ಪೆರೋಲ್‌ ಪಡೆಯಲು ಅಫಿಡವಿಟ್‌: ವೈದ್ಯರ ವಿರುದ್ಧ ತನಿಖೆ ನಡೆಸಲು ಭಾರತೀಯ ವೈದ್ಯಕೀಯ ಮಂಡಳಿಗೆ ಹೈಕೋರ್ಟ್‌ ಆದೇಶ

ಬೆಂಗಳೂರಿನ ಲೈಫ್‌ ಕೇರ್ ಆಸ್ಪತ್ರೆಗೆಯ ವೈದ್ಯ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಟಿ ಕೆ ನವೀನ್ ಅವರು ಇಂತಹ ಅಫಿಡವಿಟ್‌ ಅನ್ನು ಯಾವ ಆಧಾರದಲ್ಲಿ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದ ನ್ಯಾಯಾಲಯ.
Karnataka High Court
Karnataka High Court
Published on

ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗೆ ಪೆರೋಲ್ ಮೇಲೆ ಹೊರಗೆ ಬರಲು ವೈದ್ಯಕೀಯ ಅಫಿಡವಿಟ್‌ ನೀಡಿರುವ ವೈದ್ಯರ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಾಸುದೇವ ಅಲಿಯಾಸ್ ವಾಸು 15 ದಿನಗಳ ಪೆರೋಲ್ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತ್ತು.

ಪೆರೋಲ್ ಪಡೆಯಲು ನೀಡಿರುವ ಏಕೈಕ ಆಧಾರ ವೈದ್ಯಕೀಯ ಅಫಿಡವಿಟ್‌. ಆದರೆ, ಅದನ್ನು ಯಾವ ಆಧಾರದ ಮೇಲೆ ನೀಡಲಾಗಿದೆ. ತಾಯಿಯ ಚಿಕಿತ್ಸೆಗೆ ಪುತ್ರನ ಉಪಸ್ಥಿತಿ ಅತ್ಯಗತ್ಯ ಎಂದು ವೈದ್ಯರು ಏಕೆ ಹೇಳಿದ್ದಾರೆ ಎಂಬುದನ್ನು ವಿವರಿಸಿಲ್ಲ ಎಂದಿರುವ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದ್ದು, ವೈದ್ಯರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ ನಿರ್ದೇಶಿಸಿ, ಆದೇಶ ಮಾಡಿದೆ.

ಅಪರಾಧಿಯ ತಾಯಿ ಸಂಧಿವಾತ ಮತ್ತು ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಇದೊಂದು ಗಂಭೀರ ಸಮಸ್ಯೆಯಾಗಿರುವುದರಿಂದ ಪುತ್ರ ಅವರನ್ನು ನೋಡಿಕೊಳ್ಳಬೇಕಿದೆ ಎಂದು ಹೇಳಲಾಗಿರುವ ವೈದ್ಯಕೀಯ ವರದಿ ಆಧರಿಸಿ ಪೆರೋಲ್‌ ಕೇಳಲಾಗಿದೆ. ಬೆಂಗಳೂರಿನ ಲೈಫ್‌ ಕೇರ್ ಆಸ್ಪತ್ರೆಗೆಯ ವೈದ್ಯ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಟಿ ಕೆ ನವೀನ್ ಅವರು ಇಂಥ ಅಫಿಡವಿಟ್‌ ಅನ್ನು ಯಾವ ಆಧಾರದಲ್ಲಿ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಸಕಾರಣ ನೀಡದಿರುವುದರಿಂದ ಅರ್ಜಿ ವಜಾ ಮಾಡಿದೆ.

Attachment
PDF
Vasudev V. Jail Superintendent.pdf
Preview
Kannada Bar & Bench
kannada.barandbench.com