<div class="paragraphs"><p>Indira Banerjee, JK Maheshwari, Supreme Court</p></div>

Indira Banerjee, JK Maheshwari, Supreme Court

 
ಸುದ್ದಿಗಳು

ಎಸ್‌ಸಿ/ಎಸ್‌ಟಿ ಹುದ್ದೆಗಳನ್ನು ಒಬಿಸಿಗೆ ಬದಲು ಮಾಡುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕಿಲ್ಲ: ಸುಪ್ರೀಂ ಕೋರ್ಟ್

Bar & Bench

ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಹುದ್ದೆಗಳನ್ನು ಇತರೆ ಹಿಂದುಳಿದ ವರ್ಗಗಳಿಗೆ ಬದಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ [ಮಂದೀಪ್ ಕುಮಾರ್ ಮತ್ತಿತರರು ಹಾಗೂ ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹಾಗೆ ಅಂತರ್ ಬದಲಾವಣೆ ಮಾಡುವ ಅಧಿಕಾರ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಮಾತ್ರವಿದೆ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"ಅರ್ಹ ಅಭ್ಯರ್ಥಿಗಳನ್ನು ಹೊಂದಿರದ ಕಾರಣಕ್ಕೆ ಎಸ್‌ಸಿ ವರ್ಗದ ಖಾಲಿ ಇರುವ ಹುದ್ದೆಗಳ ಪರಸ್ಪರ ವಿನಿಮಯವನ್ನು ಸಂಬಂಧಿತ ಇಲಾಖೆ ಮುಖಾಂತರ ಮಾಡಬಹುದೇ ವಿನಾ ಅಧಿಕಾರಿಗಳನ್ನು ನೇಮಿಸುವ ಪ್ರಾಧಿಕಾರದ ಮೂಲಕ ಅಲ್ಲ" ಎಂದು ತೀರ್ಪು ಹೇಳಿದೆ.

ತರಬೇತಿ ಪಡೆದ ಪ್ರಾಥಮಿಕ ಶಿಕ್ಷಕರ (ಇಟಿಟಿ) ಹುದ್ದೆಗಳನ್ನು ಭರ್ತಿ ಮಾಡಲು ಪಂಜಾಬ್‌ ಸರ್ಕಾರ ನಿಷ್ಕ್ರಿಯವಾಗಿರುವ ಸಂಬಂಧ ಸಲ್ಲಿಸಲಾಗಿದ್ದ ಮನವಿಯ ಕುರಿತಂತೆ ನ್ಯಾಯಾಲಯ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಎರಡು ಪ್ರತ್ಯೇಕ ಜಾಹೀರಾತು ಪ್ರಕಟಣೆ ಮೂಲಕ ಖಾಲಿ ಹುದ್ದೆಗಳ ಬಗ್ಗೆ ತಿಳಿಸಿದರೂ ಎಸ್‌ಸಿ/ಎಸ್‌ಟಿ ವರ್ಗದಲ್ಲಿ 595 ಇಟಿಟಿ ಹುದ್ದೆಗಳು ಭರ್ತಿಯಾಗದೆ ಉಳಿದಿದ್ದವು.

ಈ ಹಿನ್ನೆಲೆಯಲ್ಲಿ ಪರಸ್ಪರ ವಿನಿಮಯದ ಮೂಲಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮೇಲ್ಮನವಿದಾರರ ಇಂಗಿತವಾಗಿತ್ತು. ಆದರೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದ ಆರು ವರ್ಷಗಳ ನಂತರ ಎಸ್‌ಸಿ/ಎಸ್‌ಟಿಯಿಂದ ಒಬಿಸಿ ವರ್ಗಕ್ಕೆ ಮೀಸಲಾತಿಯನ್ನು ಪರಸ್ಪರ ಬದಲಿಸುವುದು "ನಿಜವಾಗಿಯೂ ನ್ಯಾಯಸಮ್ಮತವಲ್ಲ" ಎಂದು ಕೂಡ ಹೇಳಿದ ಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.