Justice S R Krishna Kumar and Venkatesh Naik T & Karnataka HC 
ಸುದ್ದಿಗಳು

ಅಕ್ರಮ ಬಂಧನ ಪ್ರಕರಣ: ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ ನೆಲೆಸಲು ಯುವತಿಗೆ ಅನುಮತಿಸಿದ ಹೈಕೋರ್ಟ್‌

Bar & Bench

ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾಗುವುದನ್ನು ವಿರೋಧಿಸಿ ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿರಿಸಿದ ಆರೋಪ ಪ್ರಕರಣವೊಂದರಲ್ಲಿ ತಂದೆ-ತಾಯಿಯೊಂದಿಗೆ ತೆರಳಲು ನಿರಾಕರಿಸಿದ ಯುವತಿಗೆ ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ ಉಳಿಯಲು ಕರ್ನಾಟಕ ಹೈಕೋರ್ಟ್ ಈಚೆಗೆ ಅವಕಾಶ ಕಲ್ಪಿಸಿದೆ.

ದಕ್ಷಿಣ ಕನ್ನಡದ ಹಿಂದು ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣ ಕುಮಾರ್ ಮತ್ತು ಟಿ ವೆಂಕಟೇಶ್ ನಾಯ್ಕ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಯುವತಿಗೆ ಮೇ 16ರವರೆಗೆ ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ.

ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ನಿರ್ದೇಶಿಸಿತ್ತು. ಜತೆಗೆ ಯುವತಿಯ ಪಾಲಕರು ಹಾಗೂ ಅರ್ಜಿದಾರ ಮತ್ತವನ ಪಾಲಕರಿಗೂ ಹಾಜರಾಗುವಂತೆ ಸೂಚಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಯುವತಿಯನ್ನು ಹಾಜರುಪಡಿಸಿದ್ದರು.

ಪಾಲಕರೊಂದಿಗೆ ತೆರಳಲು ನಕಾರ: ಈ ವೇಳೆ ನ್ಯಾಯಾಲಯದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ಯುವತಿ, ಪಾಲಕರಿಂದ ತನಗೆ ಬೆದರಿಕೆಯಿದೆ ಎಂಬ ಕಾರಣ ನೀಡಿ ಅವರೊಂದಿಗೆ ತೆರಳಲು ನಿರಾಕರಿಸಿದ್ದಳು. ನ್ಯಾಯಾಲಯದಲ್ಲಿ ಹಾಜರಿದ್ದ ಪಾಲಕರು, ಮಗಳ ಆರೋಪಗಳನ್ನು ಅಲ್ಲಗಳೆದರಲ್ಲದೆ, ಆಕೆಗೆ ಯಾವುದೇ ರೀತಿಯ ಹಿಂಸೆ ನೀಡುವ ಉದ್ದೇಶ ತಮಗಿಲ್ಲ ಎಂದು ತಿಳಿಸಿದರು. ಅರ್ಜಿದಾರನ ತಂದೆ-ತಾಯಿ, ತಮ್ಮ ಮಗ ಯುವತಿಯನ್ನು ಮದುವೆಯಾಗಲು ಬಯಸಿದ್ದು, ಅದಕ್ಕೆ ತಮ್ಮ ಆಕ್ಷೇಪಣೆ ಇಲ್ಲ ಎಂದು ಪೀಠಕ್ಕೆ ವಿವರಿಸಿದರು.

ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ: ಆಗ ಪೀಠವು ಯುವತಿಗೆ ಮೇ 16ರವರೆಗೆ ಬೆಂಗಳೂರಿನ ಪುನರ್ವಸತಿ ಕೇಂದ್ರವೊಂದರಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿತಲ್ಲದೆ, ಅಷ್ಟರೊಳಗೆ ಯುವತಿ ಹಾಗೂ ಯುವಕನ ಪಾಲಕರು ಸಮಾಲೋಚನೆ ನಡೆಸಿ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಯತ್ನಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೆ, ಪುನರ್ವಸತಿ ಕೇಂದ್ರದಲ್ಲಿರುವ ಯುವತಿಗೆ ಆಕೆಯ ಪಾಲಕರು ಅಥವಾ ಕುಟುಂಬದ ಬೇರಾವ ಸದಸ್ಯರೂ ತೊಂದರೆ ನೀಡಬಾರದು. ಇದು ಅರ್ಜಿದಾರ ಮತ್ತವರ ಪಾಲಕರಿಗೂ ಅನ್ವಯಿಸಲಿದೆ. ಪೊಲೀಸರು ಯುವತಿಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮೇ 16ಕ್ಕೆ ಮುಂದೂಡಿದೆ.