ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ನ್ಯಾಯವಾದಿ ರಾಜೇಶ್ ಭಟ್ ವಿರುದ್ಧ ಎಫ್‌ಐಆರ್‌; ಪ್ರಕರಣ ಮುಚ್ಚಿಹಾಕಲು ಪ್ರಯತ್ನ

ಸಂತ್ರಸ್ತೆಯ ಸಹಪಾಠಿಯಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಪವಿತ್ರ ಆಚಾರ್ಯ, ಶಿವಾನಂದ ಹಾಗೂ ಧ್ರುವ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ನ್ಯಾಯವಾದಿ ರಾಜೇಶ್ ಭಟ್ ವಿರುದ್ಧ ಎಫ್‌ಐಆರ್‌; ಪ್ರಕರಣ ಮುಚ್ಚಿಹಾಕಲು ಪ್ರಯತ್ನ
Published on

ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಂಬಂಧ ಮಂಗಳೂರು ಲೋಕಾಯುಕ್ತ ವಿಭಾಗದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌, ಖ್ಯಾತ ವಕೀಲ ಕೆ ಎಸ್‌ ಎನ್‌ ರಾಜೇಶ್‌ ಭಟ್‌ ಅವರ ವಿರುದ್ಧ ಎರಡು ದೂರು ದಾಖಲಾಗಿದೆ.

ಒಂದು ಪ್ರಕರಣದಲ್ಲಿ ಅತ್ಯಾಚಾರ ಆರೋಪ ಮಾಡಿರುವ ವಿದ್ಯಾರ್ಥಿನಿ ನಗರದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದರಲ್ಲಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಪವಿತ್ರ ಆಚಾರ್ಯ, ಶಿವಾನಂದ ಹಾಗೂ ಧ್ರುವ (ವಿದ್ಯಾರ್ಥಿನಿಯ ಗೆಳೆಯ) ಎಂಬುವವರ ವಿರುದ್ಧ ದೂರು ನೀಡಲಾಗಿದೆ.

ಕೆ.ಎಸ್‌.ಎನ್‌. ರಾಜೇಶ್‌ ಭಟ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಪ್ರಸಿದ್ಧ ಬ್ಯಾಂಕ್‌ಗಳು ಸೇರಿ ಹಲವು ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಕಾನೂನು ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಕಳೆದ ಆಗಸ್ಟ್‌ನಲ್ಲಿ ವಕೀಲರ ಕರಂಗಲ್ಪಾಡಿ ಕಚೇರಿಯಲ್ಲಿ ತರಬೇತಿಗಾಗಿ (ಇಂಟರ್ನ್‌ಶಿಪ್‌) ಸೇರಿದ್ದರು. ಸೆ. 25ರಂದು ತನ್ನನ್ನು ಚೇಂಬರ್‌ಗೆ ಕರೆಸಿಕೊಂಡ ಭಟ್‌ ಅಸಭ್ಯವಾಗಿ ವರ್ತಿಸಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

Also Read
ಸಂತ್ರಸ್ತೆಯೊಂದಿಗೆ ಮದುವೆಯಾದ ಮಾತ್ರಕ್ಕೆ ಅತ್ಯಾಚಾರ, ಫೋಕ್ಸೋ ಅಡಿಯ ವಿಚಾರಣೆ ರದ್ದು ಮಾಡಲಾಗದು: ಕೇರಳ ಹೈಕೋರ್ಟ್‌

ಆರೋಪಿ ಹಾಗೂ ವಿದ್ಯಾರ್ಥಿನಿಯ ನಡುವೆ ನಡೆದಿದೆ ಎನ್ನಲಾದ 11 ನಿಮಿಷ 55 ಸೆಕೆಂಡ್‌ ಅವಧಿಯ ಫೋನ್‌ ಸಂಭಾಷಣೆಯೊಂದು ವೈರಲ್‌ ಆಗಿತ್ತು. ಅದರಲ್ಲಿ ರಾಜೇಶ್‌ ಅವರು ʼನನ್ನ ಜೀವನದಲ್ಲಿ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನ ತಪ್ಪು ಕ್ಷಮಿಸಿ ಕಚೇರಿಗೆ ಬಾ… ಸಂಜೆ 6 ಗಂಟೆ ಬಳಿಕ ಕೆಲಸ ಮಾಡಬೇಡ ಕಚೇರಿಗೆ ಬಾ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಆಗ ವಿದ್ಯಾರ್ಥಿನಿ ʼಕಚೇರಿಗೆ ಬಂದರೆ ಅಲ್ಲಿ ರೆಕಾರ್ಡ್‌ ಆಗಿರುವ ವೀಡಿಯೊ ತೆಗೆದುಹಾಕುವಿರಾ?ʼ ಎಂದು ಕೇಳಿದ್ದರು. ʼಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ನೀವು ಈ ರೀತಿ ಮಾಡಿದ್ದು ತಪ್ಪು. ನನಗೆ ಇನ್ನು ಮುಂದೆ ಫೋನ್‌ ಮಾಡಬೇಡಿ” ಎಂದು ಆಕೆ ಹೇಳಿದ್ದರು.

ವಿದ್ಯಾರ್ಥಿನಿ ನೀಡಿರುವ ದೂರನ್ನು ಆಧರಿಸಿ ಭಟ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ 354 (ಎ) 354 (ಬಿ), 354 (ಸಿ) , (ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸೆಕ್ಷನ್‌ಗಳು) 376 (ಅತ್ಯಾಚಾರ ಯತ್ನ), 511ರ (ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಹ ಕೃತ್ಯ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಲೈಂಗಿಕ ಕಿರುಕುಳ, ಬೆದರಿಕೆ ಗಂಭೀರ ಪ್ರಕರಣವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ವಲಯ ಸಹಾಯಕ ಪೊಲೀಸ್‌ ಆಯುಕ್ತ ರಂಜಿತ್‌ ಬಂಡಾರು ಅವರಿಗೆ ತನಿಖೆಯ ಹೊಣೆ ನೀಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಎರಡನೇ ದೂರು

ಪ್ರಕರಣಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ ನೀಡುತ್ತೇವೆ ಎಂದು ಜಾಗೃತ ಮಹಿಳಾ ವೇದಿಕೆಯ ಹೆಸರು ಹೇಳಿಕೊಂಡು ಪವಿತ್ರಾ ಆಚಾರ್ಯ ಎಂಬುವವರು ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಯನ್ನು ಕರೆದೊಯ್ದಿದ್ದರು. ಬಳಿಕ ನಗರದ ಉರ್ವ ಪೊಲೀಸ್‌ ಠಾಣೆಯಲ್ಲಿ ಬಲವಂತವಾಗಿ ಸಹಪಾಠಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.

ಮುಚ್ಚಳಿಕೆ ಬರೆಸಲು ಪವಿತ್ರ ಸಹಕರಿಸಿದ್ದರು ಎಂದು ದೂರಲಾಗಿದ್ದು ಮುಚ್ಚಳಿಕೆಯಲ್ಲಿ “ರಾಜೇಶ್‌ ಭಟ್‌ ಅವರ ಬಳಿ ಕ್ಷಮೆ ಕೇಳಲಾಗಿದೆ. ನೀವು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಿಮ್ಮನ್ನು ಟಾರ್ಗೆಟ್‌ ಮಾಡಿದ್ದೆ. ಆಡಿಯೊ ಎಡಿಟ್‌ ಮಾಡಿ ವಾಟ್ಸಾಪ್‌ ಮತ್ತು ಸಿಡಿ ಮಾಡಿಸಿ ಹರಿಬಿಟ್ಟಿದ್ದೆ ನಿಮ್ಮ ಕುಟುಂಬ ಮತ್ತು ಸಮಾಜದ ಹೆಸರು ಹಾಳು ಮಾಡಲು ಯತ್ನಿಸಿದ್ದೆ. ವಕೀಲರ ಸಂಘಕ್ಕೂ ನಾನೇ ಸಿಡಿ ಕಳಿಸಿಕೊಟ್ಟಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂಬುದಾಗಿ ಬೇಷರತ್‌ ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ನಿಮಗೆ ಮುಖ ತೋರಿಸುವುದಿಲ್ಲ” ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪವಿತ್ರ ಅಲ್ಲದೆ ಶಿವಾನಂದ ಹಾಗೂ ಧ್ರುವ ಎನ್ನುವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Kannada Bar & Bench
kannada.barandbench.com