Justices Vikram Nath, Sanjiv Khanna, SK Kaul, Abhay S. Oka,  J.k. Maheshwari
Justices Vikram Nath, Sanjiv Khanna, SK Kaul, Abhay S. Oka, J.k. Maheshwari 
ಸುದ್ದಿಗಳು

ದಾವೂದಿ ಬೊಹ್ರಾ ಸಮುದಾಯದ ಬಹಿಷ್ಕಾರ ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಆದೇಶ ಕಾಯ್ದಿರಿಸಿದ ಸುಪ್ರೀಂ

Bar & Bench

ಇಸ್ಲಾಂ ಧರ್ಮಕ್ಕೆ ಸೇರಿದ ಷಿಯಾ ಪಂಥದ ಪಂಗಡವಾದ ದಾವೂದಿ ಬೊಹ್ರಾ ಸಮುದಾಯದ ಸರ್ವೋಚ್ಚ ನಾಯಕ ತನ್ನ ಸದಸ್ಯರನ್ನು ಬಹಿಷ್ಕರಿಸಬಹುದೇ ಮತ್ತು ಅದೊಂದು ಧಾರ್ಮಿಕ ಆಚರಣೆ ಎಂದು ಪರಿಗಣಿಸಿ ಸಂವಿಧಾನ ಅದಕ್ಕೆ ರಕ್ಷಣೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಮಂಗಳವಾರ ತೀರ್ಪು ಕಾಯ್ದಿರಿಸಿದೆ [ದಾವೂದಿ ಬೊಹ್ರಾ ಸಮುದಾಯ ಕೇಂದ್ರ ಮಂಡಳಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಸಂವಿಧಾನದ 25 ಮತ್ತು 26 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಬೋಹ್ರಾ ಸಮುದಾಯ ತನ್ನ ಸಮುದಾಯದಿಂದ ಅಭಿಪ್ರಾಯ ಭೇದ ಹೊಂದಿರುವವರನ್ನು ಬಹಿಷ್ಕರಿಸುವ ಹಕ್ಕು ಪಡೆದಿದೆಯೇ ಎಂಬ ವಿಚಾರದ ಕುರಿತು ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.  

ಸದಸ್ಯರನ್ನು ಬಹಿಷ್ಕರಿಸುವ ಬೋಹ್ರಾ ಸಮುದಾಯದ ಹಕ್ಕುಗಳನ್ನು ಸುಪ್ರೀಂ ಕೋರ್ಟ್‌ ರಕ್ಷಿಸಿರುವ 1962ರ ಸರ್ದಾರ್ ಸೈಯದ್ನಾ ತಾಹೆರ್ ಸೈಫುದ್ದೀನ್ ಮತ್ತು ಬಾಂಬೆ ಸರ್ಕಾರದ ನಡುವಣ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಸೂಕ್ತತೆಯನ್ನು ಪೀಠ ಪರಿಶೀಲಿಸುತ್ತಿದೆ. ಐವರು ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿತ್ತು. ಆದರೆ ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2016ರಲ್ಲಿ ಜಾರಿಗೆ ಬಂದು ಬಹಿಷ್ಕಾರದಂತಹ ಕ್ರಮಗಳನ್ನು ಕಾನೂನು ಬಾಹಿರ ಎಂದಿದೆ.

ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌, ಸಂಜೀವ್ ಖನ್ನಾ, ಅಭಯ್ ಎಸ್ ಓಕ್, ವಿಕ್ರಮ್ ನಾಥ್, ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಇಂದು ಪ್ರಕರಣ ಆಲಿಸಿದಾಗ ಕಕ್ಷಿದಾರರು ಶಬರಿಮಲೆ ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡುವವರೆಗೆ ಕಾಯಬೇಕು ಇಲ್ಲವೇ ಈ ಪ್ರಕರಣವನ್ನು ಕೂಡ ಒಂಬತ್ತು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದರು.

ಶಬರಿಮಲೆ ಪ್ರಕರಣದಲ್ಲಿ ಕೇರಳದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ವಿವಾದವಾಗಿತ್ತು. ಒಂಬತ್ತು ನ್ಯಾಯಮೂರ್ತಿಗಳ ಪೀಠ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಹಕ್ಕುಗಳನ್ನು ಒಳಗೊಂಡಿರುವ ಇತರ ಮೂರು ಪ್ರಕರಣಗಳನ್ನು ಪರಿಗಣಿಸಲಿದೆ.

ಒಂಬತ್ತು ನ್ಯಾಯಮೂರ್ತಿಗಳ ಪೀಠ ಇದನ್ನು ಮರುಪರಿಶೀಲಿಸುವ ಕುರಿತಂತೆ  ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಿರಿಯ ವಕೀಲ ಫಾಲಿ ನಾರಿಮನ್ ಒಲವು ವ್ಯಕ್ತಪಡಿಸಿದರು. ಅಂತಿಮವಾಗಿ ಪೀಠ ತೀರ್ಪು ಕಾಯ್ದಿರಿಸಿತು.