ಹಿಜಾಬ್ ನಿಷೇಧಿಸಿ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ ಸೆಕ್ಷನ್ 21ರ ಅಡಿ ಮೇಲ್ಮನವಿ ಸಲ್ಲಿಸಿದ್ದ ರಹಮತುಲ್ಲಾ ಹಾಗೂ ಜಮಾಲ್ ಮೊಹಮದ್ ಉಸ್ಮಾನಿ ಅಲಿಯಾಸ್ ಜಮಾಲ್ ಮೊಹಮದ್ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.
“ಎನ್‌ಐಎ ಕಾಯಿದೆ ಸೆಕ್ಷನ್ 21ರ ಅಡಿ ಮೇಲ್ಮನವಿ ಮಾನ್ಯ ಮಾಡಿರುವುದರಿಂದ ಅರ್ಜಿದಾರರು ಸಿಆರ್‌ಪಿಸಿ ಸೆಕ್ಷನ್ 439ರ ಅಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುನರ್ ಸ್ಥಾಪಿಸಲಾಗಿದೆ. ಅಲ್ಲದೇ, ಮೇ 21 ಮತ್ತು ಜುಲೈ 11ರಂದು ವಿಚಾರಣಾಧೀನ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ಬದಿಗೆ ಸರಿಸಲಾಗಿದೆ. ವಿಚಾರಣಾಧೀನ ನ್ಯಾಯಾಲಯದ ಆಕ್ಷೇಪಾರ್ಹ ಆದೇಶವನ್ನು ಬದಿಗೆ ಸರಿಸಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 439 ಜೊತೆಗೆ 167(2)ರ ಅಡಿ ಸಲ್ಲಿಸಿರುವ ಅರ್ಜಿಯನ್ನು ಷರತ್ತಿಗೆ ಒಳಪಟ್ಟು ಮಾನ್ಯ ಮಾಡಲಾಗಿದೆ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಲಾಗಿದೆ.
“ಆರೋಪಿಗಳಾದ ರಹಮತುಲ್ಲಾ ಮತ್ತು ಜಮಾಲ್ ಮೊಹಮದ್ ಉಸ್ಮಾನಿ ಅಲಿಯಾಸ್ ಜಮಾಲ್ ಮೊಹಮದ್ ಅವರು ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಬಾಂಡ್, ಇಬ್ಬರ ಭದ್ರತೆ ನೀಡಬೇಕು. ವಿಚಾರಣೆಯ ಎಲ್ಲಾ ದಿನದಂದು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಪ್ರಾಸಿಕ್ಯೂಷನ್ ಸಾಕ್ಷಿಯನ್ನು ನಾಶಪಡಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಮಾರ್ಚ್ 15ರಂದು ತೀರ್ಪು ಪ್ರಕಟಿಸಿತ್ತು.
ತೀರ್ಪು ವಿರೋಧಿಸಿ ಹಲವು ಧಾರ್ಮಿಕ ಸಂಘಟನೆಗಳು ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ತಮಿಳುನಾಡು ತವ್ಹೀದ್ ಜಮಾತ್ (ಟಿಎನ್‌ಟಿಜೆ) ಆಡಿಟಿಂಗ್ ಸಮಿತಿಯ ಸದಸ್ಯ ರಹಮತುಲ್ಲಾ ಅವರು ಜಾರ್ಖಂಡ್‌ನಲ್ಲಿ ನ್ಯಾಯಾಧೀಶ ಉತ್ತಮ್ ಆನಂದ್ ಅವರು ವಾಯು ವಿಹಾರದಲ್ಲಿದ್ದಾಗ ಕೊಲೆ ಮಾಡಿದರ ರೀತಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡಬೇಕು ಮದುರೈನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದ್ದರು. ಹೀಗೆ ಹೇಳುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮತ್ತೊಂದು ಕಡೆ ಹೈಕೋರ್ಟ್ ನ್ಯಾಯಮೂರ್ತಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಟಿಎನ್‌ಟಿಜೆ ವಕ್ತಾರ ಜಮಾಲ್ ಮೊಹಮದ್ ಉಸ್ಮಾನಿ ಅವರನ್ನು ತಾಂಜಾಪೂರ ಪೊಲೀಸರು ಬಂಧಿಸಿದ್ದರು.
ಈ ಇಬ್ಬರ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 506(1), 505 (1) (ಸಿ), 505 (1) (ಬಿ), 153ಎ, 109, 504, 505 (2) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 15 ಮತ್ತು 18ರ ಅಡಿ ಪ್ರಕರಣ ದಾಖಲಿಸಲಾಗಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್, ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್ ಜವಳಿ ಪ್ರತಿನಿಧಿಸಿದ್ದರು.