Justice B Verappa and Karnataka HC
Justice B Verappa and Karnataka HC 
ಸುದ್ದಿಗಳು

ಅಧಿಕಾರಿಗಳಿಗೆ, ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ, ಹಾಗಾದರೆ ನ್ಯಾಯಾಲಯ ಏತಕ್ಕೆ? ನ್ಯಾ. ವೀರಪ್ಪ

Siddesh M S

“ಅಧಿಕಾರಿಗಳಿಗೆ, ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ. ಹಾಗಾದರೆ ನ್ಯಾಯಾಲಯ ಏಕಿರಬೇಕು?” ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿತು.

ಬೆಂಗಳೂರು ನಿವಾಸಿ ಮೊಹಮ್ಮದ್‌ ಇಕ್ಬಾಲ್ ಎಂಬುವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ‌ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸುಬ್ರಹ್ಮಣ್ಯ ಅವರು “ನ್ಯಾಯಾಲಯದ ಆದೇಶ ಪಾಲಿಸಲು ಅವಕಾಶ ಕೋರಿ ಮನವಿ ಸಲ್ಲಿಸಿದ್ದು, ಪರಿಗಣಿಸಬೇಕು. ಬಹುತೇಕ ಕಡೆ ಸ್ಮಶಾನಕ್ಕೆ ಜಾಗ ನೀಡಲಾಗಿದೆ. ಹಲವು ಕಡೆ ಸರ್ಕಾರದ ಜಾಗವಿಲ್ಲ. ಕರಾಬು ಜಾಗವಿದ್ದರೂ ಅದನ್ನು ನೀಡಲಾಗದು. ಭೂಮಿ ಖರೀದಿ ಮಾಡಿ ಸ್ಮಶಾನಕ್ಕೆ ಜಾಗ ಒದಗಿಸಲು ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ಉಳಿದಂತೆ ಬಹುತೇಕವಾಗಿ ನ್ಯಾಯಾಲಯದ ಆದೇಶ ಪಾಲಿಸಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ನ್ಯಾಯಮೂರ್ತಿ ವೀರಪ್ಪ ಅವರು “ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಮೇಲೆ, ಸಮಯ ಕೋರಿ ಮನವಿ ಸಲ್ಲಿಸಲು ಸಾಧ್ಯವಿಲ್ಲ. ಈ ಮನವಿಗಳು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದರು.

“ಎಎಜಿ ಸುಬ್ರಹ್ಮಣ್ಯ ಅವರೇ ನಾವು ಯಾವುದೇ ಅಧಿಕಾರಿ ಅಥವಾ ಸರ್ಕಾರದ ವಿರುದ್ಧವಿಲ್ಲ. ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿದೆಯೇ ಎಂಬುದನ್ನು ನಾವು ಖಾತರಿಪಡಿಸುತ್ತೇವೆ ಅಷ್ಟೆ. ಸರ್ಕಾರವಾಗಿ ನೀವು ನ್ಯಾಯಾಲಯದ ಆದೇಶವನ್ನು ಉಪೇಕ್ಷೆ ಮಾಡಲಾಗದು. ನಿಮಗೆ ಸಮಸ್ಯೆಯಾಗಿದ್ದರೆ ಅಂದೇ ಮನವಿ ಸಲ್ಲಿಸಬಹುದಿತ್ತು. ಆರು ತಿಂಗಳು ಸಾಕಾಗುವುದಿಲ್ಲ (ಸ್ಮಶಾನಕ್ಕೆ ಜಾಗ ಕಲ್ಪಿಸಲು) ಎಂದು ಹೇಳಬೇಕಿತ್ತು. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಬೂಬು ಹೇಳಲಾಗದು. ಇದು ದುರದೃಷ್ಟಕರ. ಅತಿ ದೊಡ್ಡ ದಾವೆದಾರರಾದ ಸರ್ಕಾರವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ನೀವು ಇತರೆ ದಾವೆದಾರರಿಗೆ ಮಾದರಿಯಾಗಬೇಕು” ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಎಎಜಿ ಸಮಜಾಯಿಷಿಯನ್ನು ಒಪ್ಪದ ನ್ಯಾಯಮೂರ್ತಿಗಳು “ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವುದರ ಕುರಿತು ನ್ಯಾಯಾಲಯದ ಮುಂದೆ ಮನವಿ ಏಕೆ ಸಲ್ಲಿಸಲಿಲ್ಲ? ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿರುವುದನ್ನು ತೋರಿಸಿ. 29 ಸಾವಿರ ಗ್ರಾಮಗಳ ಪೈಕಿ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳು ಎಷ್ಟು ಗ್ರಾಮಗಳಿಗೆ ತೆರಳಿ ಸ್ಮಶಾನ ಇರುವುದರ ಕುರಿತು ಪರಿಶೀಲನೆ ನಡೆಸಿದ್ದಾರೆ? ಜಿಲ್ಲಾ ಕೇಂದ್ರಗಳಲ್ಲಿ ಅಧಿಕಾರಿಗಳು ಹವಾನಿಯಂತ್ರಿತ ಯಂತ್ರದ ಕೆಳಗೆ ಕೂರುತ್ತಾರೆ ಅಷ್ಟೆ" ಎಂದು ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.

ಮುಂದುವರೆದು, "ಎಎಜಿ ಅವರೇ ನೀವು ಹಳ್ಳಿಯಿಂದ ಬಂದಿದ್ದೀರಿ. ನಿಮ್ಮ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇದೆಯೇ ಎಂಬುದನ್ನು ಆತ್ಮಸಾಕ್ಷಿಯಾಗಿ ಹೇಳಿ. ಕನಿಷ್ಠ ಎಎಜಿ ಊರಿನಲ್ಲಿ ಸ್ಮಶಾನಕ್ಕೆ ಜಾಗ ಕೊಡುವ ಮೂಲಕ ನ್ಯಾಯಾಲಯದ ಆದೇಶ ಪಾಲಿಸಲಾಗಿದೆಯೇ ಎಂಬುದನ್ನು ತಿಳಿಸಿ. ನ್ಯಾಯಾಲಯದ ಆದೇಶವಾಗಿ ಮೂರು ವರ್ಷಗಳ ಬಳಿಕ ನೀವು ಸ್ಮಶಾನಕ್ಕೆ ಜಾಗ ನೀಡಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಿದ್ದೀರಿ. ಯಾವ ಸಂದೇಶವನ್ನು ನೀವು ನ್ಯಾಯಾಲಯಕ್ಕೆ ನೀಡುತ್ತಿದ್ದೀರಿ” ಎಂದು ಆಕ್ರೋಶದಿಂದ ನುಡಿದರು.

“ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಫಿಡವಿಟ್‌ ಸಲ್ಲಿಸುತ್ತೇವೆ, ಮನವಿ ಸಲ್ಲಿಸುತ್ತೇವೆ ಎಂಬ ಸಬೂಬು ನಿಲ್ಲಬೇಕು. ನಿಮ್ಮ ಅಧಿಕಾರಿಗಳಿಗೆ, ನಿಮ್ಮ ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ. ಹಾಗಾದರೆ ನ್ಯಾಯಾಲಯ ಏಕಿರಬೇಕು? ನೀವು ಸಲ್ಲಿಸುವ ಅಫಿಡವಿಟ್‌ಗೆ ಪೂರಕವಾಗಿ ದಾಖಲೆಗಳು ಇರಬೇಕು. ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗಳು ಮಾಡಿರುವ ಆದೇಶ ಎಲ್ಲಿದೆ” ಎಂದು ಪ್ರಶ್ನಿಸಿದರು.

“ಎಲ್ಲೆಲ್ಲೆ ಸ್ಮಶಾನಕ್ಕೆ ಜಾಗ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ನೀಡಬೇಕು. ಸರ್ಕಾರ ಅಫಿಡವಿಟ್‌ ಹಾಕುವುದಕ್ಕೂ ಮುನ್ನ ಸ್ಮಶಾನಕ್ಕೆ ಜಾಗ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಈಗ ಸಮರೋಪಾದಿಯಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸುವ ಕೆಲಸ ಮಾಡಿದರೆ ಪರೋಕ್ಷವಾಗಿ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದರೆ ಕಷ್ಟವಾಗುತ್ತದೆ” ಎಂದರು.

“ಯಾರ ಮೇಲೂ ನ್ಯಾಯಾಲಯಕ್ಕೆ ಸಿಟ್ಟಿಲ್ಲ. ನಮ್ಮ ಆದೇಶಗಳನ್ನು ಉಲ್ಲಂಘಿಸಿದರೆ ಅದನ್ನು ಸಹಿಸಲಾಗದು. 16 ವರ್ಷ ನಾನು ಸರ್ಕಾರದ ವಕೀಲನಾಗಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಕೆಲಸವಾಗುತ್ತವೆ. ಆದರೆ, ಮನಸ್ಸು ಮಾಡುವುದಿಲ್ಲ. ಜೈಲು ಎಂದು ಹೇಳಿದಾಗಷ್ಟೇ ಮನಸ್ಸು ಮಾಡುತ್ತಾರೆ” ಎಂದರು.

ಅಂತಿಮವಾಗಿ “ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಕಾಲಾಶವಕಾಶ ಕೋರಿ ಮನವಿ ಸಲ್ಲಿಸಿದ್ದು, 29,076 ಗ್ರಾಮಗಳಲ್ಲಿ ಸ್ಮಶಾನ ಜಾಗ ಇರಲಿಲ್ಲ. ಈ ಪೈಕಿ 2019ರ ಆಗಸ್ಟ್‌ 20ರ ವೇಳೆಗೆ 21,854 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸಲಾಗಿದೆ. 2021ರ ಆಗಸ್ಟ್‌ ವೇಳೆಗೆ ಮತ್ತೆ 5,840 ಗ್ರಾಮಗಳಲ್ಲಿ ಸ್ಮಶಾನದ ಜಾಗ ಕಲ್ಪಿಸಲಾಗಿದೆ. 1,428 ಗ್ರಾಮಗಳಿಗೆ ವಿವಿಧ ಕಾರಣಗಳಿಂದಾಗಿ ಸ್ಮಶಾನ ಜಾಗ ಕಲ್ಪಿಸಲಾಗಿಲ್ಲ ಎಂದು ಅರ್ಜಿ ಸಲ್ಲಿಸಲಾಗಿದೆ. ಎಲ್ಲೆಲ್ಲಿ ಸ್ಮಶಾನ ಜಾಗ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರವು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಆದೇಶಿಸಿದ ಪೀಠವು ವಿಚಾರಣೆ ಮುಂದೂಡಿತು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌ ಆರ್‌ ಉಮಾಶಂಕರ್‌ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದರು.