"ನೇಣಿನ ಮೂಲಕ ಮರಣದಂಡನೆ ವಿಧಿಸುವುದು ನೋವುರಹಿತ ವಿಧಾನವೇ?" ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದಾದರೂ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ ವಿಧಾನ ಇದೇ ಆಗಿದೆಯೇ ಎಂಬ ಕುರಿತು ವಿವರಗಳನ್ನು ಒದಗಿಸುವಂತೆ ಕೇಳಿದ ನ್ಯಾಯಾಲಯ.
Death Penalty
Death Penalty

ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸುವಿಕೆ ಅತಿ ಸೂಕ್ತ ಮತ್ತು ನೋವು ರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ ವಿಧಾನ ಇದೇ ಆಗಿದೆಯೇ ಎಂಬ ಕುರಿತು ವಿವರಗಳನ್ನು ಒದಗಿಸುವಂತೆ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರಿದ್ದ ಪೀಠ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರಿಗೆ ತಿಳಿಸಿತು.

Also Read
ಗಲ್ಲು ಶಿಕ್ಷೆ ವಿಧಿಸುವ ಮುನ್ನ ನ್ಯಾಯಾಲಯಗಳು ಹೇಗೆ ಸಮಗ್ರ ವಿಶ್ಲೇಷಣೆ ನಡೆಸಬಹುದು ಎಂದು ಅರಿಯಲು ಮುಂದಾದ ಸುಪ್ರೀಂ

“ಮಿ. ಅಟಾರ್ನಿ ಜನರಲ್‌ ಅವರೇ, ನೇಣು ಹಾಕುವಿಕೆಯಿಂದ ಉಂಟಾಗುವ ಸಾವಿನ ಪರಿಣಾಮ, ಅದು ಉಂಟು ಮಾಡುವ ನೋವು,  ಹಾಗೂ ಅದರಿಂದ ಸಾವು ಸಂಭವಿಸಲು ತೆಗೆದುಕೊಳ್ಳುವ ಅವಧಿ ಬಗ್ಗೆ ನಮಗೆ  ಮಾಹಿತಿ ನೀಡಿ. ಅತ್ಯುತ್ತಮವಾದ ವಿವರ ಬೇಕಿದೆ. ಪ್ರಸಕ್ತ ವಿಜ್ಞಾನ, ಇದೇ ಇಂದಿನ ಅತ್ಯುತ್ತಮ ವಿಧಾನ ಎನ್ನುತ್ತದೆಯೇ ಅಥವಾ ಮಾನವ ಘನತೆಯನ್ನು ಎತ್ತಿ ಹಿಡಿಯಲು ಹೆಚ್ಚು ಸೂಕ್ತವಾದ ಇನ್ನೊಂದು ವಿಧಾನ ಇದೆಯೇ” ಎಂದು ನ್ಯಾಯಾಲಯ ಕೇಳಿತು.

ಸರ್ಕಾರ ಅಂತಹ ಅಧ್ಯಯನ ಕೈಗೊಳ್ಳದಿದ್ದರೆ ಆ ಅಧ್ಯಯನ ನಡೆಸುವುದಕ್ಕಾಗಿ ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಕೆಲವು ವೈದ್ಯರು, ದೇಶದೆಲ್ಲೆಡೆಯ ಗಣ್ಯರು ಹಾಗೂ ಕೆಲ ವೈಜ್ಞಾನಿಕ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿತು.

Also Read
ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌; ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ

ನೇಣಿನ ಮೂಲಕ ಮರಣದಂಡನೆ ವಿಧಿಸುವುದು ಸೂಕ್ತ ಎಂಬ ತೀರ್ಮಾನಕ್ಕೇ ನಾವು ನಂತರ ಬಂದರೂ ಕೂಡ ಅಧ್ಯಯನದ ಸಹಾಯ ನಮಗೆ ಬೇಕಾಗಿದೆ ಎಂದು ಪೀಠ ನುಡಿಯಿತು.

ನೇಣಿನ ಮೂಲಕ ಮರಣದಂಡನೆ ವಿಧಿಸದೇ, ಚುಚ್ಚುಮದ್ದು ಅಥವಾ ವಿದ್ಯುದಾಘಾತದಂತಹ ತುಲನಾತ್ಮಕ ನೋವುರಹಿತ ವಿಧಾನ ಅಳವಡಿಸಿಕೊಳ್ಳುವಂತೆ ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

Also Read
ಮುಂಬೈನ ಘನತೆ ಕುಗ್ಗಿದೆ: ಸಾಕಿ ನಾಕಾ ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ನೇಣಿಗೆ ಬದಲಾಗಿ ವಿದ್ಯುದಾಘಾತ, ಗುಂಡೇಟು ಅಥವಾ ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ಮರಣ ದಂಡನೆ ವಿಧಿಸುತ್ತಿರುವ ದೇಶಗಳಲ್ಲಿ ಹೆಚ್ಚಳ ಕಂಡುಬಂದಿರುವುದಾಗಿ ಕಾನೂನು ಆಯೋಗದ 187ನೇ ವರದಿಯಲ್ಲಿ ತಿಳಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಖುದ್ದು ವಾದ ಮಂಡಿಸಿದ ಮಲ್ಹೋತ್ರಾ ಅವರು ನೇಣು ಹಾಕುವ ಪ್ರಕ್ರಿಯೆಯು ಸಂಪೂರ್ಣವಾಗಿ ಕ್ರೂರ ಮತ್ತು ಅಮಾನವೀಯವಾದುದು ಎಂದರು. ನ್ಯಾ. ನರಸಿಂಹ ಅವರು ಘನತೆಯ ಸಾವು ಮತ್ತು ಸಾಧ್ಯವಾದಷ್ಟು ನೋವು ರಹಿತ ಮರಣ ದೊರೆಯಬೇಕು. ನೇಣು ಹಾಕುವುದು ಹೀಗೆಯೇ ಇರುತ್ತದೆ ಎಂದು ತೋರುತ್ತದೆ. ಚುಚ್ಚುಮದ್ದಿನ ಮೂಲಕ ತಕ್ಷಣ ಸಾವು ಸಂಭವಿಸುವುದಿಲ್ಲ ಎನ್ನುವುದಕ್ಕೆ ಉದಾಹರಣೆಗಳಿವೆ ಎಂದರು.

Also Read
ಶಕ್ತಿ ಮಿಲ್ ಅತ್ಯಾಚಾರ ಪ್ರಕರಣ: 3 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಬಾಂಬೆ ಹೈಕೋರ್ಟ್

ಆಗ ಮಲ್ಹೋತ್ರಾ “ಯಾವುದೇ ಪ್ರಕ್ರಿಯೆ ದೋಷರಹಿತವಲ್ಲ. ನೇಣು ಹಾಕುವುದಕ್ಕೂ ಅದನ್ನು ನಾವು ಹೋಲಿಸಬೇಕು” ಎಂದರು.

"ಅಮೆರಿಕದಲ್ಲಿ ಮಾರಣಾಂತಿಕ ಚುಚ್ಚುಮದ್ದಿನಿಂದ ಉಂಟಾಗುವ ನೋವಿನ ಬಗ್ಗೆ ಬಲವಾದ ಪುರಾವೆಗಳಿವೆ. ನಾನು ಈ ವಿಚಾರವಾಗಿ ಸಾಕಷ್ಟು ಓದಿದ್ದೇನೆ," ಎಂದು ಸಿಜೆಐ ಹೇಳಿದರು.

Also Read
ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಆರಿಜ್‌ ಖಾನ್‌ಗೆ ಗಲ್ಲು ಶಿಕ್ಷೆ, ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದ ದೆಹಲಿ ನ್ಯಾಯಾಲಯ

ದೆಹಲಿಯಲ್ಲಿ ನೇಣುಗಂಬಕ್ಕೇರಿಸುವ ಕೆಲಸ ಮಾಡುವವರು (ಹ್ಯಾಂಗ್‌ಮನ್‌) ಲಭ್ಯ ಇಲ್ಲ. ಅವರನ್ನು ಕಲ್ಕತ್ತಾ, ಮುಂಬೈ ಇತ್ಯಾದಿ ನಗರಗಳಿಂದ ಕರೆಸಿಕೊಳ್ಳಲಾಗುತ್ತದೆ ಎಂದು ಮಲ್ಹೋತ್ರಾ ವಿವರಿಸಿದರು.

ನ್ಯಾಯಾಲಯವು ಅಂತಿಮವಾಗಿ ಪ್ರಕರಣವನ್ನು ಮೇ 2ಕ್ಕೆ ಮುಂದೂಡಿತು. ನೇಣು ಹಾಕುವ ವಿಧಾನ ಇತರೆ ವಿಧಾನಗಳ ಹೋಲಿಕೆಯಲ್ಲಿ ತೃಪ್ತಿಕರವೇ ಅಥವಾ ಮತ್ತೊಂದು ವಿಧಾನ ಅಳವಡಿಸಿಕೊಳ್ಳುವ ಮೂಲಕ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವುದೇ ಎಂಬುದನ್ನು ನಾವು ಪರಿಶೀಲಿಸಬೇಕಿದೆ ಎಂದು ಪೀಠ ಹೇಳಿತು.

Related Stories

No stories found.
Kannada Bar & Bench
kannada.barandbench.com