Hijab Ban, Karnataka High Court 
ಸುದ್ದಿಗಳು

ಹಿಜಾಬ್‌ ನಿಷೇಧಿಸಿದ್ದ ಜಡ್ಜ್‌ಗಳಿಗೆ ಬೆದರಿಕೆ: ಆರೋಪಿಗಳಿಗೆ ಇಂಗ್ಲಿಷ್‌ ಅನುವಾದಿತ ಆರೋಪ ಪಟ್ಟಿ ಒದಗಿಸಲು ನಿರ್ದೇಶನ

ನ್ಯಾಯಯುತ ವಿಚಾರಣೆಯ ದೃಷ್ಟಿಯಿಂದ ಆರೋಪಿಗಳಿಗೆ ಇಂಗ್ಲಿಷ್‌ ಅನುವಾದಿತ ಆರೋಪಪಟ್ಟಿ ನೀಡಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಇದು ಈ ಪ್ರಕರಣಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ತಿಳಿಸಿದ ವಿಶೇಷ ಸರ್ಕಾರಿ ಅಭಿಯೋಜಕರು.

Bar & Bench

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿ ಹಾಗೂ ಸಂಬಂಧಿತ ದಾಖಲೆಗಳ ಇಂಗ್ಲಿಷ್‌ ಅನುವಾದದ ಪ್ರತಿಯನ್ನು ಅವರಿಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಆರ್‌ ರಹಮತುಲ್ಲಾ ಹಾಗೂ ತಿರುವೆಟ್ಟೂರ್‌ ಜಿಲ್ಲೆಯ ಜಮಾಲ್‌ ಮೊಹಮದ್‌ ಉಸ್ಮಾನಿ ಅಲಿಯಾಸ್‌ ಜಮಾಲ್‌ ಮೊಹಮದ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.

ಅರ್ಜಿದಾರರ ಪರ ವಕೀಲ ಎ ವೇಲನ್‌ ಅವರು “ಅರ್ಜಿದಾರ/ಆರೋಪಿಗಳ ಪರವಾಗಿ ಕರ್ನಾಟಕದ ವಕೀಲರ ಸಂಘ ವಕಾಲತ್ತು ಹಾಕಲು ನಿರಾಕರಿಸಿತ್ತು. ಹೀಗಾಗಿ, ತಾನು ವಕಾಲತ್ತು ಹಾಕಿದ್ದೇನೆ. ತನಗೆ ಕನ್ನಡ ಮಾತನಾಡಲು ಬರುತ್ತದೆಯೇ ವಿನಾ ಓದಲು ಬಾರದು. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿರುವ ಆರೋಪಪಟ್ಟಿ ಮತ್ತು ಸಂಬಂಧಿತ ದಾಖಲೆಗಳನ್ನು ಇಂಗ್ಲಿಷ್‌ನಲ್ಲಿ ಒದಗಿಸಬೇಕು” ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ನ್ಯಾಯಯುತ ವಿಚಾರಣೆಯ ದೃಷ್ಟಿಯಿಂದ ಇಂಗ್ಲಿಷ್‌ ಅನುವಾದಿತ ಆರೋಪಪಟ್ಟಿ ನೀಡಲು ಯಾವುದೇ ಸಮಸ್ಯೆಯಿಲ್ಲ. ಆದರೆ, ವೇಲನ್‌ ಅವರು ತಾನು ಈವರೆಗೆ ಯಾವುದೇ ಆರೋಪಿಯನ್ನು ಕನ್ನಡದಲ್ಲಿ ಪ್ರತಿನಿಧಿಸಿ ವಾದಿಸಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಬೇಕು. ಅಲ್ಲದೇ, ಈ ಪ್ರಕರಣಕ್ಕೆ ಸೀಮಿತವಾಗಿ ಆರೋಪ ಪಟ್ಟಿ ಸಲ್ಲಿಸಲಾಗುವುದು. ಬೇರೆ ಪ್ರಕರಣಗಳಿಗೆ ಇದನ್ನು ಅನ್ವಯಿಸಲಾಗದು. ಹಾಗೆ ಮಾಡಿದರೆ ವಿಚಾರಣೆ ವಿಳಂಬಕ್ಕೆ ಇದು ನಾಂದಿ ಹಾಡಲಿದೆ” ಎಂದರು.

ಆಗ ಪೀಠವು “ಎಸ್‌ಪಿಪಿಯವರು ಇಂಗ್ಲಿಷ್‌ ಅನುವಾದ ನೀಡಲು ಒಪ್ಪಿದ್ದಾರೆ. ಹೀಗಾಗಿ, ಪ್ರಕರಣ ಇತ್ಯರ್ಥ ಮಾಡುವುದು ಸೂಕ್ತ. ಕನ್ನಡದಲ್ಲಿ (ವೇಲನ್) ವಾದಿಸಿದ್ದಾರೆ ಎಂಬ ವಿಚಾರ ಮುಂದಿಟ್ಟು ಪ್ರಾಮಾಣಿಕತೆ ವಿಚಾರ ಪರಿಶೀಲನೆಗೆ ಹೋಗುವುದು ಬೇಡ” ಎಂದು ಮೌಖಿಕವಾಗಿ ಕಿವಿಮಾತು ಹೇಳಿತು.

ಅಂತಿಮವಾಗಿ ನ್ಯಾಯಾಲಯವು “ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾಧಿಕಾರಿಯು ಕನ್ನಡದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅರ್ಜಿದಾರರಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವುದಿಲ್ಲ. ಸುಪ್ರೀಂ ಕೋರ್ಟ್‌ ಪ್ರಕರಣವೊಂದರಲ್ಲಿ ಆರೋಪಿ/ಅವರ ವಕೀಲರಿಗೆ ನಿರ್ದಿಷ್ಟ ಭಾಷೆ ಬಾರದಿದ್ದರೆ ಇಂಗ್ಲಿಷ್‌ ಅನುವಾದದ ದಾಖಲೆಗಳನ್ನು ಒದಗಿಸುವಂತೆ ಆದೇಶಿಸಿದೆ. ಇದೇ ವಿಚಾರ ಉಲ್ಲೇಖಿಸಿ ತಮಗೆ ಕನ್ನಡ ಓದಲು ಮತ್ತು ಬರೆಯಲು ಬಾರದು ಎಂದು ಆರೋಪಿಗಳ ಪರ ವಕೀಲ ವೇಲನ್‌ ಅಫಿಡವಿಟ್‌ ಸಲ್ಲಿಸಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದ್ದು, ಆರೋಪ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳ ಅನುವಾದವನ್ನು ಆರೋಪಿಗಳಿಗೆ ಒದಗಿಸಲು ಸರ್ಕಾರಕ್ಕೆ ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ: ಎರಡು ವರ್ಷಗಳ ಹಿಂದೆ ಮುಸ್ಲಿಮ್‌ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು 2022ರ ಮಾರ್ಚ್‌ 15ರಂದು ತೀರ್ಪು ಪ್ರಕಟಿಸಿತ್ತು.

ಈ ತೀರ್ಪು ವಿರೋಧಿಸಿ ಹಲವು ಧಾರ್ಮಿಕ ಸಂಘಟನೆಗಳು ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ತಮಿಳುನಾಡು ತವ್ಹೀದ್‌ ಜಮಾತ್‌ (ಟಿಎನ್‌ಟಿಜೆ) ಆಡಿಟಿಂಗ್‌ ಸಮಿತಿಯ ಸದಸ್ಯ ರಹಮತುಲ್ಲಾ ಅವರು ಜಾರ್ಖಂಡ್‌ನಲ್ಲಿ ನ್ಯಾಯಾಧೀಶ ಉತ್ತಮ್‌ ಆನಂದ್‌ ಅವರು ವಾಯು ವಿಹಾರದಲ್ಲಿದ್ದಾಗ ಕೊಲೆ ಮಾಡಿದ ರೀತಿ ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡಬೇಕು‌ ಎಂದು ಮದುರೈನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದ್ದರು. ಹೀಗೆ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮತ್ತೊಂದು ಕಡೆ ಹೈಕೋರ್ಟ್‌ ನ್ಯಾಯಮೂರ್ತಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಟಿಎನ್‌ಟಿಜೆ ವಕ್ತಾರ ಜಮಾಲ್‌ ಮೊಹಮದ್‌ ಉಸ್ಮಾನಿ ಅವರನ್ನು ತಾಂಜಾಪೂರ ಪೊಲೀಸರು ಬಂಧಿಸಿದ್ದರು.

ಈ ಇಬ್ಬರ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 506(1), 505 (1) (ಸಿ), 505 (1) (ಬಿ), 153ಎ, 109, 504, 505 (2) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 15 ಮತ್ತು 18ರ ಅಡಿ ಪ್ರಕರಣ ದಾಖಲಿಸಲಾಗಿದೆ.