Punjab and Haryana High Court 
ಸುದ್ದಿಗಳು

ಜಾಮೀನು ಕೊಡಿಸಲು ಡೋಲಿ ಕಾರ್ಯಕ್ರಮವನ್ನೇ ಸ್ಥಗಿತಗೊಳಿಸಿದ ನವವಿವಾಹಿತ ವಕೀಲ- ಬೆನ್ನು ತಟ್ಟಿದ ನ್ಯಾಯಾಲಯ

ಹಿಂದಿನ ದಿನವಷ್ಟೇ ವಿವಾಹವಾಗಿದ್ದ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಕಾರಣ ಬೆಳಗಿನ ಡೋಲಿ ಸಮಾರಂಭವನ್ನೇ ರದ್ದುಪಡಿಸಿದ ಘಟನೆ ನಡೆದಿದ್ದು ಇತ್ತ ಕಕ್ಷೀದಾರನಿಗೂ ಜಾಮೀನು ದೊರೆತಿದೆ.

Bar & Bench

ಒಂದೆಡೆ ಮದುವೆಯ ಸಮಾರಂಭ. ನೂರೆಂಟು ಕನಸುಗಳು, ಹಾರೈಕೆ, ಸಡಗರ. ಮತ್ತೊಂದೆಡೆ ಕಕ್ಷೀದಾರನ ಬಿಡುಗಡೆಯ ಪ್ರಶ್ನೆ, ಕರ್ತವ್ಯದ ಕರೆ, ನ್ಯಾಯ ದೊರಕಿಸಿಕೊಡುವ ಛಲ. ವಕೀಲ ಲುಪಿಲ್‌ ಗುಪ್ತಾ ಅವರಿಗೆ ಯಾವುದೇ ಗೊಂದಲ ಇರಲಿಲ್ಲ. ಸ್ಪಷ್ಟವಾಗಿ ಎರಡನೆಯದನ್ನು ಅವರು ಆಯ್ಕೆ ಮಾಡಿಕೊಂಡರು.

ಅಕ್ಟೋಬರ್‌ 27ರಂದು ವಿವಾಹವಾಗಿದ್ದ ಅವರ ಮದುವೆಯ ಡೋಲಿ ಸಮಾರಂಭ 28ರ ಬೆಳಗ್ಗೆ ನಿಗದಿಯಾಗಿತ್ತು. ಆದರೆ ಅಂದೇ ತಮ್ಮ ಕಕ್ಷೀದಾರರಿಗೆ ಜಾಮೀನು ಕೊಡಿಸುವ ಅನಿವಾರ್ಯತೆಯೂ ಎದುರಾಗಿತ್ತು. ಈಗ ಅವರ ಕರ್ತವ್ಯ ಪ್ರಜ್ಞೆ ಪಂಜಾಬ್‌ ಹರ್ಯಾಣ ಹೈಕೋರ್ಟ್‌ನ ಏಕಸದಸ್ಯ ಪೀಠವೊಂದರ ಪ್ರಶಂಸೆಗೆ ಪಾತ್ರವಾಗಿದೆ. ಪ್ರಾಸಿಕ್ಯೂಷನ್‌ ವಾದ ಮಂಡಿಸುವಲ್ಲಿನ ಅತಿಯಾದ ವಿಳಂಬದಿಂದಾಗಿ ಲುಪಿಲ್‌ ಅವರ ಕಕ್ಷೀದಾರರಿಗೆ ಜಾಮೀನು ಕೂಡ ದೊರೆತಿದೆ. ಜೊತೆಗೆ ಪ್ರಕರಣದ ವಿಚಾರಣೆಯಿಂದಾಗಿ ಲುಪಿಲ್‌ ಅವರ ಮದುವೆಯ ಡೋಲಿ ಸಮಾರಂಭ ಹೇಗೆ ವಿಳಂಬವಾಯಿತು ಎಂಬುದೂ ಸಹ ನ್ಯಾಯಾಲಯದ ದಾಖಲೆಗೆ ಹೋಗಿದೆ, ಅದೇ ರೀತಿ ನವವಿವಾಹಿತರಿಗೆ ನ್ಯಾಯಾಲಯದಿಂದ ಶುಭ ಹಾರೈಕೆಗಳೂ ಸಂದಿವೆ.

ವೀಡಿಯೊ ಕಾನ್ಫರೆನ್ಸಿನಲ್ಲಿ ಕಾದು ಕುಳಿತು ತಮ್ಮ ಕಕ್ಷೀದಾರರಿಗೆ ಜಾಮೀನು ಕೊಡಿಸಿದ ಮತ್ತು ಆ ಕಾರಣಕ್ಕೆ ಡೋಲಿ ಕಾರ್ಯಕ್ರಮವನ್ನು ತಡೆ ಹಿಡಿದದನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಅರುಣ್‌ ಮೊಂಗಾ ಅವರು ʼನ್ಯಾಯಾಲಯ ಅವರಿಗೆ ಆನಂದದಾಯಕ ಮತ್ತು ಖುಷಿಯ ಜೀವನ ಬಯಸುತ್ತದೆ; ಎಂದು ತಮ್ಮ ಆದೇಶದಲ್ಲಿ ಹಾರೈಸಿದ್ದಾರೆ.

ಕಕ್ಷಿದಾರನಿಗೂ ಖುಷಿ: 2017ರಲ್ಲಿಯೇ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದರೂ 2020 ರ ಅಕ್ಟೋಬರ್ 28 ರವರೆಗೆ ಪ್ರಾಸಿಕ್ಯೂಷನ್‌ ವಾದ ಮಂಡಿಸಲು ವಿಫಲವಾಗಿತ್ತು. ತಮ್ಮ ಕಕ್ಷಿದಾರನನ್ನು ಬಂಧಿಸುವ ಅಗತ್ಯ ಬಿದ್ದರೂ ಕೂಡ ಅವರು ಬೇಷರತ್ ‌ಆಗಿ ಜಾಮೀನು ಪಡೆಯಲು ಹಕ್ಕುದಾರರಾಗಿದ್ದಾರೆ ಎಂದು ಲುಪಿಲ್‌ ವಾದ ಮಂಡಿಸಿದ್ದರು. ಇದನ್ನೇ ಆಧರಿಸಿ ನ್ಯಾಯಾಲಯ ಲುಪಿಲ್‌ ಅವರ ಕಕ್ಷೀದಾರರಿಗೆ ಜಾಮೀನು ನೀಡಿದೆ.

(ಆದೇಶವನ್ನು ಇಲ್ಲಿ ಓದಿ)

Angrej_Singh_vs_State_of_Punjab.pdf
Preview