ಸುದ್ದಿಗಳು

ನೇತಾಡುವ ವಿದ್ಯುತ್‌, ಟಿವಿ ಕೇಬಲ್‌ಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಕರ್ನಾಟಕ ಹೈಕೋರ್ಟ್

ಕೆಲ ವರ್ಷಗಳಿಂದ ವಿದ್ಯುದಾಘಾತದಿಂದಾಗಿ ಬೆಂಗಳೂರು ನಗರದಲ್ಲಿ 400 ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ಅರ್ಜಿ ಸಲ್ಲಿಸಲಾಗಿತ್ತು.

Bar & Bench

ದೇಶದ ನಗರಗಳಲ್ಲಿ ವಿದ್ಯುತ್‌‌, ದೂರವಾಣಿ ಹಾಗೂ ಟಿವಿ ತಂತಿಗಳು ನೇತಾಡುವುದು ಸಾಮಾನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಜೋತಾಡುತ್ತಿರುವ ತಂತಿಗಳಿಗೆ ಕಾರಣವಾಗುವ ಮೂಲಕ ಜನಜೀವನಕ್ಕೆ ತೊಂದರೆಯುಂಟು ಮಾಡಿರುವ ಖಾಸಗಿ ಇಂಟರ್‌ನೆಟ್‌, ಟೆಲಿವಿಷನ್ ಮತ್ತು ಕೇಬಲ್‌ ಆಪರೇಟರ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯದ ಅಧಿಕಾರಿಗಳು ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬುಧವಾರ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್‌ ಅವರಿದ್ದ ಪೀಠ ಕೇಬಲ್ ಟಿವಿ ತಂತಿಗಳ ಬಗ್ಗೆ ವಿಶೇಷ ಕಳವಳ ವ್ಯಕ್ತಪಡಿಸಿದೆ. “ಇಲ್ಲಿ ನಿಜವಾದ ಸಮಸ್ಯೆ ಎಂದರೆ ಬಿಬಿಎಂಪಿಯಿಂದ ಅನುಮತಿ ಪಡೆಯದೆ ಕೇಬಲ್ ಟಿವಿ ಮತ್ತು ಅಂತರ್ಜಾಲ ತಂತಿಗಳನ್ನು ತೂಗುಹಾಕುವುದು….” ಎಂದು ನ್ಯಾಯಾಲಯವು ಪ್ರಕರಣದ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿತು.

“1995ರ ಕೇಬಲ್ ಟಿವಿ ಜಾಲ (ನಿಯಂತ್ರಣ) ಕಾಯಿದೆ ಅಡಿಯಲ್ಲಿ ಬಿಬಿಎಂಪಿಯಿಂದ ಆಪರೇಟರ್‌ ಅನುಮತಿ ಪಡೆದಿದ್ದರೂ ಕೂಡ, ಕೇಬಲ್ ತೆಗೆದುಹಾಕಲು ಅಥವಾ ಬದಲಿಸಲು ಇಲ್ಲವೇ ಅದನ್ನು ಸ್ಥಳಾಂತರ ಮಾಡಲು ಬಿಬಿಎಂಪಿಯು ಆಪರೇಟರ್‌ಗೆ ಸೂಚಿಸಬಹುದು” ಎನ್ನುವ ಅಂಶವನ್ನು ನ್ಯಾಯಾಲಯವು ಹೇಳಿತು.

ಕೇಬಲ್ ಟಿವಿ / ಅಂತರ್ಜಾಲ / ವಿದ್ಯುತ್ ತಂತಿಗಳನ್ನು ಅಕ್ರಮವಾಗಿ ತೂಗು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ಕೋರಿ ವಕೀಲ ಎನ್‌ ಪಿ ಅಮೃತೇಶ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಬೆಂಗಳೂರಿನಲ್ಲಿ ನೇತಾಡುತ್ತಿರುವ ತಂತಿಗಳ ಚಿತ್ರಗಳನ್ನು ಅರ್ಜಿಯಲ್ಲಿ ಲಗತ್ತಿಸಲಾಗಿತ್ತು. ʼಚಿತ್ರದಲ್ಲಿ ತೂಗಾಡುತ್ತಿರುವ ತಂತಿಗಳು ಪಾದಚಾರಿಗಳಿಗೆ ಮತ್ತು ರಸ್ತೆಬದಿಯ ವಾಹನಗಳಿಗೆ ಅಪಾಯಕಾರಿಯಾಗಿವೆʼ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು.

ಬಳಸಲು ಯೋಗ್ಯವಾದ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಹೊಂದುವುದು ಸಂವಿಧಾನದ 21 ನೇ ವಿಧಿ ಪ್ರಕಾರ ಮೂಲಭೂತ ಹಕ್ಕಾಗಿದೆ. ಹೀಗಾಗಿ ಅಸ್ತವ್ಯಸ್ತವಾಗಿರುವ, ಜೋತಾಡುತ್ತಿರುವ ತಂತಿಗಳನ್ನು ಕಾನೂನಾತ್ಮಕವಾಗಿ ತೆಗೆದುಹಾಕುವುದು ಬಿಬಿಎಂಪಿಯ ಕರ್ತವ್ಯ ಮತ್ತು ಹೊಣೆಗಾರಿಕೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. “ಇಂತಹ ಚಿತ್ರಣ ದೇಶದ ಎಲ್ಲ ನಗರಗಳಲ್ಲಿ ಸಾಮಾನ್ಯ. ನೀವು ಇದರ ವಿರುದ್ಧ ಹೇಗೆ ಕ್ರಮ ಕೈಗೊಳ್ಳುವಿರಿ?" ಇದೇ ವೇಳೆ ಪೀಠವು ಪ್ರಶ್ನಿಸಿತು.

ಅರ್ಜಿದಾರರು ತಮ್ಮ ವಾದ ಮಂಡನೆ ವೇಳೆ “ಕೆಲ ವರ್ಷಗಳಿಂದ ವಿದ್ಯುದಾಘಾತದಿಂದಾಗಿ ಬೆಂಗಳೂರು ನಗರದಲ್ಲಿ 400 ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಅಲ್ಲದೆ, ಹೈ ಟೆನ್ಷನ್ ವಿದ್ಯುತ್‌ ತಂತಿಗಳ ಕೆಳಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಹ ಕಟ್ಟಡಗಳಲ್ಲಿ ವಾಸಿಸುವ ನಿವಾಸಿಗಳಿಗೆ ದೊಡ್ಡ ಅಪಾಯ ಇದೆ. ಕೇಬಲ್ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳಾದ ಕಾರ್ಪೊರೇಟರ್‌ಗಳು ಮತ್ತು ಶಾಸಕರು ಮೂಕಪ್ರೇಕ್ಷಕರಾಗಿದ್ದಾರೆ,” ಎಂದು ಪೂರಕ ಅಂಶಗಳ ಮೂಲಕ ಪ್ರತಿಪಾದಿಸಿದರು.

ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 19ಕ್ಕೆ ನಿಗದಿಯಾಗಿದೆ.