ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿದ ಎಲ್ಲಾ ಐವರು ಆರೋಪಿಗಳ ವಿರುದ್ಧ ಪುಣೆಯ ವಿಶೇಷ ನ್ಯಾಯಾಲಯವೊಂದು ಕಳೆದ ವಾರ ದೋಷಾರೋಪ ಹೊರಿಸಿದೆ. ವಾಯುವಿಹಾರಕ್ಕೆ ತೆರಳಿದ್ದ ವೇಳೆ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ (ಎಂಎಎನ್ಎಸ್) ಸಂಸ್ಥಾಪಕರಾದ ದಾಬೋಲ್ಕರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಎಂಎಎನ್‌ಎಸ್ ಮೂಢನಂಬಿಕೆ ನಿರ್ಮೂಲನೆ ವಿರುದ್ಧ ಜಾಗೃತಿ ಮೂಡಿಸುವ ಸಂಸ್ಥೆಯಾಗಿತ್ತು.
ನಾಲ್ವರು ಆರೋಪಿಗಳಾದ ಡಾ. ವೀರೇಂದ್ರಸಿಂಗ್ ತಾವಡೆ, ಸಚಿನ್ ಅಂದೂರೆ, ಶರದ್ ಕಾಲಸ್ಕರ್ ಮತ್ತು ವಿಕ್ರಮ್ ಭಾವೆ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಕೊಲೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 302 ಜೊತೆ 120 ಬಿ ಅಥವಾ 34 ರ ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ. ಅಲ್ಲದೆ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 16 (ಭಯೋತ್ಪಾದಕ ಕೃತ್ಯ) ಮತ್ತು ಶಸ್ತ್ರಾಸ್ತ್ರ ಕಾಯಿದೆ ನಿಬಂಧನೆಗಳಡಿ ಆರೋಪ ನಿಗದಿಪಡಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ, ಮುಂಬೈ ಮೂಲದ ವಕೀಲ, ಸಂಜೀವ್ ಪುನಲೇಕರ್ ವಿರುದ್ಧ ಐಪಿಸಿ ಸೆಕ್ಷನ್ 201 ರ ಅಡಿಯಲ್ಲಿ ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ಆರ್ ನವಂದರ್ ಅವರು ಆರೋಪಗಳನ್ನು ನಿಗದಿಪಡಿಸಿ, ಅವುಗಳ ವಿಚಾರಣೆಗೆ ದಾರಿ ಮಾಡಿಕೊಟ್ಟರು.
ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯಲ್ಲಿ ಯಾರೂ ಕೆಲಸ ಮಾಡದಂತೆ ಜನರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ದಾಭೋಲ್ಕರ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ. "ದಾಬೋಲ್ಕರ್ ಅವರ ಹತ್ಯೆಯು ಅವರು ಪ್ರತಿಪಾದಿಸುತ್ತಿದ್ದ ಸಿದ್ಧಾಂತ ಮತ್ತು ಮಾಡುತ್ತಿದ್ದ ಕೆಲಸದ ಹತ್ಯೆಯಾಗಿದೆ" ಎಂಬುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಸನಾತನ ಸಂಸ್ಥೆಯೊಂದಿಗೆ ನಂಟು ಹೊಂದಿರುವ ಆರೋಪಿಗಳನ್ನು 2016 ರಿಂದ 2019 ರ ಅವಧಿಯಲ್ಲಿ ಸಿಬಿಐ ಬಂಧಿಸಿತ್ತು. ತಾವಡೆ, ಅಂದೂರೆ ಮತ್ತು ಕಾಲಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದರೆ, ಪುನಲೇಕರ್ ಮತ್ತು ಭಾವೆ ಜಾಮೀನಿನ ಮೇಲೆ ಹೊರಗಿದ್ದಾರೆ.