Supreme Court of India
Supreme Court of India 
ಸುದ್ದಿಗಳು

ಕೋವಿಡ್‌ ಪರಿಹಾರ: ಆನ್‌ಲೈನ್‌ ಪೋರ್ಟಲ್‌ ಆರಂಭಿಸಿ ವ್ಯಾಪಕ ಪ್ರಚಾರ ನೀಡಲು ರಾಜ್ಯಗಳಿಗೆ ಸುಪ್ರೀಂ ಸೂಚನೆ

Bar & Bench

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಹಂಚಿಕೆಯನ್ನು ಸುಗಮಗೊಳಿಸುವ ದೃಷ್ಟಿಯಿಂದ ಆನ್‌ಲೈನ್‌ ಪೋರ್ಟಲ್‌ ಆರಂಭಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಕೊರೊನಾ ವೈರಸ್‌ಗೆ ಕುಟುಂಬ ಸದಸ್ಯರನ್ನು ಕಳೆದುಕೊಂಡವರು ಪರಿಹಾರ ಪಡೆದುಕೊಳ್ಳಲು ಅವಕಾಶವಾಗುವ ನಿಟ್ಟಿನಲ್ಲಿ ಕೋವಿಡ್‌ ಪರಿಹಾರ ಯೋಜನೆಗೆ ವ್ಯಾಪಕ ಪ್ರಚಾರ ನೀಡುವಂತೆ ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ. ಪರಿಹಾರಕ್ಕಾಗಿ ಸ್ವೀಕೃತಗೊಂಡಿರುವ ಅರ್ಜಿಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಪೀಠವು ಬೇಸರ ವ್ಯಕ್ತಪಡಿಸಿದೆ.

“ಪರಿಹಾರ ಪಡೆಯಲು ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳಿಗೆ ಬರುವ ಅಗತ್ಯವಿಲ್ಲ. ಅಲ್ಲದೇ ಜಿಲ್ಲಾಧಿಕಾರಿ ಅಥವಾ ತಾಲ್ಲೂಕು ಕಚೇರಿಗಳಲ್ಲಿ ಉದ್ದುದ್ದ ಸಾಲುಗಳನ್ನು ತಪ್ಪಿಸಬೇಕು. ಗುಜರಾತ್‌ ರಾಜ್ಯವು ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ. ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಗುಜರಾತ್‌ ಪೋರ್ಟಲ್‌ ಆರಂಭಿಸಲಿದೆ ಎಂದಿದ್ದಾರೆ. ಎಲ್ಲಾ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಇದನ್ನೇ ಇಡೀ ದೇಶಕ್ಕೆ ವಿಸ್ತರಿಸಬಹುದು ಎಂದು ಮೆಹ್ತಾ ಹೇಳಿದ್ದಾರೆ. ಸಂಬಂಧಪಟ್ಟ ರಾಜ್ಯಗಳ ವಾದವನ್ನು ಆಲಿಸಿದ ಬಳಿಕ ದೇಶಾದ್ಯಂತ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಏಕೀಕೃತ ಪ್ರಕ್ರಿಯೆಯ ಸಂಬಂಧ ಅಗತ್ಯ ಆದೇಶ ಹೊರಡಿಸಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಪರಿಹಾರ ಯೋಜನೆಯ ಕುರಿತು ಸಂಬಂಧಪಟ್ಟ ರಾಜ್ಯಗಳು ವ್ಯಾಪಕ ಪ್ರಚಾರ ನೀಡಿಲ್ಲ ಎಂದು ಭಾವಿಸಬಹುದಾಗಿದೆ” ಎಂದು ಪೀಠವು ಅಸಮಾಧಾನ ಸೂಚಿಸಿತು.

ನಿರ್ದಿಷ್ಟವಾಗಿ ಕೇಳಿದರೂ ಪರಿಹಾರ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ, ಬಿಹಾರ, ಅಸ್ಸಾಂ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಲಡಾಖ್‌, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಮಹಾರಾಷ್ಟ್ರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ, ಯೋಜನೆಗೆ ಪ್ರಚಾರ ನೀಡುವುದರ ಜೊತೆಗೆ ಪರಿಹಾರ ಪಡೆಯಲು ಮನವಿ ಸಲ್ಲಿಸಲು ಮತ್ತು ಪರಿಹಾರ ವಿತರಣೆಗೆ ಪೋರ್ಟಲ್‌ ಆರಂಭಿಸಲಾಗಿದೆಯೇ ಎಂಬುದನ್ನು ಕೇಂದ್ರ ಗೃಹ ಇಲಾಖೆಗೆ ತಿಳಿಸಬೇಕು ಎಂದು ಪೀಠವು ಹೇಳಿದೆ.

ಪರಿಹಾರ ಯೋಜನೆಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ನೀಡುವಂತೆ ಮೇಲೆ ತಿಳಿಸಿದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯ ಆದೇಶ ಮಾಡಿದೆ. ಪ್ರಕರಣದ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಕ್ಯೂರಿ ನೇಮಿಸುವಂತೆ ಕೋರಿದ್ದ ಅರ್ಜಿದಾರ ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. “ಮೆಹ್ತಾ ಅವರು ಸಾಲಿಸಿಟರ್‌ ಜನರಲ್‌ ಹಾಗೂ ನಾಗರಿಕರಾಗಿ ಇದರ ಮೇಲೆ ನಿಗಾ ಇಡಲಿದ್ದಾರೆ” ಎಂದು ನ್ಯಾಯಾಲಯ ಹೇಳಿತು.