ಸುದ್ದಿಗಳು

[ದೆಹಲಿ ವಾಯುಮಾಲಿನ್ಯ] ಮಾಲಿನ್ಯ ನಿರ್ವಹಣೆ ಬಗ್ಗೆ ಕೇಂದ್ರದ ಅಫಿಡವಿಟ್‌; ಟಿವಿ ಚರ್ಚೆ ಹೆಚ್ಚು ಮಾಲಿನ್ಯಕರ: ಸುಪ್ರೀಂ

ದೆಹಲಿ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಿದೆ.

Bar & Bench

ನಿರ್ದಿಷ್ಟವಾಗಿ ಕಾನೂನು ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಟಿವಿ ಚರ್ಚೆಗಳು ನಡೆಯುತ್ತಿರುವ ರೀತಿಗೆ ಸುಪ್ರೀಂಕೋರ್ಟ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ (ಆದಿತ್ಯ ದುಬೆ ಮತ್ತು ಒಕ್ಕೂಟ ಸರ್ಕಾರ ನಡುವಣ ಪ್ರಕರಣ).

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿತು. ಈ ವೇಳೆ ಸಿಜೆಐ ಅವರು ನ್ಯಾಯಾಲಯದ ಒಂದು ಸಣ್ಣ ಅವಲೋಕನವನ್ನು ಹೇಗೆ ವಿವಾದಾತ್ಮಕ ವಿಷಯವಾಗಿ ಪರಿವರ್ತಿಸಲಾಗುತ್ತದೆ ಎಂದು ಕಿಡಿಕಾರಿದರು.

"ನೀವು (ಟಿವಿ ವಾಹಿನಿಗಳು) ಕೆಲ ಸಮಸ್ಯೆಗಳನ್ನು ಬಳಸಿಕೊಳ್ಳಲು ಬಯಸುತ್ತೀರಿ, ನಾವು ಅವಲೋಕನ ಮಾಡಿದ ಸಂಗತಿಯನ್ನು ನಂತರ ವಿವಾದಕ್ಕೀಡುಮಾಡಲು ಇಚ್ಛಿಸುತ್ತೀರಿ. ಆನಂತರ ದೂರುವ ಆಟ ಮಾತ್ರ ಉಳಿಯುತ್ತದೆ. ಟಿವಿಯಲ್ಲಿನ ಚರ್ಚೆಗಳು ಎಲ್ಲರಿಗಿಂತ ಹೆಚ್ಚು ಮಾಲಿನ್ಯವನ್ನು ಸೃಷ್ಟಿಸುತ್ತಿವೆ" ಎಂದು ಸಿಜೆಐ ಹೇಳಿದರು.

ರಾಜಧಾನಿಯ ವಾಯುಮಾಲಿನ್ಯಕ್ಕೆ ಕೂಳೆ (ಕೃಷಿ ತ್ಯಾಜ್ಯ) ಸುಡುವಿಕೆ ನೀಡುತ್ತಿರುವ ಕೊಡುಗೆಗಳೇನು ಎಂಬ ಬಗ್ಗೆ ದೆಹಲಿ ಸರ್ಕಾರದ ಪರ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರ ವಾದಗಳಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಹೇಳಿಕೆ ನೀಡಿದೆ.

ಬುಧವಾರದ ವಿಚಾರಣೆ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವಾಯುಮಾಲಿನ್ಯಕ್ಕೆ ಕೃಷಿ ತಾಜ್ಯವು ನೀಡುವ ಕೊಡುಗೆಯ ವಿಚಾರವಾಗಿ ತಾನು ಸುಪ್ರೀಂ ಕೋರ್ಟ್‌ನ ದಾರಿ ತಪ್ಪಿಸಿದ್ದೇನೆ ಎಂದು ಟಿವಿ ವಾಹಿನಿಗಳಲ್ಲಿ ಚರ್ಚೆ ನಡೆದಿರುವ ಬಗ್ಗೆ ಪ್ರಸ್ತಾಪಿಸಿದರು. ಆಗ ನ್ಯಾಯಾಲಯವು ತನ್ನನ್ನು ತಪ್ಪುದಾರಿಗೆ ಎಳೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿತು.

"ನಾವು ದಾರಿ ತಪ್ಪಿಲ್ಲ. ನೀವು ಶೇ 10ರಷ್ಟು (ಕೂಳೆ ಸುಡುವಿಕೆ ನಡೆಯುತ್ತಿದೆ) ಎಂದು ಹೇಳಿದ್ದೀರಿ ಆದರೆ ಅದು ಶೇಕಡಾ 30 ರಿಂದ 40 ರಷ್ಟಿದೆ ಎಂದು ಅಫಿಡವಿಟ್‌ನಲ್ಲಿ ತೋರಿಸಲಾಗಿದೆ ಎಂಬುದಾಗಿ ನ್ಯಾ. ಚಂದ್ರಚೂಡ್ ಹೇಳಿದರು. ಆಗ ಸಿಜೆಐ ಅವರು “ಈ ರೀತಿಯ ಟೀಕೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು ನಾವು ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತೇವೆ” ಎಂದರು.

ನಂತರ ಮೆಹ್ತಾ ಅವರು ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ವಾಯು ಗುಣಮಟ್ಟ ಸೂಚ್ಯಂಕವನ್ನು ಸುಧಾರಿಸಲು ರಾಜ್ಯಗಳಿಗೆ ನೀಡಿದ ನಿರ್ದೇಶನಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು.

ಕೂಳೆ ದಹನದಿಂದಾಗುವ ವಾಯುಮಾಲಿನ್ಯ ಶೇ 0ರಿಂದ 58ರವರೆಗೆ ವ್ಯತ್ಯಯವಾಗುತ್ತಿರುತ್ತದೆ ಎಂದು ಕೇಂದ್ರದ ಅಂಕಿ ಅಂಶ ತಿಳಿಸಿರುವುದಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು. "ಬಹುಶಃ ಮೆಹ್ತಾ ಅವರು ನಾಲ್ಕು ಅಥವಾ ಆರು ತಿಂಗಳ ಸರಾಸರಿಯನ್ನು ತೆಗೆದುಕೊಂಡಿದ್ದಾರೆ (10 ಪ್ರತಿಶತಕ್ಕೆ ಬರಲು)," ಡಾ. ಸಿಂಘ್ವಿ ಹೇಳಿದರು.

ಮಾಲಿನ್ಯ ತಗ್ಗಿಸುವುದು ಹೇಗೆ ಎಂಬುದಕ್ಕೆ ನಮ್ಮ ಗಮನವಿದೆ. ಮುಖ್ಯವಲ್ಲದ ವಿಷಯಗಳನ್ನು ನೀವು ಎತ್ತುತ್ತಿದ್ದೀರಿ. ಈ ವಿಚಾರಗಳನ್ನು ಮತ್ತೆ ಮತ್ತೆ ಏಕೆ ಎತ್ತುತ್ತಿದ್ದೀರಿ ಎಂದು ಸಿಜೆಐ ಪ್ರಶ್ನಿಸಿದರು ನಾವು ಯಾರನ್ನೂ ದೂಷಿಸುತ್ತಿಲ್ಲ.. ಇವೆರಡೂ ಕೇಂದ್ರ ನೀಡಿದ ಅಂಕಿ ಅಂಶಗಳು ಎಂದು ಡಾ.ಸಿಂಘ್ವಿ ಹೇಳಿದರು.

"ನಾವು ರೈತರಿಗೆ ದಂಡ ವಿಧಿಸಲು ಬಯಸುವುದಿಲ್ಲ. ರೈತರು ಕೂಳೆ ಸುಡದಂತೆ ಮನವೊಲಿಸಲು ರಾಜ್ಯಗಳಿಗೆ ಮನವಿ ಮಾಡಿದ್ದೇವೆ. ನೀವು ಮತ್ತೆ ಮತ್ತೆ ಇದನ್ನು ಏಕೆ ಎತ್ತುತ್ತಿದ್ದೀರಿ" ಎಂದು ಸಿಜೆಐ ಮತ್ತೆ ಕೇಳಿದರು.

ನಂತರ ಅವರು ನ್ಯಾಯಾಲಯದ ಅವಲೋಕನಗಳನ್ನು ವಿವಾದವಾಗಿ ಪರಿವರ್ತಿಸಲಾಗಿದೆ, ಇದರಿಂದಾಗಿ (ಬಹುಶಃ ರಾಜ್ಯಗಳು ಮತ್ತು ಕೇಂದ್ರಗಳ ನಡುವೆ) ದೂರುವ ಆಟ ಪ್ರಾರಂಭವಾಗಬಹುದು ಎಂದು ಹೇಳಿದರು.

ಏನಿದೆ ಕೇಂದ್ರದ ಅಫಿಡವಿಟ್‌ನಲ್ಲಿ?

ಈ ಮಧ್ಯೆ ದೆಹಲಿ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಿದೆ.

  • ನ. 15ರಂದು ನಡೆದ ಸಭೆಯಲ್ಲಿ ಆಯೋಗವು ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಗೆ ಕೆಲವು ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳನ್ನು ನೀಡಿದೆ.

  • ಬೇರೆ ಇಂಧನಗಳ ಬಳಕೆ ಇಲ್ಲದೆ ಕೇವಲ ಅನಿಲ ಬಳಕೆಯಿಂದ ಮಾತ್ರ ಎಲ್ಲಾ ಕೈಗಾರಿಕೆಗಳು ನಡೆಯಲು ಸಾಧ್ಯವೇ ಎಂಬುದನ್ನು ದೆಹಲಿ ಮತ್ತಿತರ ಎನ್‌ಸಿಆರ್‌ ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು. ಅನುಮೋದನೆ ಇಲ್ಲದ ಇಂಧನ ಬಳಸುವ ಕೈಗಾರಿಕೆಗಳನ್ನು ತಕ್ಷಣ ಜಾರಿಗೆ ಬರುವಂತೆ ಮುಚ್ಚಬೇಕು ಮತ್ತು ಅನಿಲ ಸಂಪರ್ಕ ಹೊಂದಿರುವ ಕೈಗಾರಿಕೆಗಳು ಕೂಡಲೇ ಅನಿಲ ಬಳಕೆಗೆ ಮುಂದಾಗಬೇಕು. ಅಂತಹ ಬದಲಾವಣೆಯ ಉದ್ಯಮವಾರು ಮಾಹಿತಿಯನ್ನು ರಾಜ್ಯ ಸರ್ಕಾರಗಳು ಒದಗಿಸಬೇಕು.

  • ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ 11 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ, ಕೇವಲ ಐದು ಮಾತ್ರ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು. ಉಳಿದವು ಕನಿಷ್ಠ ನವೆಂಬರ್ 30, 2021ರವರೆಗೆ ಕೆಲಸ ನಿರ್ವಹಿಸಬಾರದು.

  • ನವೆಂಬರ್ 21 ರವರೆಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳನ್ನು ಹೊರತುಪಡಿಸಿ ಉಳಿದ ಟ್ರಕ್‌ಗಳು ದೆಹಲಿ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲು ರಾಜ್ಯಕ್ಕೆ ನಿರ್ದೇಶನ ನೀಡಲಾಗಿದೆ. 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು. ದೆಹಲಿ ಸರ್ಕಾರ ಕೂಡಲೇ ಸಾಕಷ್ಟು ಸಂಖ್ಯೆಯ ಸಿಎನ್‌ಜಿ ಬಸ್‌ಗಳನ್ನು ರಸ್ತೆಗಿಳಿಸಬೇಕು.

  • ರೈಲು, ಮೆಟ್ರೊ, ವಿಮಾನ ನಿಲ್ದಾಣ, ಅಂತರರಾಜ್ಯ ಬಸ್‌ ನಿಲ್ದಾಣಗಳು ರಾಷ್ಟ್ರೀಯ ಭದ್ರತೆ/ ರಕ್ಷಣಾ ಸಂಬಂಧಿತ ಚಟುವಟಿಕೆಗಳು/ ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳನ್ನು ಹೊರತುಪಡಿಸಿ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ನವೆಂಬರ್ 21 ರವರೆಗೆ ನಿಲ್ಲಿಸಬೇಕು. ಆಯೋಗವು ಹೊಂಜು ಗೋಪುರಗಳ (ಸ್ಮಾಗ್‌ ಟವರ್‌) ಬಳಕೆಗೆ ನಿರ್ದೇಶನ ನೀಡಿದ್ದು ದುರ್ಬಲ ಸ್ಥಳಗಳಲ್ಲಿ ದಿನಕ್ಕೆ ಕನಿಷ್ಠ ಮೂರು ಬಾರಿ ಸ್ಪ್ರಿಂಕ್ಲರ್‌ಗಳು ಮತ್ತು ಧೂಳು ನಿವಾರಕಗಳನ್ನು ಬಳಸಲು ಆದೇಶಿಸಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಡೀಸೆಲ್ ಜನರೇಟರ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸತಕ್ಕದ್ದು,

  • ಶೇ 50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು. ಕೇಂದ್ರ ಸರ್ಕಾರಿ ನೌಕರರು ಕಾರ್‌ ಪೂಲಿಂಗ್‌ ಮೂಲಕ ಕಚೇರಿ ತಲುಪಬೇಕು. ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕು ಮತ್ತು ಮುಂದಿನ ಆದೇಶದವರೆಗೆ ಆನ್‌ಲೈನ್ ವಿಧಾನದಲ್ಲಿ ತರಗತಿಗಳನ್ನು ನಡೆಸಬೇಕು ಎಂದು ಆಯೋಗ ನಿರ್ದೇಶಿಸಿರುವುದಾಗಿ ಅಫಿಡವಿಟ್‌ ತಿಳಿಸಿದೆ.

  • ಕುತೂಹಲದ ಸಂಗತಿ ಎಂದರೆ ಉತ್ತರ ಭಾರತದ ಬಯಲು ಪ್ರದೇಶಗಳ ವಾಯುಮಾಲಿನ್ಯಕ್ಕೆ ಕಾರಣಗಳಲ್ಲಿ ಒಂದು ಎನ್ನಲಾಗುವ ಕೂಳೆ ಸುಡುವುದಕ್ಕೆ ಸಂಬಂಧಿಸಿದಂತೆ ಆಯೋಗ ಸೂಚನೆ ನೀಡಿದ ಬಗ್ಗೆ ಅಫಿಡವಿಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ.