Supreme Court, Air Pollution 
ಸುದ್ದಿಗಳು

ದೆಹಲಿ ವಾಯು ಗುಣಮಟ್ಟ: ಎಕ್ಯೂಐ ಸುಧಾರಿಸಿದರೂ ಜಿಆರ್‌ಎಪಿ IV ಜಾರಿಯಲ್ಲಿರಬೇಕು ಎಂದ ಸುಪ್ರೀಂ

ಸಾಮಾನ್ಯವಾಗಿ ಎಕ್ಯೂಐ ಎಂಬುದು 450ರ ಮಿತಿ ಮೀರಿದಾಗ ಜಿಆರ್‌ಎಪಿ IV ಜಾರಿಗೆ ಬರುತ್ತದೆ. ಇದು ನಿರ್ಮಾಣ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ, ಶಾಲೆ ಮುಚ್ಚುವುದು ಹಾಗೂ ವಾಹನಗಳ ಸಮ- ಬೆಸ ಯೋಜನೆಯನ್ನು ಒಳಗೊಂಡಿರುತ್ತದೆ.

Bar & Bench

ದೆಹಲಿಯಲ್ಲಿ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟ ಎದುರಿಸಲು, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸುಧಾರಣೆಗೊಂಡು ಮಾಲಿನ್ಯದ ಮಟ್ಟ 300 ಎಕ್ಯೂಐಗಿಂತ ಕಡಿಮೆಯಾದಾಗಲೂ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ IV (ವಾಯುಮಾಲಿನ್ಯ ಸೂಚ್ಯಂಕ ಆಧರಿತ ಪ್ರತಿಕ್ರಿಯಾತ್ಮ ಕ್ರಿಯಾ ಯೋಜನೆ - ಜಿಆರ್‌ಎಪಿ IV) ಜಾರಿಯಲ್ಲಿರುವಂತೆ ಮಾಡುವುದಕ್ಕಾಗಿ ಆದೇಶ ರವಾನಿಸಲು ಆಲೋಚಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಜಿಆರ್‌ಎಪಿ IV ಅನ್ನು ಸಾಮಾನ್ಯವಾಗಿ ವಾಯು ಗುಣಮಟ್ಟ ಸೂಚ್ಯಂಕ 450 ಮೀರಿದಾಗ ಜಾರಿಗೊಳಿಸಲಾಗುತ್ತದೆ. ಇದು ನಿರ್ಮಾಣ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದು, ಶಾಲೆ ಮುಚ್ಚುವಿಕೆ ಮತ್ತು ವಾಹನಗಳಿಗೆ ಬೆಸ-ಸಮ ಯೋಜನೆ ಅಳವಡಿಸುವುದನ್ನು ಒಳಗೊಂಡಿರುತ್ತದೆ.

"ಎಕ್ಯೂಐ 300 ಕ್ಕಿಂತ ಕಡಿಮೆಯಾದರೂ ನಮ್ಮ ಅನುಮತಿಯಿಲ್ಲದೆ ನೀವು 4ರ ಹಂತಕ್ಕಿಂತ ಕೆಳಗೆ ಇಳಿಯುವಂತಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಅದು ನಾವು ನೀಡಬೇಕೆಂದಿರುವ ಆದೇಶವಾಗಿದೆ" ಎಂದು ನ್ಯಾಯಮೂರ್ತಿ ಎ ಎಸ್ ಓಕಾ ಮತ್ತು ಎ ಜಿ ಮಸೀಹ್ ಅವರ ಪೀಠ ಹೇಳಿದೆ. ಮಧ್ಯಾಹ್ನ ಮತ್ತೆ ಪ್ರಕರಣ ಆಲಿಸುವುದಾಗಿ ನ್ಯಾಯಾಲಯ ಆದೇಶಿಸಿದೆ.

'ತೀವ್ರ' ವಾಯು ಗುಣಮಟ್ಟ ಕುಸಿತ ಸೂಚ್ಯಂಕ ಸುಧಾರಣೆಗಾಗಿ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹದಗೆಡುತ್ತಿರುವ ಎಕ್ಯೂಐ ಹತೋಟಿಗೆ ತರಲು  ವಾಯು ಗುಣಮಟ್ಟ ನಿರ್ವಹಣಾ ಆಯೋಗ ದೆಹಲಿಯಲ್ಲಿ ಜಿಆರ್‌ಎಪಿ IV ಜಾರಿಗೆ ತಂದಿತ್ತು.

ಈ ನಿಯಮಾವಳಿ ಪ್ರಕಾರ , ಅಗತ್ಯ ಸರಕು ಸಾಗಾಟ ಟ್ರಕ್‌ ಹೊರತುಪಡಿಸಿ ದೆಹಲಿಗೆ ಉಳಿದೆಲ್ಲಾ ಟ್ರಕ್‌ಗಳ ಪ್ರವೇಶ ನಿಷೇಧ; ಎಲ್ಲಾ ಎಲ್‌ಎನ್‌ಜಿ/ಸಿಎನ್‌ಜಿ/ಎಲೆಕ್ಟ್ರಿಕ್/ಬಿಎಸ್‌-VI  ಡೀಸೆಲ್ ಟ್ರಕ್‌ಗಳಷ್ಟೇ ದೆಹಲಿ ಪ್ರವೇಶಿಸಲು ಅನುಮತಿ;

ಅಗತ್ಯ ಸೇವೆ ಒದಗಿಸದೆ ಇರುವ ಇವಿಗಳು/ಸಿಎನ್‌ಜಿ/ಬಿಎಸ್‌-VI  ಡೀಸೆಲ್ ಅಲ್ಲದ ದೆಹಲಿಯ ಹೊರಗೆ ನೋಂದಾಯಿಸಲಾದ ಲಘು ವಾಣಿಜ್ಯ ವಾಹನಗಳು ಕೂಡ ದೆಹಲಿ ಪ್ರವೇಶಿಸುವಂತಿಲ್ಲ ಎಂದು ನಿಯಮ ಹೇಳುತ್ತದೆ.