Justice NV Ramana
Justice NV Ramana 
ಸುದ್ದಿಗಳು

ಅಸ್ತಿತ್ವಕ್ಕೆ ಬಾರದ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರ: ಸರ್ಕಾರ ಪ್ರಸ್ತಾವನೆ ಮರುಪರಿಶೀಲಿಸುವ ಭರವಸೆ ಇದೆ ಎಂದ ಸಿಜೆಐ

Bar & Bench

ನ್ಯಾಯಾಂಗ ಮೂಲಸೌಕರ್ಯ ಸುಧಾರಿಸಲು ಅಗತ್ಯವಾದ ರಾಷ್ಟ್ರೀಯ ಮಟ್ಟದ ಪ್ರಾಧಿಕಾರ ರಚನೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ವಿಷಾದ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ಶನಿವಾರ ನಡೆದ 18ನೇ ಅಖಿಲ ಭಾರತ ಕಾನೂನು ಸೇವಾ ಪ್ರಾಧಿಕಾರಗಳ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ನೀಡಿದ್ದ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಈ ಮಾತುಗಳನ್ನಾಡಿದರು.

"ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನ್ಯಾಯಾಂಗ ಮೂಲಸೌಕರ್ಯ ಅಭಿವೃದ್ಧಿಗಾಗಿ ಸ್ವತಂತ್ರ ಪ್ರಾಧಿಕಾರಗಳ ರಚನೆಗೆ ನಾನು ಪ್ರಸ್ತಾಪಿಸಿದ್ದೆ. ದುರದೃಷ್ಟವಶಾತ್ ಅದು ಕಾರ್ಯರೂಪಕ್ಕೆ ಬಂದಿಲ್ಲ. ಭಾರತ ಸರ್ಕಾರ ಪ್ರಸ್ತಾವನೆಯನ್ನು ಮರುಪರಿಶೀಲಿಸುತ್ತದೆ ಎಂದು ಭಾವಿಸುತ್ತೇನೆ" ಎಂಬುದಾಗಿ ಅವರು ಹೇಳಿದರು.

ಅಲ್ಲದೆ ಕ್ರಿಮಿನಲ್‌ ಪ್ರಕರಣಗಳಲ್ಲಿ ತೀರ್ಪು ನೀಡಲು ತೆಗೆದುಕೊಳ್ಳುತ್ತಿರುವ ಸಮಯದಿಂದಾಗಿ ವಿಚಾರಣೆಯೇ ಶಿಕ್ಷೆಯಾಗಿ ಪರಿಣಮಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

“ತರಾತುರಿಯ ವಿವೇಚನಾರಹಿತ ಬಂಧನಗಳಿಂದ ಹಿಡಿದು ಜಾಮೀನು ಪಡೆಯುವಲ್ಲಿನ ತೊಡಕುಗಳವರೆಗೆ ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಸೆರೆವಾಸಕ್ಕೆ ಕಾರಣವಾಗುವ ಪ್ರಕ್ರಿಯೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ದಕ್ಷತೆ ಹೆಚ್ಚಿಸಲು ಸಮಗ್ರ ಕ್ರಿಯಾ ಯೋಜನೆ ಅಗತ್ಯವಿದೆ” ಎಂದು ಅವರು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ನ್ಯಾಯಾಂಗ ಮೂಲಸೌಕರ್ಯ ಅಗತ್ಯ ಪೂರೈಸಲು ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮ ರಚಿಸುವಂತೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅವರು 2021ರ ಮಾರ್ಚ್‌ನಲ್ಲಿ ಒತ್ತಾಯಿಸಿದ್ದರು.