Potholes on roads 
ಸುದ್ದಿಗಳು

ರಸ್ತೆ ಗುಂಡಿಗಳಿಂದ ಪಾದಚಾರಿಗಳು, ವಾಹನ ಸವಾರರು ಮೃತಪಟ್ಟರೆ ಅದು ಮಾನವ ಕೃತ್ಯವೇ ವಿನಾ ಸಹಜ ಸಾವಲ್ಲ: ಬಾಂಬೆ ಹೈಕೋರ್ಟ್

ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಎಲ್ಲಾ ಮುನ್ಸಿಪಲ್ ಕಾರ್ಪೊರೇಶನ್‌ಗಳು ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಅನುಪಾಲನಾ ವರದಿಗಳನ್ನು ಸೆ. 29ರೊಳಗೆ ಸಲ್ಲಿಸಬೇಕೆಂದು ಹೇಳಿದ ನ್ಯಾಯಾಲಯ.

Bar & Bench

ಉತ್ತಮ ರಸ್ತೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಸಾಂವಿಧಾನಿಕ ಬಾಧ್ಯತೆ ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ಹೇಳಿದೆ.

ಮ್ಯಾನ್‌ಹೋಲ್‌ಗಳು ಅಥವಾ ಗುಂಡಿಗಳಲ್ಲಿ ಬಿದ್ದು ಪಾದಚಾರಿಗಳು ಇಲ್ಲವೇ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುವುದು ಮಾನವ ಸೃಷ್ಟಿಯೇ ವಿನಾ ಸ್ವಾಭಾವಿಕವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್‌ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

“ಮ್ಯಾನ್‌ಹೋಲ್‌ಗಳು ಅಥವಾ ಹೊಂಡಗಳಲ್ಲಿ ಬೀಳುವ ಪಾದಚಾರಿಗಳು ಅಥವಾ ದ್ವಿಚಕ್ರ ವಾಹನ ಸವಾರರ ಸಾವು ಮಾನವ ನಿರ್ಮಿತಿಯಲ್ಲಿನ ಲೋಪದಿಂದ ಸಂಭವಿಸುವಂಥದ್ದೇ ವಿನಾ ಇದು ನೈಸರ್ಗಿಕವಲ್ಲ. ನೀವು ಸಂವಿಧಾನದ  21ನೇ ವಿಧಿಯಡಿಯಲ್ಲಿ ಸಾಂವಿಧಾನಿಕ ಕರ್ತವ್ಯವನ್ನು ಹೊಂದಿರುವುದಷ್ಟೇ ಅಲ್ಲದೆ ಮೇಲ್ವಿಚಾರಣೆ ಮತ್ತು ನಿಗಾ ಇಡುವ ಶಾಸನಬದ್ಧ ಬಾಧ್ಯತೆಯನ್ನೂ ಹೊಂದಿರುತ್ತೀರಿ. ಎಲ್ಲಾ ಪ್ರಕ್ರಿಯೆಗಳನ್ನು ನ್ಯಾಯಾಲಯವೇ ಮಾಡುವ ಅವಶ್ಯಕತೆ ಇಲ್ಲ. ನಾವು ನಮ್ಮ ಸಮಯ ಏಕೆ ವ್ಯರ್ಥ ಮಾಡಬೇಕು? ಇದು ನಿಮ್ಮ ಕೆಲಸ ಮತ್ತು ಜವಾಬ್ದಾರಿ” ಎಂದು ನ್ಯಾಯಾಲಯ ಕಟುವಾಗಿ ನುಡಿಯಿತು.

ಪಾದಚಾರಿ ಮಾರ್ಗಗಳು ಸೇರಿದಂತೆ ಬೀದಿ ಮತ್ತು ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಡುವಂತೆ ಎಲ್ಲಾ ಮುನ್ಸಿಪಲ್ ಕಾರ್ಪೊರೇಷನ್‌ಗಳು ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಈ ಹಿಂದೆ ಆದೇಶ ನೀಡಿತ್ತು. ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.  

ಅಧಿಕಾರಿಗಳ ನಿಷ್ಕ್ರಿಯತೆಯ ಬಗ್ಗೆ ಆಗಸ್ಟ್ 9 ರಂದು ಅಸಮಾಧಾನಗೊಂಡಿದ್ದ ನ್ಯಾಯಾಲಯ ಮುಂಬೈ ಮಹಾನಗರ ಪ್ರದೇಶದ ಆರು ಕಾರ್ಪೊರೇಷನ್‌ಗಳ ಮುನ್ಸಿಪಲ್ ಕಮಿಷನರ್‌ಗಳಿಗೆ ಸಮನ್ಸ್ ನೀಡಿತ್ತು. ಅದರಂತೆ ಶುಕ್ರವಾರ ಎಲ್ಲ ಆಯುಕ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಅಧಿಕಾರಿಗಳು ನೀಡಿದ ಸಮಜಾಯಿಷಿಗಳಿಗೆ ತೃಪ್ತರಾಗದ ನ್ಯಾಯಮೂರ್ತಿಗಳು “…ನೀವೇ ನೀಡಿರುವ ಮಾಹಿತಿಯಂತೆ ಈ ವರ್ಷ ಮಳೆ ಹೆಚ್ಚಾಗಿಲ್ಲ. (ರಸ್ತೆಗಳು ಹದಗೆಡಲು) ಮುಖ್ಯ ಕಾರಣ ನಿರ್ಲಕ್ಷ್ಯ ಮತ್ತು ಸರ್ಕಾರದ ನಿಧಿಯನ್ನು ಏನು ಮಾಡಲಾಗಿದೆ ಎಂಬುದು” ಎಂದು ನ್ಯಾಯಾಲಯ ಮೌಕಿಕವಾಗಿ ಟೀಕಿಸಿತು.

ಅಲ್ಲದೆ, ಇಬ್ಬರು ವಕೀಲರನ್ನು ಒಳಗೊಂಡ ಆಯೋಗದ ಸಮ್ಮುಖದಲ್ಲಿ ತಮ್ಮ ವ್ಯಾಪ್ತಿಯ ರಸ್ತೆಗಳ ಸಮೀಕ್ಷೆ ನಡೆಸುವಂತೆ ಪೀಠ ಆಯುಕ್ತರಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ನಡೆಯುವ ಸೆ. 29ರೊಳಗೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಎಲ್ಲಾ ಮುನ್ಸಿಪಲ್ ಕಾರ್ಪೊರೇಶನ್‌ಗಳು ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಅನುಪಾಲನಾ ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಹೇಳಿತು.