ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಅನುಮತಿ ನೀಡಲು ಅಟಾರ್ನಿ ಜನರಲ್ ನಕಾರ

ರಾಹುಲ್ ಹೇಳಿಕೆಯಲ್ಲಿ ನ್ಯಾಯಾಂಗದ ಬಗ್ಗೆ ಸಾಮಾನ್ಯ ಉಲ್ಲೇಖ ಇದ್ದು ಹೇಳಿಕೆ ತುಂಬಾ ಅಸ್ಪಷ್ಟವಾಗಿದೆ ಎಂದು ಹೇಳಿ ಎಜಿ ಕೆ ಕೆ ವೇಣುಗೋಪಾಲ್ ಅವರು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅನುಮತಿ ನಿರಾಕರಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಅನುಮತಿ ನೀಡಲು ಅಟಾರ್ನಿ ಜನರಲ್ ನಕಾರ
Published on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನ್ಯಾಯಾಲಯದ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಅಟಾರ್ನಿ ಜನರಲ್ (ಎಜಿ) ಕೆ ಕೆ ವೇಣುಗೋಪಾಲ್ ಅವರು ಒಪ್ಪಿಗೆ ನಿರಾಕರಿಸಿದ್ದಾರೆ. ಭಾರತೀಯ ನ್ಯಾಯಾಂಗದ ವಿರುದ್ಧ ಮಾತನಾಡಿ ಅದರ ಘನತೆಗೆ ಧಕ್ಕೆ ತಂದಿದ್ದಾರೆ ಎಂಬ ಕಾರಣಕ್ಕೆ ರಾಹುಲ್‌ ಅವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಬೇಕೆಂದು ಕೋರಿ ವಕೀಲ ವಿನೀತ್ ಜಿಂದಾಲ್ ಅವರು ಎಜಿ ಅವರಿಗೆ ಪತ್ರ ಬರೆದಿದ್ದರು.

ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್ 15 ಮತ್ತು ಸುಪ್ರೀಂಕೋರ್ಟ್‌ ಅವಹೇಳನ ನಿಯಂತ್ರಣ ನಿಯಮಾವಳಿಗಳ ನಿಯಮ 3ರ ಪ್ರಕಾರ ಖಾಸಗಿ ವ್ಯಕ್ತಿಗಳು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವ ಮುನ್ನ ಅಟಾರ್ನಿ ಜನರಲ್‌ ಅಥವಾ ಸಾಲಿಸಿಟರ್‌ ಜನರಲ್‌ ಅವರ ಒಪ್ಪಿಗೆ ಪಡೆಯಬೇಕಿದೆ. ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ನ್ಯಾಯಾಂಗವನ್ನು ಟೀಕಿಸುವಂತಹ ಹೇಳಿಕೆ ನೀಡಿದ್ದಾರೆ ಎಂದು ಎಜಿ ಅವರಿಗೆ ಜಿಂದಾಲ್‌ ಬರೆದಿರುವ ಪತ್ರದಲ್ಲಿ ರಾಹುಲ್‌ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.

Also Read
ಎಜಿ ಒಪ್ಪಿಗೆ ನಿರಾಕರಿಸಿದ ತಿಂಗಳುಗಳ ಬಳಿಕ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ

“ಒಬ್ಬ ವ್ಯಕ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಶೇ 100ರಷ್ಟು ಸ್ವಾತಂತ್ರ್ಯ ಹೊಂದಿರುವ ಕಾನೂನು ವ್ಯವಸ್ಥೆ ಈ ದೇಶದಲ್ಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಎಲ್ಲ ಸಂಸ್ಥೆಗಳಲ್ಲಿ/ವ್ಯವಸ್ಥೆಗಳಲ್ಲಿ ತನ್ನ ಜನರನ್ನು ತುಂಬುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇದು ಅಲ್ಲಗಳೆಯಲಾಗಿದೆ. ಇದು ತುಂಬಾ ಸ್ಪಷ್ಟವಾಗಿದೆ! ಅವರು ಈ ದೇಶದ ಸಾಂಸ್ಥಿಕ ಚೌಕಟ್ಟನ್ನು ತೆಗೆದು ಹಾಕುತ್ತಿದ್ದಾರೆ” ಎಂದು ರಾಹುಲ್‌ ಸಂದರ್ಶನದಲ್ಲಿ ಹೇಳಿದ್ದರು.

“ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ತನ್ನ ಜನರನ್ನು ನ್ಯಾಯಾಂಗಕ್ಕ ಸೇರಿಸಿದೆ" ಎನ್ನುವ ಮೂಲಕ ರಾಹುಲ್‌ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಹೆಸರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಜಿಂದಾಲ್‌ ತಮ್ಮ ಪತ್ರದಲ್ಲಿ ವಿವರಿಸಿದ್ದರು.

ಆದರೆ ಎ ಜಿ ವೇಣುಗೋಪಾಲ್‌ “ರಾಹುಲ್‌ ಹೇಳಿಕೆಯಲ್ಲಿ ನ್ಯಾಯಾಂಗದ ಬಗ್ಗೆ ಸಾಮಾನ್ಯ ಉಲ್ಲೇಖ ಇದೆ. ನೇರವಾಗಿ ದೇಶದ ಸುಪ್ರೀಂಕೋರ್ಟ್‌ ಅಥವಾಆ ಹೈಕೋರ್ಟ್‌ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಅದು ಉಲ್ಲೇಖಿಸುವುದಿಲ್ಲ” ಎಂದು ತಿಳಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು. "ನಾನು ಒಪ್ಪಿಗೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆಕ್ಷೇಪ ವ್ಯಕ್ತವಾಗಿರುವ ಹೇಳಿಕೆಯು ಸಾರ್ವಜನಿಕರ ದೃಷ್ಟಿಯಲ್ಲಿ ಸಂಸ್ಥೆಯ ಘನತೆಗೆ ಕುಂದು ತರುತ್ತದೆ ಎನ್ನಲು ತುಂಬಾ ಅಸ್ಪಷ್ಟವಾಗಿದೆ ಎಂದು ಭಾವಿಸುತ್ತೇನೆ” ಎಂದು ಎ ಜಿ ಪ್ರತಿಕ್ರಿಯಿಸಿದ್ದಾರೆ.

Kannada Bar & Bench
kannada.barandbench.com