Rahul Gandhi, POCSO act and Juvenile Justice act
Rahul Gandhi, POCSO act and Juvenile Justice act  
ಸುದ್ದಿಗಳು

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಚಿತ್ರ ಟ್ವೀಟ್ ಮಾಡಿದ್ದಕ್ಕೆ ರಾಹುಲ್ ಗಾಂಧಿ ಖಾತೆ ಲಾಕ್: ಹೈಕೋರ್ಟ್‌ಗೆ ಟ್ವಿಟರ್

Bar & Bench

ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕುಟುಂಬದ ಚಿತ್ರಗಳನ್ನು ಟ್ವೀಟ್ ಮಾಡಿ ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಖಾತೆ ಲಾಕ್‌ ಮಾಡಿದ್ದಾಗಿ ಟ್ವಿಟರ್ ದೆಹಲಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ಟ್ವಿಟರ್ ಪರವಾಗಿ ಹಾಜರಾದ ಹಿರಿಯ ವಕೀಲ ಸಜನ್ ಪೂವಯ್ಯ, "ಟ್ವೀಟ್ ಅನ್ನು ಈಗಾಗಲೇ ಅಳಿಸಲಾಗಿದೆ . ಏಕೆಂದರೆ ಅದು ಜಾಲತಾಣದ ನೀತಿಯನ್ನು ಉಲ್ಲಂಘಿಸಿದೆ. ರಾಹುಲ್ ಗಾಂಧಿಯವರ ಖಾತೆಯನ್ನು ಕೂಡ ಲಾಕ್ ಮಾಡಲಾಗಿದೆ." ಎಂದರು.

ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠವು ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾಗಿರುವ ಹೊಸ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದಕ್ಕಾಗಿ ಪೊಲೀಸ್ ಆಯುಕ್ತರು ಮತ್ತು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದಿಂದ (ಎನ್‌ಸಿಪಿಸಿಆರ್‌) ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಅರ್ಜಿದಾರರಾದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಮಕರಂದ್ ಸುರೇಶ್ ಮಡ್ಲೇಕರ್ ಅವರು ಕೋರಿದ್ದರು.

ಟ್ವೀಟ್ ತೆಗೆದುಹಾಕುವಂತೆ ಕೋರಿ ಎನ್‌ಸಿಪಿಸಿಆರ್, ಟ್ವಿಟರ್‌ಗೆ ನೋಟಿಸ್ ಕಳುಹಿಸಿದ ನಂತರ ರಾಹುಲ್‌ ಅವರ ಟ್ವಿಟರ್ ಖಾತೆಯನ್ನು ಈಗಾಗಲೇ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ ಎಂಬುದನ್ನು ಕೋರ್ಟ್ ಗಮನಿಸಿತು.

"ಅವರು ತೆಗೆದುಹಾಕಲಾಗಿದೆ ಎಂದು ಹೇಳುತ್ತಿದ್ದರೆ, ಅವರು ತೆಗೆದುಹಾಕಿರುತ್ತಾರೆ. ನ್ಯಾಯಾಲಯದ ಮಧ್ಯಸ್ಥಿಕೆಗೆ ಮುಂಚಿತವಾಗಿ ಟ್ವಿಟರ್ ತಕ್ಷಣ ಕ್ರಮ ಕೈಗೊಂಡಿರುವುದರಿಂದ ಹೆಚ್ಚಿನ ವಿವರಣೆ ನೀಡುವ ಅಗತ್ಯವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಪಟೇಲ್ ಹೇಳಿದರು.

ಅಲ್ಲದೆ, ಪ್ರಕರಣದಲ್ಲಿ ನೋಟಿಸ್ ನೀಡದಿರಲು ನ್ಯಾಯಾಲಯ ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡಿತು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 27ರಂದು ನಡೆಯಲಿದೆ.

ಆಗಸ್ಟ್ 1ರಂದು ದೆಹಲಿ ಕಂಟೋನ್ಮೆಂಟ್ ಪ್ರದೇಶದ ಸ್ಮಶಾನದಲ್ಲಿ ಅತ್ಯಾಚಾರಕ್ಕೊಳಗಾದ 9 ವರ್ಷದ ದಲಿತ ಬಾಲಕಿಯ ಪೋಷಕರೊಂದಿಗೆ ತೆಗೆಸಿಕೊಂಡ ಛಾಯಾಚಿತ್ರಗಳನ್ನು ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದನ್ನು ಪ್ರಶ್ನಿಸಿರುವ ಪ್ರಕರಣ ಇದಾಗಿದೆ.

ಈ ಫೋಟೋಗಳು ಸಂತ್ರಸ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದು 2015ರ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 74 ಮತ್ತು 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್ 23 (2) ರ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.