Supreme Court
Supreme Court 
ಸುದ್ದಿಗಳು

ಸೇನಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ವ್ಯಭಿಚಾರ ನಿರಪರಾಧೀಕರಣ ಪರಿಣಾಮ ಬೀರದು: ಸುಪ್ರೀಂ ಕೋರ್ಟ್

Bar & Bench

ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರ ಅಪರಾಧವಲ್ಲ ಎಂದು ತಾನು ನೀಡಿದ್ದ ತೀರ್ಪು ವಿವಾಹೇತರ ಸಂಬಂಧಗಳಲ್ಲಿ ತೊಡಗಿರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಆರಂಭಿಸಲು ಸಶಸ್ತ್ರ ಪಡೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟಪಡಿಸಿದೆ [ಜೋಸೆಫ್ ಶೈನ್ ಮತ್ತು ಭಾರತ ಒಕ್ಕೂಟ ಕಾರ್ಯದರ್ಶಿ ನಡುವಣ ಪ್ರಕರಣ].

ವ್ಯಭಿಚಾರವನ್ನು  ನಿರಪರಾಧೀಕರಣಗೊಳಿಸಿ ಜೋಸೆಫ್ ಶೈನ್ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪು ಸೇನಾ ಕಾಯಿದೆಯ ಸೆಕ್ಷನ್ 45 ಮತ್ತು 63 ಅಥವಾ ನೌಕಾಪಡೆ ಮತ್ತು ವಾಯುಪಡೆಯ ಕಾಯಿದೆಯ ತತ್ಸಂಬಂಧಿತ ನಿಯಮಾವಳಿಗಳೊಂದಿಗೆ ವ್ಯವಹರಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ತಿಳಿಸಿದೆ.

“ಇದು (ಜೋಸೆಫ್‌ ಶೈನ್‌ ತೀರ್ಪು) ಈ ನ್ಯಾಯಾಲಯ ವ್ಯಬಿಚಾರವನ್ನು ಸಮ್ಮತಿಸಿದೆ ಎಂದಲ್ಲ. ಇದು ಸಿವಿಲ್‌ ತಪ್ಪಾಗಿದ್ದು ಮದುವೆಗೆ ಧಕ್ಕೆ ತರುವುದಕ್ಕೆ ಆಧಾರವಾಗಿ ಮುಂದುವರೆಯುತ್ತದೆ…  ಈ ನ್ಯಾಯಾಲಯವು ಸೇನಾ ಸೆಕ್ಷನ್ 45 ಮತ್ತು 63ಕ್ಕೆ ಸಂಬಂಧಿಸಿದಂತಾಗಲೀ ಅಥವಾ ಬೇರೆ ಕಾಯಿದೆಗಳಲ್ಲಿರುವ ನಿಬಂಧನೆಗಳ ಬಗ್ಗೆಯಾಗಲೀ ವ್ಯವಹರಿಸಿಲ್ಲ. ನಾವು ಈ ನಿಲುವನ್ನು ಮಾತ್ರ ಸ್ಪಷ್ಟಪಡಿಸಿ ಅರ್ಜಿ ವಿಲೇವಾರಿ ಮಾಡುತ್ತೇವೆ” ಎಂದು ನ್ಯಾಯಾಲಯ ಹೇಳಿತು.

ಸೇನಾ ಕಾಯಿದೆಯ ಸೆಕ್ಷನ್ 45 ಮತ್ತು 63, ಅನುಚಿತ ನಡವಳಿಕೆ ಮತ್ತು ಸೇನಾಶಿಸ್ತಿಗೆ ಅಡ್ಡಿಪಡಿಸುವ ಕೃತ್ಯಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿವೆ.

ಭಾರತದಲ್ಲಿ ವ್ಯಭಿಚಾರವನ್ನು ಅಪರಾಧವಲ್ಲ ಎಂದು 2018ರಲ್ಲಿ ಜೋಸೆಫ್ ಶೈನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪು ವ್ಯಭಿಚಾರ ಮಾಡುವ ಸಶಸ್ತ್ರ ಪಡೆಗಳ ಸದಸ್ಯರಿಗೆ ಶಿಕ್ಷೆ ನೀಡುವ ಹಾದಿಯಲ್ಲಿ ಅಡ್ಡಿಯಾಗಲಿದೆಯೇ ಎಂಬ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿತ್ತು.