ದೆಹಲಿಯಲ್ಲಿ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟ ಸುಧಾರಿಸುವ ಸಲುವಾಗಿ ಪ್ರಸ್ತುತ ವಿಧಿಸಲಾಗಿರುವ ವಾಯುಮಾಲಿನ್ಯ ಸೂಚ್ಯಂಕ ಆಧರಿತ ಪ್ರತಿಕ್ರಿಯಾತ್ಮ ಕ್ರಿಯಾ ಯೋಜನೆ - ಜಿಆರ್‌ಎಪಿ IV ಕನಿಷ್ಠ ಡಿಸೆಂಬರ್ 2 ರವರೆಗೆ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗ (ವಾಯು ಮಾಲಿನ್ಯ) ಮತ್ತು ಜಿಆರ್ಎಪಿ IV ಜಾರಿ ಕುರಿತಾದ ಪ್ರಕರಣ ].
ಅಷ್ಟರೊಳಗೆ ಜಿಆರ್‌ಎಪಿ ನಿರ್ಬಂಧಗಳನ್ನು ಸಡಿಲಗೊಳಿಸಬೇಕೆ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಕ್ಯೂಎಎಂ) ಸಬೆ ನಡೆಸುವಂತೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಸೂಚಿಸಿದೆ.
ಶಾಲೆಗಳನ್ನು ಹೊರತುಪಡಿಸಿ ಎಲ್ಲಾ ಜಿಆರ್‌ಎಪಿ IV ಕ್ರಮಗಳನ್ನು ಸೋಮವಾರದವರೆಗೆ ಮುಂದುವರೆಸಬೇಕು ಎಂದು ಅದು ಸ್ಪಷ್ಟಪಡಿಸಿದೆ.
ಆದರೆ ಜಿಆರ್‌ಎಪಿ IV ಅಡಿಯಲ್ಲಿ ನಿರ್ಬಂಧ ಇದ್ದರೂ ದೆಹಲಿಗೆ ಟ್ರಕ್‌ಗಳ ಪ್ರವೇಶ ನಿಂತಿಲ್ಲ ಸಂಪೂರ್ಣ ವೈಫಲ್ಯ ಕಂಡುಬಂದಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.
ಬಿಕ್ಕಟ್ಟಿಗೆ ದೀರ್ಘಾವಧಿಯ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿವರವಾಗಿ ಆಲಿಸುವುದನ್ನು ಮುಂದುವರಿಸುವುದಾಗಿ ಪೀಠ ಇಂದು ತಿಳಿಸಿದೆ. ಕೃಷಿ ತ್ಯಾಜ್ಯ ದಹನ, , ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಟ್ರಕ್‌ಗಳ ಪ್ರವೇಶ ಹಾಗೂ ಪಟಾಕಿ ನಿಷೇಧದಂತಹ ವಿಚಾರಗಳನ್ನು ಪರಿಶೀಲಿಸಲಾಗುವುದು ಎಂದು ಅದು ಹೇಳಿದೆ.
ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಪೀಠದಲ್ಲಿ ನಡೆಯಿತು. ಪಕ್ಕದ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೊಲಗದ್ದೆಗಳಲ್ಲಿ ಕೂಳೆ ಸುಡುವ ಪ್ರಕರಣಗಳನ್ನು ತಡೆಯಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ. ಜಿಆರ್‌ಎಪಿ ಹಂತ IVನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.