಗ್ರಾಹಕರ ಬಳಕೆ ಸಾಲಗಳು

  • ಆಟೊ ಮೊಬೈಲ್‌ ಸಾಲಗಳು

  • ವೃತ್ತಿಪರರಿಗೆ ವೈಯಕ್ತಿಕ ಸಾಲಗಳು

  • ಉಪಭೋಗ ಸಾಲಗಳು

ಯಾವುದೇ ಸಾಲಗಾರರು ಸಾಲನೀಡಿಕೆ ಸಂಸ್ಥೆಯಿಂದ ಪಡೆದಿರುವ ಸಾಲ ಸೌಲಭ್ಯಗಳ ಮೊತ್ತ 2 ಕೋಟಿ ರೂಪಾಯಿಗಿಂತ (ಮಂಜೂರಾತಿ ಮಿತಿ ಅಥವಾ ಬಾಕಿ ಮೊತ್ತ) ಹೆಚ್ಚಿದ್ದರೆ ಅದು ಈ ಯೋಜನೆಯಡಿ ಎಕ್ಸ್‌ಗ್ರೇಷಿಯಾ ಪಾವತಿಗೆ ಅರ್ಹವಾಗುವುದಿಲ್ಲ.

ಅರ್ಹತೆಯು ಕೆಳಗಿನ ಷರತ್ತು ಮತ್ತು ಕರಾರುಗಳಿಗೆ ಒಳಪಟ್ಟಿರುತ್ತದೆ:

  • ಫೆಬ್ರುವರಿ 29,2020ರ ವೇಳೆಗೆ ಸಾಲದ ಖಾತೆಯು ವಸೂಲಾಗದ ಸಾಲವಾಗಿರಬಾರದು.

  • ಸಾಲ ನೀಡುವ ಸಂಸ್ಥೆಯು ಬ್ಯಾಂಕಿಂಗ್‌ ಕಂಪೆನಿ, ಸಾರ್ವಜನಿಕ ವಲಯದ ಬ್ಯಾಂಕ್‌, ಸಹಕಾರಿ ಬ್ಯಾಂಕ್‌, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಅಖಿಲ ಭಾರತೀಯ ಆರ್ಥಿಕ ಸಂಸ್ಥೆ, ಎನ್‌ಬಿಎಫ್‌ಸಿ ಅಥವಾ ನೋಂದಾಯಿತ ಗೃಹ ಸಾಲದ ಸಂಸ್ಥೆಯಾಗಿರಬೇಕು.

  • ಭಾರತೀಯ ರಿಸರ್ವ್‌ ಬ್ಯಾಂಕ್‌ ಘೋಷಿಸಿರುವ ಸಾಲ ಮರುಪಾವತಿ ಮುಂದೂಡಿಕೆಯಾದ ಮೊರಟೊರಿಯಂ ಸೌಲಭ್ಯವನ್ನು ಸಂಬಂಧಿತ ಸಾಲಗಾರ ಪಡೆಯದೆ ಇದ್ದರೂ ಸಹ ಈ ಯೋಜನೆಯಡಿ ಎಕ್ಸ್‌ ಗ್ರೇಷಿಯಾ ಪಾವತಿ ಅನ್ವಯವಾಗಲಿದೆ.

ಫೆಬ್ರುವರಿ 29, 2020 ರ ಸಂದರ್ಭದಲ್ಲಿ ಜಾರಿಯಲ್ಲಿದ್ದ ಬಡ್ಡಿ ದರವೇ ಇದಕ್ಕೆ ಅನ್ವಯವಾಗಲಿದೆ. ಯೋಜನೆಯ ಲಾಭವನ್ನು ಸಾಲ ನೀಡುವ ಸಂಸ್ಥೆಗಳ ಮೂಲಕವೇ ಹಂಚಿಕೆ ಮಾಡಲಾಗುತ್ತಿದ್ದು, ಸಂಬಂಧಿತ ಸಾಲ ನೀಡುವ ಸಂಸ್ಥೆಗಳು ಹಣ ಜಮಾ ಮಾಡುವ ಕಾರ್ಯವನ್ನು ನವೆಂಬರ್‌ 5, 2020ರ ಒಳಗೆ ಪೂರ್ಣಗೊಳಿಸಬೇಕಿದೆ.

ಪಾವತಿಗೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆ ಮತ್ತು ಆತಂಕಗಳನ್ನು ನಿರ್ವಹಿಸಲು ಭಾರತ ಸರ್ಕಾರದ ಸಮಾಲೋಚನೆಯೊಂದಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನಿರ್ದಿಷ್ಟ ಸೆಲ್‌ಗಳನ್ನು ಆರಂಭಿಸಲಾಗುವುದು. ಅರ್ಹ ಸಾಲಗಾರರ ಅಹವಾಲು ಪರಿಹರಿಸಲು ಪ್ರತಿಯೊಂದು ಸಾಲ ನೀಡುವ ಸಂಸ್ಥೆಯೂ ಕಡ್ಡಾಯವಾಗಿ ಅಹವಾಲು ಸಲ್ಲಿಕೆ ನಿರ್ವಹಣಾ ವ್ಯವಸ್ಥೆ ಮಾಡಬೇಕಿದೆ.