ವಾಯುಮಾಲಿನ್ಯ ಸೂಚ್ಯಂಕ ಆಧಾರಿತ ಪ್ರತಿಕ್ರಿಯಾತ್ಮ ಕ್ರಿಯಾ ಯೋಜನೆ - ಜಿಆರ್‌ಎಪಿ ಹಂತ 4ರ ಅಡಿಯಲ್ಲಿ ಮಾಲಿನ್ಯ-ವಿರೋಧಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಾಗಿ ವಿವಿಧ ಅಧಿಕಾರಿಗಳ ತಂಡ ರಚಿಸುವಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ವ್ಯಾಪ್ತಿಗೆ ಒಳಪಡುವ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].
ಗಾಳಿಯ ಗುಣಮಟ್ಟ ಹದಗೆಡುತ್ತಿರುವುದರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಜಿಆರ್‌ಎಪಿ ಹಂತ IV ಅನ್ನು ಮರುಜಾರಿಗೊಳಿಸಲಾಗಿದೆ ಎಂದು ತಿಳಿಸಿದ ನಂತರ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಜಿಆರ್‌ಎಪಿ IV ಕ್ರಮಗಳ ಜಾರಿ ಮೇಲ್ವಿಚಾರಣೆಗಾಗಿ ಪೊಲೀಸ್, ಕಂದಾಯ ಅಧಿಕಾರಿಗಳ ಸದಸ್ಯರ ತಂಡ ರಚಿಸುವಂತೆ ಎನ್‌ಸಿಆರ್ ರಾಜ್ಯಗಳಿಗೆ ನಿರ್ದೇಶಿಸುತ್ತಿದ್ದೇವೆ. ತಂಡದ ಸದಸ್ಯರು ನ್ಯಾಯಾಲಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾವು ಹೇಳುತ್ತೇವೆ. ಸಂಬಂಧಪಟ್ಟ ಎಲ್ಲರೂ ತಕ್ಷಣದ ಕ್ರಮ ಕೈಗೊಳ್ಳಲು ಅನುವಾಗುವಂತೆ ಅವರು ಸಿಕ್ಯೂಎಎಂಗೆ ಹಂತ ಜಾರಿಯಾಗಿರುವ ಬಗ್ಗೆ ಇಲ್ಲವೇ ಉಲ್ಲಂಘನೆ ಬಗ್ಗೆ ನಿಯಮಿತವಾಗಿ ವರದಿಯನ್ನು ಸಲ್ಲಿಸಬೇಕು ಎಂದು ಅದು ತಿಳಿಸಿದೆ.
ದೆಹಲಿ ವಾಯು ಮಾಲಿನ್ಯ ಬಿಕ್ಕಟ್ಟಿನ ಪ್ರಕರಣದ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಉಳಿದ ವಿಷಯಗಳೊಂದಿಗೆ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ಪಕ್ಕದ ರಾಜ್ಯಗಳ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯ ಮೇಲ್ವಿಚಾರಣೆ ಮಾಡುತ್ತಿದೆ .
ವಾಯು ಗುಣಮಟ್ಟ ಸುಧಾರಣೆಯ ನಂತರ ದೆಹಲಿ-ಎನ್‌ಸಿಆರ್‌ನಲ್ಲಿನ ನಿರ್ಬಂಧಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ, ವಾಯು ಗುಣಮಟ್ಟ ಹದಗೆಟ್ಟ ಕಾರಣ ಸೋಮವಾರ ಜಿಆರ್‌ಎಪಿ ಹಂತ IV ಅನ್ನು ಅದು ಮರುಜಾರಿಗೊಳಿಸಿತು.
ಡಿಸೆಂಬರ್ 12 ರಂದು ನೀಡಿದ್ದ ಆದೇಶದನ್ವಯ ಪಟಾಕಿಯನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಿರುವುದಾಗಿ ಹರಿಯಾಣ ಹೇಳಿದರೆ, ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ರಾಜಸ್ಥಾನ ಹೇಳಿದೆ. ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸದೆ ಇರಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರಗಳ ವಿಭಿನ್ನ ನಿಲುವುಗಳನ್ನು ಗಮನಿಸಿದ ನ್ಯಾಯಾಲಯ ಎನ್‌ಸಿಆರ್ ವಾಪ್ತಿಯ ರಾಜ್ಯಗಳೆಲ್ಲಾ ಒಂದೇ ನಿರ್ಧಾರ ತೆಗೆದುಕೊಂಡಾಗ ಮಾತ್ರ ನಿಷೇಧ ಪರಿಣಾಮಕಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿತು.
"ಸದ್ಯಕ್ಕೆ ದೆಹಲಿ ಸರ್ಕಾರ ನಿರ್ಬಂಧಿಸಿರುವಂತೆಯೇ ಪಟಾಕಿಗೆ ನಿಷೇಧ ವಿಧಿಸಲು ಉತ್ತರ ಪ್ರದೇಶ ಮತ್ತು ಹರಿಯಾಣಕ್ಕೂ ನಿರ್ದೇಶಿಸುತ್ತೇವೆ" ಎಂದು ಪೀಠ ತಿಳಿಸಿದೆ.