Bombay High Court
Bombay High Court 
ಸುದ್ದಿಗಳು

ಭಕ್ಷಿಸುವ ಉದ್ದೇಶದಿಂದ ತಾಯಿಯ ಹತ್ಯೆ: ಮರಣ ದಂಡನೆಗೊಳಗಾದ ಅಪರಾಧಿಗೆ ಮಗಳ ಮದುವೆಗೆ ಹಾಜರಾಗಲು ಬಾಂಬೆ ಹೈಕೋರ್ಟ್ ಅನುಮತಿ

Bar & Bench

ತನ್ನ ತಾಯಿಯನ್ನು ಕೊಂದು ಆಕೆಯ ದೇಹದ ಭಾಗಗಳನ್ನು ತಿನ್ನಲು ಯತ್ನಿಸಿದ ಅಪರಾಧದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನಿಗೆ ತನ್ನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಬಾಂಬೆ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಸುನಿಲ್ ರಾಮ ಕುಚಕೊರವಿ ನಡುವಣ ಪ್ರಕರಣ].

ಮದುವೆಗೆ ಹಾಜರಾಗಲು ಫೆಬ್ರವರಿ 23ರಿಂದ 25ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪೊಲೀಸ್ ಬೆಂಗಾವಲಿನಲ್ಲಿ ಅಪರಾಧಿಯನ್ನು ಹೊರಗೆ ಕರೆದೊಯ್ಯಲು ನ್ಯಾಯಾಲಯ ಅನುಮತಿ ನೀಡಿತು,  ಸಂಜೆ 6 ಗಂಟೆಯೊಳಗೆ ಆರೋಪಿಯನ್ನು ಮತ್ತೆ ಜೈಲಿಗೆ ಕರೆತರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಕ್ಷಿಸುವ ಉದ್ದೇಶದಿಂದಲೇ ತಾಯಿಯನ್ನು ಬರ್ಬರವಾಗಿ ಕೊಂದು ಆಕೆಯ ಅಂಗಾಂಗಗಳನ್ನು ಛೇದಿಸಿದ್ದಕ್ಕಾಗಿ ವಿಚಾರಣಾ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿತ್ತು.

ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನು ಕೊಂದು, ಅವಳ ಅಂಗಗಳನ್ನು ತೆಗೆದು ಮೇಜಿನ ಮೇಲೆ ಇರಿಸಿದ್ದ ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ವಿಚಾರಣೆ ವೇಳೆ, ನ್ಯಾ. ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರಿದ್ದ ಪೀಠಕ್ಕೆ ತಿಳಿಸಲಾಯಿತು.

“ನಮಗೆ ಆತನ ಉದ್ದೇಶ ತಿಳಿದಿಲ್ಲ. ಅವರ ಮನೆಯವರು ಕೂಡ ಆ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದರು. ಅವರೊಬ್ಬ (ಅಪರಾಧಿ) ಉತ್ತಮ ವ್ಯಕ್ತಿಯಾಗಿದ್ದರೂ ಎಂದೇ ಅವರೆಲ್ಲರೂ ಹೇಳುತ್ತಾರೆ. ಅವರು ಕಳಂಕರಹಿತ ದಾಖಲೆ ಹೊಂದಿದ್ದರು. ಅವರಿಗೆ ಆಗಾಗ್ಗೆ ತಲೆನೋವು ಬರುತ್ತಿತ್ತು ಹಾಗಾಗಿ ಮದ್ಯ ಸೇವಿಸುತ್ತಿದ್ದರು" ಎಂದು ವಕೀಲ ಯುಗ್ ಮೋಹಿತ್ ಚೌಧರಿ ಹೇಳಿದರು. ಶಿಕ್ಷೆಗೊಳಗಾದ ವ್ಯಕ್ತಿ ತನ್ನ ಮಗಳ ಮದುವೆಗೆ ಹಾಜರಾಗಲು ಒಂದು ವಾರದವರೆಗೆ ತಾತ್ಕಾಲಿಕ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ಆದರೆ ಅಪರಾಧಿಗೆ ತಾತ್ಕಾಲಿಕ ಜಾಮೀನು ನೀಡಲು ಒಲವು ತೋರದ ನ್ಯಾಯಾಲಯ ಪೊಲೀಸ್ ಬೆಂಗಾವಲಿನೊಂದಿಗೆ ಮದುವೆಗೆ ಹಾಜರಾಗಲು ಅನುಮತಿಸಿತು.

ಅಪರಾಧಿಯು ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ ಸೇರಿದವರಾಗಿದ್ದು, ಬೆಂಗಾವಲು ಶುಲ್ಕ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಚೌಧರಿ ಅವರು ತಿಳಿಸಿದಾಗ ನ್ಯಾಯಾಲಯ ಹಣ ಪಾವತಿಗೆ ವಿನಾಯಿತಿ ನೀಡಿತು. ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರವೇ ಪೊಲೀಸರ ಬೆಂಗಾವಲಿಗೆ ಹಣದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿತು.