ಡಿಸೆಂಬರ್ 4 ರಿಂದ 22ರವರೆಗೆ ನಡೆಯಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮೂರು ಕ್ರಿಮಿನಲ್ ಕಾನೂನು ಸುಧಾರಣಾ ಮಸೂದೆಗಳು ಮತ್ತು ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಆಯ್ಕೆಯ ಮಸೂದೆ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಕ್ರಿಮಿನಲ್ ಸುಧಾರಣಾ ಮಸೂದೆಗಳು ಆಗಸ್ಟ್ 11ರಂದು ಕೇಂದ್ರ ಸರ್ಕಾರ ಮಂಡಿಸಿದ ಮೂರು ಮಸೂದೆಗಳನ್ನು ಒಳಗೊಂಡಿವೆ. ಅವು ಹೀಗಿವೆ:
ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ;
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ; ಮಹಾಗೂ
ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಲು ಭಾರತೀಯ ಸಾಕ್ಷ್ಯ ಅಧಿನಿಯಮ.
ನಂತರ ಮೂರು ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಬ್ರಿಜ್ ಲಾಲ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಲಾಗಿತ್ತು. ಸಮಿತಿ ನವೆಂಬರ್ 10 ರಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ವರದಿ ಸಲ್ಲಿಸಿತ್ತು.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ- 2023ನ್ನು ಕೂಡ ಇದೇ ಅಧಿವೇಶನದಲ್ಲಿ ಚರ್ಚಿಸುವ ನಿರೀಕ್ಷೆ ಇದೆ. ಇದನ್ನು ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.
ಸಿಇಸಿ ಮತ್ತು ಚುನಾವಣಾ ಆಯುಕ್ತರನ್ನು (ಇಸಿ) ಆಯ್ಕೆ ಮಾಡಲು ಸಮಿತಿ ರಚಿಸುವ ಬಗ್ಗೆ ಈ ಮಸೂದೆ ವ್ಯವಹರಿಸುತ್ತದೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿರಿಸುವ ಉದ್ದೇಶ ಈ ಮಸೂದೆಯದ್ದಾಗಿದೆ. ಮಾರ್ಚ್ 2023ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸಲಹೆಗೆ ವಿರುದ್ಧವಾಗಿ ಈ ಮಸೂದೆ ಜಾರಿಗೆ ಬರುತ್ತಿದೆ.
ಹೊಸ ಮಸೂದೆ ಪ್ರಕಾರ ಸಮಿತಿಯಲ್ಲಿ ಪ್ರಧಾನಿ, ಕೇಂದ್ರ ಸಂಪುಟ ದರ್ಜೆ ಸಚಿವರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರು ಇರಲಿದ್ದಾರೆ.
ಇವುಗಳಲ್ಲದೆ, ನಾಳೆಯಿಂದ ಡಿ. 22ರವರೆಗೆ ಒಟ್ಟು 15 ದಿನ ಸಂಸತ್ ಕಲಾಪ ನಡೆಯಲಿದ್ದು ಈ ಅವಧಿಯಲ್ಲಿ ಹತ್ತೊಂಬತ್ತು ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.
ಇವುಗಳಲ್ಲಿ, ಎಂಟು ಮಸೂದೆಗಳನ್ನು ಪರಿಗಣಿಸಿ, ಅಂಗೀಕರಿಸಬೇಕಿದ್ದು ಉಳಿದ ಏಳು ಮಸೂದೆಗಳನ್ನು ಮಂಡಿಸಿ, ಪರಿಗಣಿಸಿ ಬಳಿಕ ಅಂಗೀಕರಿಸಲು ಪಟ್ಟಿ ಮಾಡಲಾಗಿದೆ.
ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಇರುವ ಮಸೂದೆಗಳು
1. ಅಂಚೆ ಕಚೇರಿ ಮಸೂದೆ, 2023 - ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿತ.
2. ಜುಲೈ 27ರಂದು ಲೋಕಸಭೆ ಅಂಗೀಕರಿಸಿದ 2023 ರ ರದ್ದತಿ ಮತ್ತು ತಿದ್ದುಪಡಿ ವಿಧೇಯಕ
3. ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 - ಜುಲೈ 26ರಂದು ಲೋಕಸಭೆಯಲ್ಲಿ ಮಂಡಿತ.
(ಈ ಮಸೂದೆಯು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸ್ಥಾನಗಳ ಸಂಖ್ಯೆಯನ್ನು 83ರಿಂದ 90ಕ್ಕೆ ಹೆಚ್ಚಿಸುತ್ತದೆ, ಎಸ್‌ಸಿಗಳಿಗೆ ಏಳು ಸ್ಥಾನಗಳನ್ನು ಮತ್ತು ಎಸ್‌ಟಿಗಳಿಗೆ ಒಂಬತ್ತು ಸ್ಥಾನಗಳನ್ನು ಕಾಯ್ದಿರಿಸುತ್ತದೆ ಮತ್ತು ಕಾಶ್ಮೀರಿ ವಲಸಿಗರು ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ನಾಮನಿರ್ದೇಶಿತ ಸ್ಥಾನಗಳನ್ನು ಒದಗಿಸುತ್ತದೆ.)
4. ಜಮ್ಮು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ- 2023 - ಜುಲೈ 26ರಂದು ಲೋಕಸಭೆಯಲ್ಲಿ ಮಂಡಿತ.
5. ಸಂವಿಧಾನ (ಜಮ್ಮು ಕಾಶ್ಮೀರ) ಪರಿಶಿಷ್ಟ ಜಾತಿಗಳ ಆದೇಶ (ತಿದ್ದುಪಡಿ) ಮಸೂದೆ, 2023 - ಜುಲೈ 26ರಂದು ಲೋಕಸಭೆಯಲ್ಲಿ ಮಂಡಿತ.
6. ಸಂವಿಧಾನ (ಜಮ್ಮು ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಮಸೂದೆ, 2023 - ಜುಲೈ 26ರಂದು ಲೋಕಸಭೆಯಲ್ಲಿ ಮಂಡಿತ.
7. ವಕೀಲರ (ತಿದ್ದುಪಡಿ) ಮಸೂದೆ, 2023 - ಆಗಸ್ಟ್ 3ರಂದು ರಾಜ್ಯಸಭೆಯಲ್ಲಿ ಅಂಗೀಕೃತ.
8. ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ, 2023 - ಆಗಸ್ಟ್ 3ರಂದು ರಾಜ್ಯಸಭೆಯಲ್ಲಿ ಅಂಗೀಕೃತ.
ಮಂಡನೆ, ಪರಿಗಣನೆ ಮತ್ತು ಅಂಗೀಕಾರಕ್ಕಾಗಿ
1. ಬಾಯ್ಲರ್ಸ್ ಮಸೂದೆ, 2023 - ಸ್ಟೀಮ್-ಬಾಯ್ಲರ್‌ಗಳನ್ನು ನಿಯಂತ್ರಿಸುವ ಬಾಯ್ಲರ್ಸ್ ಕಾಯಿದೆ 1923ರ ಬದಲಿಗೆ ಜಾರಿಗೊಳ್ಳಲಿದೆ.
2. ದ ಪ್ರಾವಿಶನಲ್ ಕಲೆಕ್ಷನ್ ಆಫ್ ಟ್ಯಾಕ್ಸ್ ಬಿಲ್, 2023 - ತಾತ್ಕಾಲಿಕ ತೆರಿಗೆಗಳ ಸಂಗ್ರಹಣೆ ಮಸೂದೆ- 1931ನ್ನು ಮರು ಜಾರಿಗೊಳಿಸುತ್ತದೆ.
3. ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ 2023 - ಅಕ್ಟೋಬರ್ 7, 2023ರಂದು ನಡೆದ ಜಿಎಸ್‌ಟಿ ಮಂಡಳಿಯ 52ನೇ ಸಭೆಯಲ್ಲಿ ಮಾಡಿದ ಶಿಫಾರಸುಗಳನ್ನು ಒಳಗೊಂಡಿದೆ.
4. ಕೇಂದ್ರಾಡಳಿತ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ, 2023 - ಪುದುಚೇರಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸ್ಥಾನ ಮೀಸಲಿಡುವ ನಿಯಮಾವಳಿಯನ್ನು ಸೇರ್ಪಡೆ ಮಾಡಲಿದೆ.
5. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಕಾನೂನುಗಳ (ವಿಶೇಷ ನಿಬಂಧನೆಗಳು) ಎರಡನೇ (ತಿದ್ದುಪಡಿ) ಮಸೂದೆ, 2023 - ದೆಹಲಿಯ ಕೆಲವು ರೀತಿಯ ಅನಧಿಕೃತ ಬೆಳವಣಿಗೆಗಳನ್ನು ದಂಡನಾತ್ಮಕ ಕ್ರಮದಿಂದ ರಕ್ಷಿಸುವ ದೆಹಲಿ ಕಾನೂನುಗಳ ರಾಷ್ಟ್ರೀಯ ರಾಜಧಾನಿ ಪ್ರದೇಶ (ವಿಶೇಷ ನಿಬಂಧನೆಗಳು) ಎರಡನೇ ಕಾಯಿದೆ, 2011ರ ಸಿಂಧುತ್ವವನ್ನು ಮೂರು ವರ್ಷಗಳವರೆಗೆ 2026ರ ಡಿಸೆಂಬರ್ 31ರವರೆಗೆ ವಿಸ್ತರಿಸಲಿದೆ.
6. ಕೇಂದ್ರೀಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ, 2023 - ತೆಲಂಗಾಣದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಮಂಡನೆಯಾಗಲಿದೆ.
7. ಜಮ್ಮುಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 - ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿರಿಸಲಿದೆ.
[ರಾಜ್ಯಸಭಾ ಬುಲೆಟಿನ್ ಓದಿ]
[ಲೋಕಸಭಾ ಬುಲೆಟಿನ್ ಓದಿ]