ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ದೆಹಲಿ ಆಯೋಗ (ಡಿಸಿಪಿಸಿಆರ್) ಹೊರತಂದಿರುವ “ಚಿಲ್ಡ್ರನ್ ಫಸ್ಟ್- ಜರ್ನಲ್ ಆನ್ ಚಿಲ್ಡ್ರನ್ಸ್ ಲೈವ್ಸ್” ನಿಯತಕಾಲಿಕದ ಮೂರನೇ ಸಂಚಿಕೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಫಿಜಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮದನ್ ಲೋಕೂರ್ ಹಾಗೂ ಯುನಿಸೆಫ್ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಟೆರಿ ಡರ್ಮನ್ ಶನಿವಾರ ಅನಾವರಣಗೊಳಿಸಿದರು.
ʼಮೂವಿಂಗ್ ಆನ್ ದಿ ಪ್ಯಾನ್ಡೆಮಿಕ್ ಅಂಡ್ ಬಿಯಾಂಡ್ʼ ಹೆಸರಿನ ಸಂಚಿಕೆ ಕೋವಿಡ್ ಅವಧಿಯಲ್ಲಿ ಹಿಂಸಾಚಾರ, ನಿಂದನೆ, ಆರೈಕೆ ಮತ್ತು ರಕ್ಷಣೆಯ ಕೊರತೆ, ಪೋಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಯ ವಿಷಯದಲ್ಲಿ ಎದುರಾದ ಸವಾಲುಗಳು ಚಿಕ್ಕಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಿದವು ಎಂಬದನ್ನು ವಿವರಿಸುತ್ತದೆ. ಜೊತೆಗೆ ಇಂತಹ ಸವಾಲು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತದೆ.
ಬೆಂಗಳೂರು, ಅಸ್ಸಾಂ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಹಾಗೂ ಒಡಿಶಾದಂತಹ ಇಪ್ಪತ್ತು ರಾಜ್ಯಗಳಲ್ಲಿ ಸಂಶೋಧನೆ ನಡೆಸಿ ನಿಯತಕಾಲಿಕವನ್ನು ಹೊರತರಲಾಗಿದೆ. ನಿಯತಕಾಲಿಕ ಬಿಡುಗಡೆ ಮಾಡಿದ ನ್ಯಾ. ಕೊಹ್ಲಿ, 48,000 ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಡಿಸಿಪಿಸಿಆರ್ ವಹಿಸಿದ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದರು. ಕೋವಿಡ್ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಪುನರ್ವಸತಿಗಾಗಿ ಸುಪ್ರೀಂ ಕೋರ್ಟ್ ವಹಿಸಿದ ಸಕ್ರಿಯ ಪಾತ್ರವನ್ನು ಕೂಡ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ನಿಯತಕಾಲಿಕ ಬಿಡುಗಡೆ ಸಮಾರಂಭದಲ್ಲಿ "ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ: ಮಕ್ಕಳಿಗಾಗಿ ಸಂಶೋಧನೆಗಳು ಮತ್ತು ಪರಿಣಾಮಗಳು" ಎಂಬ ವಿಷಯವಾಗಿ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ, ಅಂತರರಾಷ್ಟ್ರೀಯ ಖ್ಯಾತಿಯ ಆರೋಗ್ಯ ತಜ್ಞ ಡಾ. ಚಂದ್ರಕಾಂತ್ ಲಹಾರಿಯಾ ಮುಂತಾದ ಹಲವು ದಿಗ್ಗಜರು ಭಾಗವಹಿಸಿದ್ದರು.