A1
A1
ಸುದ್ದಿಗಳು

[ಮರಣದಂಡನೆ] ಗಲ್ಲಿಗೇರಿಸುವುದು ನೋವುರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ಶೀಘ್ರ ಸಮಿತಿ ರಚನೆ: ಕೇಂದ್ರದ ಮಾಹಿತಿ

Bar & Bench

ನೇಣಿನ ಮೂಲಕ ಮರಣದಂಡನೆ ವಿಧಿಸುವುದು ನೋವುರಹಿತವಾದ, ಸೂಕ್ತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠಕ್ಕೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಈ ಮಾಹಿತಿ ನೀಡಿದರು.

ಸಮಿತಿ ರಚನೆಗೆ ತಾನು ಪ್ರಸ್ತಾಪಿಸಿದ್ದು ಈಗ ಹೆಸರುಗಳನ್ನು ಕಲೆ ಹಾಕುತ್ತಿರುವುದಾಗಿ ಎಜಿ ಅವರು ವಿವರಿಸಿದರು. ಜುಲೈ ಎರಡನೇ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ನೇಣು ಹಾಕುವ ಬದಲು ವಿಷಯುಕ್ತ ಚುಚ್ಚುಮದ್ದು ಇಲ್ಲವೇ ವಿದ್ಯುದಾಘಾತದಂತಹ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಕೋರಿ ವಕೀಲ ರಿಷಿ ಮಲ್ಹೋತ್ರಾ ಅವರು ಮನವಿ ಸಲ್ಲಿಸಿದ್ದರು.

ನೇಣಿಗೆ ಬದಲಾಗಿ ವಿದ್ಯುದಾಘಾತ, ಗುಂಡೇಟು ಅಥವಾ ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ಮರಣ ದಂಡನೆ ವಿಧಿಸುತ್ತಿರುವ ದೇಶಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದಾಗಿ ಕಾನೂನು ಆಯೋಗದ 187ನೇ ವರದಿಯಲ್ಲಿ ತಿಳಿಸಲಾಗಿದೆ. ಗಲ್ಲಿಗೇರಿಸುವುದು ನಿಸ್ಸಂದೇಹವಾಗಿ ತೀವ್ರ ದೈಹಿಕ ಚಿತ್ರಹಿಂಸೆ ಮತ್ತು ನೋವಿನಿಂದ ಕೂಡಿರುತ್ತದೆ ಎಂದು ಆಯೋಗ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಈ ಹಿಂದಿನ ವಿಚಾರಣೆ ವೇಳೆ, ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ ವಿಧಾನ ಇದೇ ಆಗಿದೆಯೇ ಎಂಬ ಕುರಿತು ವಿವರಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು.

ಸರ್ಕಾರ ಅಂತಹ ಅಧ್ಯಯನ ಕೈಗೊಳ್ಳದಿದ್ದರೆ ಆ ಅಧ್ಯಯನ ನಡೆಸುವುದಕ್ಕಾಗಿ ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಕೆಲವು ವೈದ್ಯರು, ದೇಶದೆಲ್ಲೆಡೆಯ ಗಣ್ಯರು ಹಾಗೂ ಕೆಲ ವೈಜ್ಞಾನಿಕ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ತಾನೇ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿತ್ತು.