ಅನ್ಯ ಧರ್ಮದ ಯುವಕನೊಂದಿಗೆ ವಿವಾಹಕ್ಕೆ ವಿರೋಧಿಸಿ ಪುತ್ರಿಯನ್ನು ವಶದಲ್ಲಿಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಗೌಪ್ಯವಾಗಿ ಈಚೆಗೆ ನಡೆಸಿರುವ ಕರ್ನಾಟಕ ಹೈಕೋರ್ಟ್, ಆಕೆ ಪೋಷಕರ ಮನೆಗೆ ತೆರಳಲು ನಿರಾಕರಿಸಿರುವುದರಿಂದ ಯುವತಿಗೆ ಕೆಲಕಾಲ ಮಂಗಳೂರಿನ ಕೌನ್ಸೆಲಿಂಗ್ ಕೇಂದ್ರದಲ್ಲಿ ನೆಲೆಸಲು ಅವಕಾಶ ನೀಡಿದೆ.
ಹಿಂದೂ ಧರ್ಮಕ್ಕೆ ಸೇರಿದ ಯುವತಿಯ ಕ್ರಿಶ್ಚಿಯನ್ ಸಮುದಾಯದ ಸ್ನೇಹಿತ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣ ಕುಮಾರ್ ಮತ್ತು ವೆಂಕಟೇಶ್ ನಾಯ್ಕ್ ಟಿ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ನಡೆಸಿತು.
“ಯುವತಿಗೆ ಕೌನ್ಸೆಲಿಂಗ್ ಅಗತ್ಯವಿದ್ದು, ಇದಕ್ಕಾಗಿ ಆಕೆಯನ್ನು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿರುವ ಗುರುದೇವತಾ ಸಮಸ್ಥಾನ, ವಾದಿಯೂರ್ ಕನ್ಯಾನದಲ್ಲಿ ನೆಲೆಸಲು ಅನುಮತಿಸಲಾಗಿದೆ. ಆಕೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಉದ್ಯೋಗದಾತರು ನೀಡಿರುವುದರಿಂದ ಇಲ್ಲಿ ಉಳಿದುಕೊಂಡು ಆಕೆ ಕೆಲಸ ಮುಂದುವರಿಸಬಹುದಾಗಿದೆ. ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯು ತಜ್ಞರ ನೆರವಿನಿಂದ ಆಕೆಗೆ ಕೌನ್ಸೆಲಿಂಗ್‌ಗೆ ವ್ಯವಸ್ಥೆ ಮಾಡಬೇಕು. ಮುಂದಿನ ವಿಚಾರಣೆ ವೇಳೆಗೆ ಕೌನ್ಸೆಲಿಂಗ್‌ಗೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಅಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಹೈಕೋರ್ಟ್ ಆದೇಶಿಸಿದೆ.
“ಯುವತಿಯ ಪೋಷಕರು ಆಕೆಯ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮದ ಭಾಗವಾಗಿ ಅರ್ಜಿದಾರರು ಅಥವಾ ಅವರ ಕಡೆಯವರು ಯುವತಿ ನೆಲೆಸಿರುವ ಸ್ಥಳದತ್ತ ಸುಳಿಯಬಾರದು. ಆಕೆಯ ಸುರಕ್ಷತೆ ಪರಿಶೀಲಿಸಲು ಸ್ಥಳೀಯ ಪೊಲೀಸರು ಮೇಲಿಂದ ಮೇಲೆ ಭೇಟಿ ನೀಡಬೇಕು. ಅದಾಗ್ಯೂ, ತನ್ನ ಪೋಷಕರ ಜೊತೆ ನೆಲೆಸಲು ಆಕೆಗೆ ಆಯ್ಕೆ ನೀಡಲಾಗಿದೆ. ಸೂಕ್ತ ಸಂದರ್ಭದಲ್ಲಿ ಶಾಂತಿಯುತವಾಗಿ ಆಕೆಯನ್ನು ಭೇಟಿ ಮಾಡಲು ಉಭಯ ಪಕ್ಷಕಾರರಿಗೆ ಅವಕಾಶ ಇರುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಮತದಾನದ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿತರೆಲ್ಲರ ಹಿತದೃಷ್ಟಿಯಿಂದ ಈ ಆದೇಶ ಮಾಡುತ್ತಿದ್ದು, ರಿಟ್ ಅರ್ಜಿಯ ಊರ್ಜಿತತ್ವದ ವಿಚಾರವನ್ನು ಮುಕ್ತವಾಗಿ ಇರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಪ್ರಕರಣದ ವಿಚಾರಣೆಯನ್ನು ಮೇ 24ಕ್ಕೆ ರೋಸ್ಟರ್ ಪೀಠವು ನಡೆಸಲಿದ್ದು, ಅಂದು ಯುವತಿ, ಆಕೆಯ ಪೋಷಕರು, ಸೂಚಿಸಲಾದ ಇಬ್ಬರು ಪೊಲೀಸ್ ಅಧಿಕಾರಿಗಳು ಭೌತಿಕವಾಗಿ ವಿಚಾರಣೆಯಲ್ಲಿ ಭಾಗಿಯಾಗಬೇಕು” ಎಂದು ಹೇಳಲಾಗಿದೆ.
“ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕರಣದ ಸೂಕ್ಷ್ಮತೆಯನ್ನು ಆಧರಿಸಿ ಗೌಪ್ಯ ವಿಚಾರಣೆ ನಡೆಸಲಾಗಿದೆ. ಯುವತಿ, ಆಕೆಯ ಪೋಷಕರು ಮತ್ತು ಸಂಬಂಧಿಯೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಾಗಿದೆ. ಅರ್ಜಿದಾರರ ಪರ ವಕೀಲರು ವಿಸ್ತೃತವಾಗಿ ವಾದಿಸಿರುವುದರಿಂದ ಅವರ ಜೊತೆ ಮಾತನಾಡಿಲ್ಲ. ಯುವತಿಯೊಂದಿಗಿನ ಸುದೀರ್ಘ ಮಾತುಕತೆಯ ಬಳಿಕ ಆಕೆ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದು ನಮಗೆ ಅರ್ಥವಾಗಿದೆ. ಈಗಾಗಲೇ ಮತ್ತೊಬ್ಬ ವ್ಯಕ್ತಿಯೊಂದಿಗಿನ ಅವರ ವಿವಾಹವು ಆಕೆಯಿಂದಾಗಿಯೇ ಮುರಿದು ಬಿದ್ದಿದ್ದು, ಈಗ ಅರ್ಜಿದಾರರ ಜೊತೆಗಿನ ವಿವಾಹದ ಕುರಿತು ತಾರ್ಕಿಕ ತೀರ್ಮಾನ ಮಾಡುವ ಪರಿಸ್ಥಿತಿಯಲ್ಲಿ ಆಕೆ ಇಲ್ಲ" ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿತು.
ಮುಂದುವರೆದು, "ಪೋಷಕರು ಅತ್ಯಂತ ಪ್ರೀತಿಯಿಂದ ತನ್ನನ್ನು ಬೆಳೆಸಿದ್ದು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ ಎಂದು ಆಕೆ ಹೇಳಿದ್ದಾರೆ. ಅರ್ಜಿಯಲ್ಲಿ ತಪ್ಪಾಗಿ ಉಲ್ಲೇಖಿಸಿರುವಂತೆ ಪೋಷಕರು ತನ್ನ ಜೀವಕ್ಕೆ ಯಾವುದೇ ಬೆದರಿಕೆ ಹಾಕಿಲ್ಲ. ಹೀಗಾಗಿ, ಪೋಷಕರ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ನ್ಯಾಯಾಲಯಕ್ಕೆ ಕೋರಿದ್ದಾರೆ. ಅದಾಗ್ಯೂ, ತನ್ನದೇ ಆದ ಕಾರಣಗಳಿಗೆ ಆಕೆಯು ತಮ್ಮ ಮನೆಗೆ ಹೋಗಲು ನಿರಾಕರಿಸಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.