ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪುತ್ರಿ ವಮಿಕಾಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ ಪ್ರಕರಣವನ್ನು ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ಮಂಗಳವಾರ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.
ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್‌ನ ಸೈಬರ್ ಅಪರಾಧ ವಿಭಾಗ ದಾಖಲಿಸಿರುವ ಪ್ರಕರಣದ ಮಾಹಿತಿ ನೀಡುವಂತೆ ಕೋರಿ ಡಿಸಿಡಬ್ಲ್ಯು ಪತ್ರ ಬರೆದಿದೆ.
“ವಿಶ್ವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸೋಲು ಕಂಡಿದ್ದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಒಂಭತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಲಾಗುವುದು ಎಂದು ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಆನ್‌ಲೈನ್‌ನಲ್ಲಿ ವೇಗಿ ಮೊಹಮ್ಮದ್ ಸಮಿ ಧರ್ಮವನ್ನು ಕೇಂದ್ರೀಕರಿಸಿ ಟ್ರೋಲ್ ಮಾಡಿದ್ದನ್ನು ಖಂಡಿಸಿದ್ದಕ್ಕೂ ವಿರಾಟ್ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ತಕ್ಷಣ ಕ್ರಮಕೈಗೊಳ್ಳಬೇಕು” ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್‌ಐಆರ್, ಆರೋಪಿಯ ವಿವರ, ಆರೋಪಿಯನ್ನು ಬಂಧಿಸಲು ಪೊಲೀಸರು ಕೈಗೊಂಡಿರುವ ಕ್ರಮ, ವಿಸ್ತೃತವಾಗಿ ವರದಿಯನ್ನು ನವೆಂಬರ್ 8ರ ಒಳಗೆ ಸಲ್ಲಿಸುವಂತೆ ಆಯೋಗವು ತಿಳಿಸಿದೆ.
“ಈ ಸಂದರ್ಭದಲ್ಲಿ ನಮ್ಮ ತಂಡದ ಬೆನ್ನಿಗೆ ನಿಲ್ಲಬೇಕೆ ವಿನಾ ಅವರ ವಿರುದ್ಧ ನಿಲ್ಲಬಾರದು. ಭಾರತ ತಂಡವು ಪಾಕಿಸ್ತಾನಕ್ಕೆ ಮಣಿದಿದ್ದರೂ ನಮ್ಮ ಆಟಗಾರರು ಮತ್ತು ಅವರ ಕುಟುಂಬದ ವಿರುದ್ಧ ದ್ವೇಷಕಾರಬಾರದು! ವಿರಾಟ್ ಕೊಹ್ಲಿ ಅವರ ಒಂಭತ್ತು ತಿಂಗಳ ಹೆಣ್ಣು ಮಗುವಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಲಾಗಿದೆ ಎಂಬುದನ್ನು ಕೇಳಿ ತೀವ್ರ ಬೇಸರವಾಗಿದೆ! ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಎಫ್‌ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಬೇಕು. ಬೆದರಿಕೆ ಹಾಕಿದವರಿಗೆ ಸರಿಯಾದ ಪಾಠ ಕಲಿಸಬೇಕು!” ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.