[ನ್ಯಾಯಾಂಗ ಮೂಲಸೌಕರ್ಯ] ಹಣವಷ್ಟೇ ಸಾಲದು ಶಾಸನಾತ್ಮಕ ವ್ಯವಸ್ಥೆಯನ್ನೂ ಕೇಳುತ್ತಿದ್ದೇವೆ: ಸಿಜೆಐ ರಮಣ

"ನಾನು ಕೇಂದ್ರ ಮತ್ತು ರಾಜ್ಯಗಳಲ್ಲಿ ಶಾಸನಬದ್ಧ ಪ್ರಾಧಿಕಾರಗಳನ್ನು ಸ್ಥಾಪಿಸಲು ಸರ್ಕಾರವನ್ನು ಕೇಳುತ್ತಿದ್ದೇನೆ. ಶೀಘ್ರದಲ್ಲೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುವುದೆಂದು ನಿರೀಕ್ಷಿಸುವೆ" ಎಂದು ಅವರು ಹೇಳಿದರು.
Justice NV Ramana

Justice NV Ramana

ದೇಶದ ನ್ಯಾಯಾಂಗ ಮೂಲಸೌಕರ್ಯ ಸುಧಾರಿಸುವಲ್ಲಿ ಸರ್ಕಾರದಿಂದ ಸಾಕಷ್ಟು ಬೆಂಬಲದ ಕೊರತೆ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಶನಿವಾರ ವಿಷಾದ ವ್ಯಕ್ತಪಡಿಸಿದರು.

ದೆಹಲಿ ಹೈಕೋರ್ಟ್ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕು ವ್ಯಾಜ್ಯಗಳ ತೀರ್ಪು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಿಜೆಐ ಮಾತನಾಡುತ್ತಿದ್ದರು. ನ್ಯಾಯಾಂಗ ಮೂಲಸೌಕರ್ಯ ಸುಧಾರಣೆಗಾಗಿ ಸಮನ್ವಯ ಮತ್ತು ಮೇಲ್ವಿಚಾರಣೆ ನಡೆಸಲು ಸಾಂಸ್ಥಿಕ ಕಾರ್ಯವಿಧಾನ ಜಾರಿಗೆ ತರಬೇಕಾಗಿದೆ ಎಂದು ಅವರು ಹೇಳಿದರು.

"ಕೇವಲ ಹಣ ಹಂಚಿಕೆ ಸಾಕಾಗುವುದಿಲ್ಲ, ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠ ಬಳಕೆಗೆ ತರುವುದು ಸವಾಲು. ಕೇಂದ್ರ ಮತ್ತು ರಾಜ್ಯಗಳಲ್ಲಿ ಶಾಸನಬದ್ಧ ಪ್ರಾಧಿಕಾರಗಳನ್ನು ಸ್ಥಾಪಿಸಲು ನಾನು ಸರ್ಕಾರವನ್ನು ಕೇಳುತ್ತಿರುವೆ. ಶೀಘ್ರದಲ್ಲೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ," ಎಂದು ಅವರು ಹೇಳಿದರು.

Also Read
ಕರ್ನಾಟಕದ ನ್ಯಾಯಾಂಗ ಮೂಲಸೌಕರ್ಯ ಶ್ಲಾಘಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ

ನ್ಯಾಯಾಂಗ ಮೂಲಸೌಕರ್ಯ ಸುಧಾರಿಸಬೇಕಾಗಿದೆ. ದುರದೃಷ್ಟವಶಾತ್, ನಾವು ಈ ಕ್ಷೇತ್ರದಲ್ಲಿ ಕನಿಷ್ಠ ಮೂಲಭೂತ ಮಾನದಂಡಗಳನ್ನು ಸಹ ಪೂರೈಸುತ್ತಿಲ್ಲ ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಕೂಡ ನ್ಯಾ. ರಮಣ ಅವರು ನ್ಯಾಯಾಂಗದಲ್ಲಿ ಏಕರೂಪತೆ ಮತ್ತು ಗುಣಮಟ್ಟ ಹೆಚ್ಚಿಸಲು ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಸಹಕಾರ ಸಂಸ್ಥೆ ಸ್ಥಾಪಿಸಲು ಕೈಜೋಡಿಸುವಂತೆ ಕೇಳಿದ್ದರು.

ಸಮಾರಂಭದಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತರರು ಭಾಗವಹಿಸಿದ್ದರು.

ಏಪ್ರಿಲ್ 1, 2021ರಿಂದ ಮಾರ್ಚ್ 31, 2026ರವರೆಗೆ ಒಟ್ಟು ₹ 9,000 ಕೋಟಿ ವೆಚ್ಚದಲ್ಲಿ ಮುಂದಿನ ಐದು ವರ್ಷಗಳ ಕಾಲ ನ್ಯಾಯಾಂಗ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಗೆ (CSS) ಭಾರತ ಸರ್ಕಾರ ಕಳೆದ ಜುಲೈನಲ್ಲಿ ಅನುಮೋದನೆ ನೀಡಿದೆ.

Related Stories

No stories found.
Kannada Bar & Bench
kannada.barandbench.com