Supreme Court, Places of Worship Act 
ಸುದ್ದಿಗಳು

ಪೂಜಾ ಸ್ಥಳಗಳ ಕಾಯಿದೆ ಬೆಂಬಲಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐ (ಎಂಎಲ್)

ಈ ಹಿಂದೆ, ಕಾಂಗ್ರೆಸ್, ಜಾಮಿಯತ್ ಉಲೇಮಾ-ಇ-ಹಿಂದ್ ಹಾಗೂ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಯಿದೆ ಬೆಂಬಲಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Bar & Bench

ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆ -1991ರ ವಿವಿಧ ಸೆಕ್ಷನ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಿರೋಧಿಸಿ ಇದೀಗ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ- ಲೆನಿನ್‌ವಾದಿ ಲಿಬರೇಷನ್‌) ಕೂಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈ ಹಿಂದೆ, ಕಾಂಗ್ರೆಸ್, ಜಾಮಿಯತ್ ಉಲೇಮಾ-ಇ-ಹಿಂದ್ ಹಾಗೂ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಯಿದೆ ಬೆಂಬಲಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಅನುವು ಮಾಡಿಕೊಡುವಂತೆ ಕೋರಿ ಕೋರಿ ಸಿಪಿಐ (ಎಂಎಲ್) ಶುಕ್ರವಾರ ಅರ್ಜಿ ಸಲ್ಲಿಸಲಾಗಿದೆ.

ರಾಮ ಜನ್ಮಭೂಮಿ ಚಳವಳಿ ಪರಾಕಾಷ್ಠೆಯಲ್ಲಿದ್ದಾಗ ಜಾರಿಗೆ ಬಂದ ಈ ಕಾಯಿದೆ, ಆಗಸ್ಟ್ 15, 1947ರಂದು ಇದ್ದ ಎಲ್ಲಾ ಧಾರ್ಮಿಕ ರಚನೆಗಳ ಸ್ಥಾನಮಾನವನ್ನು ಹಾಗೆಯೇ ರಕ್ಷಿಸಲು ಪ್ರಯತ್ನಿಸುತ್ತದೆ. ಅಲ್ಲದೆ ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಉಂಟುಮಾಡುವ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ಮಾಡುವುದನ್ನು ತಡೆಯುತ್ತದೆ. ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಅಂತಹ ಪ್ರಕರಣಗಳು ರದ್ದಾಗುತ್ತವೆ ಎಂದು ಕೂಡ ಕಾಯಿದೆ ಹೇಳಿತ್ತದೆ.

ಆದರೆ ರಾಮಜನ್ಮ ಭೂಮಿ ವಿಚಾರಕ್ಕೆ ಮಾತ್ರ ಕಾಯಿದೆ ವಿನಾಯಿತಿ ನೀಡಿತ್ತು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳು ಆ ಒಂದು ಪ್ರಕರಣವನ್ನು ವಿಚಾರಣೆ ಮಾಡಲು ಕಾಯಿದೆ ಅನುವು ಮಾಡಿಕೊಟ್ಟಿತ್ತು.

ಅಯೋಧ್ಯೆಯ ಭೂಮಿಗೆ ವಿನಾಯಿತಿ ನೀಡಲಾಗಿದ್ದರಿಂದ, 2019ರಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಬಾಲ ದೇವತೆ ರಾಮ್ ಲಲ್ಲಾಗೆ ನೀಡುವ ವೇಳೆ  ಈ ಕಾನೂನನ್ನು ಅನ್ವಯಿಸಿತ್ತು.

ಇಷ್ಟಾದರೂ, ಕಾಯಿದೆಯ ದೃಷ್ಟಿಯಿಂದ ಉಳಿದ ಸ್ಥಳಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಕರಣಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಚರಿಸಿತ್ತು.

ಹೀಗಾಗಿ ವಿವಿಧ ಹಿಂದೂ ಪಕ್ಷಕಾರರು ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಬಿಜೆಪಿ ನಾಯಕ  ಅಶ್ವಿನಿ ಉಪಾಧ್ಯಾಯ ಕೂಡ ಸೇರಿದ್ದಾರೆ, ಅವರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ 2021ರಲ್ಲಿ ನೋಟಿಸ್ ಜಾರಿ ಮಾಡಿತ್ತು.

ಆದರೆ ಅಸ್ತಿತ್ವದಲ್ಲಿರುವ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ವಿವಾದಕ್ಕೆಳೆಸುವ ಪ್ರಕರಣಗಳಲ್ಲಿ ಅಂತಹ ಧಾರ್ಮಿಕ ಸ್ಥಳಗಳ ಸಮೀಕ್ಷೆಗಾಗಲಿ ಅಥವಾ ವಿವಾದದ ಸಂಬಂಧ ಅಂತಿಮ ಆದೇಶವನ್ನಾಗಲಿ ನೀಡದಂತೆ 2024ರ ಡಿಸೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ  ಆದೇಶ ನೀಡಿದೆ.

ಇತ್ತ ಮಂಗಳೂರಿನ ಮಳಲಿ ಮಸೀದಿ, ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿ  ,   ವಾರಣಾಸಿಯ  ಜ್ಞಾನವಾಪಿ ಮಸೀದಿ , ಮಥುರಾದ  ಶಾಹಿ ಈದ್ಗಾ ಮಸೀದಿ,  ರಾಜಸ್ಥಾನದ ಅಜ್ಮೀರ್ ದರ್ಗಾ ಸೇರಿದಂತೆ ಕನಿಷ್ಠ 18 ಮೊಕದ್ದಮೆಗಳು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದವು. ಮುಸ್ಲಿಂ ಪಕ್ಷಕಾರರು, ಕೆಲ ರಾಜಕೀಯ ಪಕ್ಷಗಳು ಪೂಜಾ ಸ್ಥಳಗಳ ಕಾಯಿದೆ ಉಲ್ಲೇಖಿಸಿ ಅಂತಹ ಮೊಕದ್ದಮೆಗಳ ನಿರ್ವಹಣೆಯನ್ನು ವಿರೋಧಿಸಿದ್ದವು.