Laly Vincent  Facebook
ಸುದ್ದಿಗಳು

ಸಿಎಸ್ಆರ್ ಸ್ಕೂಟರ್ ಹಗರಣ: ಕಾಂಗ್ರೆಸ್ ನಾಯಕಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು

ಪ್ರಮುಖ ಆರೋಪಿಯಿಂದ ಗಣನೀಯ ಮೊತ್ತದ ಹಣವನ್ನು ಲ್ಯಾಲಿ ಪಡೆದಿದ್ದಾರೆ ಎಂಬ ರಾಜ್ಯ ಸರ್ಕಾರದ ವಾದ ತಿರಸ್ಕರಿಸಿದ ನ್ಯಾಯಾಧೀಶರು ವೃತ್ತಿಪರ ಶುಲ್ಕವಾಗಿ ವಕೀಲರೊಬ್ಬರಿಗೆ ಇಷ್ಟೇ ಮೊತ್ತದ ಹಣ ಪಡೆಯಬೇಕು ಎಂದು ನಾನು ಹೇಳಲಾಗದು ಎಂದರು.

Bar & Bench

ಸಿಎಸ್ಆರ್ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಲ್ಯಾಲಿ ವಿನ್ಸೆಂಟ್ ಅವರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ನೀಡಿದೆ. [ ಲ್ಯಾಲಿ ವಿನ್ಸೆಂಟ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]

ಮಹಿಳೆಯರಿಗೆ ಅರ್ಧ ಬೆಲೆಗೆ ದ್ವಿಚಕ್ರ ವಾಹನಗಳನ್ನು ನೀಡುವುದಾಗಿ ಭರವಸೆ ನೀಡಿ ಪ್ರಮುಖ ಆರೋಪಿ ಅನಂತು ಕೃಷ್ಣನ್ ಕೋಟ್ಯಂತರ ಹಣ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಗಿದೆ. ಸ್ಕೂಟರ್‌ನ ಉಳಿದ ಮೊತ್ತವನ್ನು ವಿವಿಧ ಕಂಪೆನಿಗಳ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್‌) ಭರಿಸುವುದಾಗಿ ಆತ ಹೇಳಿಕೊಂಡಿದ್ದ ಎಂದು ದೂರಲಾಗಿತ್ತು.

ವಕೀಲೆಯೂ ಆಗಿರುವ ಕಾಂಗ್ರೆಸ್‌ ನಾಯಕಿ ಲ್ಯಾಲಿ ಅವರಿಗೆ ಇದರಲ್ಲಿ ಹಣ ಸಂದಾಯವಾಗಿತ್ತು ಎಂಬ ಮಾಹಿತಿ ಆಧರಿಸಿ ಲ್ಯಾಲಿ ಅವರನ್ನು ಪೊಲೀಸರು ಪ್ರಕರಣದ ಏಳನೇ ಆರೋಪಿಯನ್ನಾಗಿ ಮಾಡಿದ್ದರು.

ಆದರೆ ಪ್ರಧಾನ ಆರೋಪಿಯೊಂದಿಗೆ ಲ್ಯಾಲಿ ಹೊಂದಿದ್ದ ನಂಟು ಕಟ್ಟುನಿಟ್ಟಾಗಿ ವೃತ್ತಿಪರವಾಗಿತ್ತು ಎಂದು ತಿಳಿಸಿರುವ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಆಕೆಗೆ ನಿರೀಕ್ಷಣಾ ಜಾಮೀನು ನೀಡಿದರು.

ಪ್ರಮುಖ ಆರೋಪಿಯಿಂದ ಗಣನೀಯ ಮೊತ್ತದ ಹಣವನ್ನು ಲ್ಯಾಲಿ ಪಡೆದಿದ್ದಾರೆ ಎಂಬ ರಾಜ್ಯ ಸರ್ಕಾರದ ವಾದ ತಿರಸ್ಕರಿಸಿದ ನ್ಯಾಯಾಧೀಶರು ವೃತ್ತಿಪರ ಶುಲ್ಕವಾಗಿ ವಕೀಲರೊಬ್ಬ ಇಷ್ಟೇ ಮೊತ್ತದ ಹಣ ಪಡೆಯಬೇಕು ಎಂದು ನಿರೀಕ್ಷಿಸಲಾಗದು ಎಂದರು.

ತನ್ನ ಈ ಅಭಿಪ್ರಾಯ ಲ್ಯಾಲಿ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸಂಬಂಧಿಸಿದೆಯೇ ವಿನಾ ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರದು ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ. ಅಲ್ಲದೆ ಎರಡು ವಾರಗಳೊಳಗೆ ತನಿಖಾಧಿಕಾರಿ ಎದುರು ಆಕೆ ಹಾಜರಾಗಬೇಕು ಎಂದು ಅದು ಸೂಚಿಸಿತು.