ಸುದ್ದಿಗಳು

ಎಂ ಜೆ ಅಕ್ಬರ್‌ ಹೂಡಿದ್ದ ಮಾನಹಾನಿ ಪ್ರಕರಣದಲ್ಲಿ ಪ್ರಿಯಾ ರಮಣಿ ನಿರಪರಾಧಿ ಎಂದು ಘೋಷಿಸಿದ ದೆಹಲಿ ನ್ಯಾಯಾಲಯ

ರಮಣಿಯವರು ತಮ್ಮ ಸಮರ್ಥನೆಗೆ ಸತ್ಯ, ಸದುದ್ದೇಶ, ಸಾರ್ವಜನಿಕ ಹಿತಾಸಕ್ತಿಗಳ ಆಸರೆ ಪಡೆದರೆ, ಮತ್ತೊಂದೆಡೆ ಅಕ್ಬರ್‌ ಅವರು ರಮಣಿಯವರನ್ನು ತಾವು ಯಾವುದೇ ಹೊಟೆಲ್‌ನಲ್ಲಿ ಭೇಟಿಯಾಗಿರಲಿಲ್ಲ ಎಂದಿದ್ದರು.

Bar & Bench

ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಿದ್ದ, ಸುಮಾರು ಎರಡು ವರ್ಷಗಳ ಕಾಲದಷ್ಟು ಸುದೀರ್ಘವಾಗಿ ನಡೆದ ಬಹುಚರ್ಚಿತ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ಬುಧವಾರ ದೆಹಲಿ ನ್ಯಾಯಾಲಯವೊಂದು ನೀಡಿದ್ದು, ಪ್ರಿಯಾ ರಮಣಿ ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಮೀ ಟೂ’ ಸಾಮಾಜಿಕ ಮಾಧ್ಯಮ ಚಳವಳಿಯ ಮುಖೇನ ಮುನ್ನೆಲೆಗೆ ಬಂದ ಹಿರಿಯ ಪತ್ರಕರ್ತ ಹಾಗೂ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ಅವರ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಮಹತ್ವ ಪಡೆದಿತ್ತು.

ತಮ್ಮ ವಿರುದ್ಧ ಸಾಲುಸಾಲು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ತಮ್ಮ ಒಂದು ಕಾಲದ ಕಿರಿಯ ಸಹೋದ್ಯೋಗಿ ಪತ್ರಕರ್ತೆಯರು ಮಾಡಿದ್ದ ಹಿನ್ನೆಲೆಯಲ್ಲಿ, ಪ್ರಮುಖವಾಗಿ ಪ್ರಿಯಾ ರಮಣಿ ವಿರುದ್ಧ ಅಕ್ಬರ್‌ ಅವರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಲಿಂಗಾಧಾರಿತ ಮಹಿಳಾ ಶೋಷಣೆಯ ವಿರುದ್ಧ ಜಾಗತಿಕವಾಗಿ 2018ರಲ್ಲಿ ಮೂಡಿಬಂದ ‘ಮೀ ಟೂ’ ಪ್ರಕರಣವು ದೇಶದಲ್ಲಿಯೂ ದೊಡ್ಡದಾಗಿ ಸದ್ದು ಮಾಡಿತ್ತು. ಎಂ ಜೆ ಅಕ್ಬರ್‌ ಅವರು ತಮ್ಮ ಹುದ್ದೆಯನ್ನು ಬಳಸಿಕೊಂಡು ಲೈಂಗಿಕ ಶೋಷಣೆಯನ್ನು ಎಸಗಿದ್ದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಬೇಕಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಮೆಟ್ರೋ ಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರ ಕುಮಾರ್‌ ಪಾಂಡೆ ಅವರು ತೀರ್ಪು ನೀಡಿದರು. ಫೆಬ್ರುವರಿ 1ರಂದು ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

ಘನತೆಯ ಹಕ್ಕನ್ನು ಬಲಿಕೊಟ್ಟು ಪ್ರತಿಷ್ಠೆಯ ಹಕ್ಕನ್ನು ಸಂರಕ್ಷಿಸಲಾಗದು.
ನ್ಯಾಯಾಧೀಶ ರವೀಂದ್ರ ಕುಮಾರ್‌ ಪಾಂಡೆ

ಉಭಯ ಕಡೆಯವರು ನ್ಯಾಯಾಲಯದಲ್ಲಿ ಆಸೀನರಾದ ಬಳಿಕ ಪೀಠದಿಂದ “ದಯವಿಟ್ಟು ಹೊರಗೆ ಕಾಯಿರಿ. ತೀರ್ಪಿನಲ್ಲಿ ಕೆಲವು ಲೋಪಗಳನ್ನು ಸರಿಪಡಿಸಬೇಕಿದ್ದು, ಅರ್ಧ ಗಂಟೆ ಬೇಕಾಗಬಹುದು” ಎನ್ನುವ ಮಾಹಿತಿ ಒದಗಿತು. ಮತ್ತೆ ಪೀಠವು ಸೇರ್ಪಡೆಯಾದಾಗ “..ಸಂತ್ರಸ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವಾದಾಗ ಅದರಿಂದ ಆಗುವ ಪರಿಣಾಮಗಳನ್ನು ಸಮಾಜವು ಅರ್ಥ ಮಾಡಿಕೊಳ್ಳಬೇಕು” ಎಂದು ನ್ಯಾಯಾಧೀಶರು ಹೇಳಿದರು.

ಅಕ್ಬರ್‌ ಅವರು ಪ್ರತಿಷ್ಠಿತ ವ್ಯಕ್ತಿಯಾಗಿದ್ದರೂ, ಸಮಾಜದಲ್ಲಿ ಉತ್ತಮ ಘನತೆ ಹೊಂದಿದ್ದರೂ ಅವರು ಲೈಂಗಿಕ ಕಿರುಕುಳ ನೀಡುವ ವ್ಯಕ್ತಿಯಾಗಿರಬಹುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತು. “ದಶಕಗಳ ಬಳಿಕವೂ ತಮ್ಮ ಅಹವಾಲುಗಳನ್ನು ಸಲ್ಲಿಸುವ ಹಕ್ಕನ್ನು ಮಹಿಳೆ ಹೊಂದಿದ್ದಾರೆ” ಎನ್ನುವ ಅಂಶವನ್ನು ಇದೇ ವೇಳೆ ನ್ಯಾಯಾಲಯವು ಎತ್ತಿಹಿಡಿಯಿತು.

ಫೆಬ್ರುವರಿ 10ರಂದು ಪ್ರಕರಣದ ತೀರ್ಪು ಪ್ರಕಟವಾಗಬೇಕಿತ್ತು. ಉಭಯ ವಾದಿಗಳು ಲಿಖಿತ ಹೇಳಿಕೆಗಳನ್ನು ಸಲ್ಲಿಸುವುದು ತಡವಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಣೆಯನ್ನು ಮುಂದೂಡಲಾಗಿತ್ತು.

1993ರ ಡಿಸೆಂಬರ್‌ನಲ್ಲಿ ಮುಂಬೈನಲ್ಲಿರುವ ಒಬೆರಾಯ್‌ ಹೋಟೆಲ್‌ಗೆ ಉದ್ಯೋಗ ಸಂದರ್ಶನಕ್ಕಾಗಿ ಆಹ್ವಾನಿಸಿ ಎಂ ಜೆ ಅಕ್ಬರ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ರಮಣಿ ಆರೋಪಿಸಿದ್ದರು. ತಮ್ಮ ವಿರುದ್ಧ ಟ್ವಿಟರ್‌ ಮೂಲಕ ಲೈಂಗಿಕ ದುರ್ನಡತೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಎಂ ಜೆ ಅಕ್ಬರ್‌ ಅವರು 2018ರ ಅಕ್ಟೋಬರ್‌ನಲ್ಲಿ ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ರಮಣಿಯವರು ತಮ್ಮ ಸಮರ್ಥನೆಗೆ ಸತ್ಯ, ಸದುದ್ದೇಶ, ಸಾರ್ವಜನಿಕ ಹಿತಾಸಕ್ತಿಗಳ ಆಸರೆ ಪಡೆದರೆ, ಮತ್ತೊಂದೆಡೆ ಅಕ್ಬರ್‌ ಅವರು ರಮಣಿಯವರನ್ನು ತಾವು ಯಾವುದೇ ಹೊಟೆಲ್‌ನಲ್ಲಿ ಭೇಟಿಯಾಗಿರಲಿಲ್ಲ ಎಂದಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಹಲವು ಮಹಿಳೆಯರು ಎಂ ಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಅಕ್ಬರ್ ಹೇಳುವಂತೆ ಅವರ ಮಹಾನ್‌ ಘನತೆಗೆ ಧಕ್ಕೆಯಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ರಮಣಿ ವಾದಿಸಿದ್ದರು.

ರಮಣಿ ಆರೋಪವು ದುರುದ್ದೇಶದಿಂದ ಕೂಡಿದೆ. ಅಲ್ಲದೇ ಘಟನಾವಳಿಗಳನ್ನು ತಿರುಚಲಾಗಿದೆ ಎಂದು ಅಕ್ಬರ್‌ ವಾದಿಸಿದ್ದರು. ಯಾವುದೇ ನ್ಯಾಯಾಲಯ ಅಥವಾ ಸಂಬಂಧಿತ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಲಾಗಿಲ್ಲ. ಯಾವುದೇ ಎಚ್ಚರಿಕೆ ವಹಿಸದೇ ಸಾಮಾಜಿಕ ಮಾಧ್ಯಮದಲ್ಲಿನ ವಿಚಾರಣೆಗೆ ತಮ್ಮನ್ನು ವಸ್ತುವನ್ನಾಗಿಸಲಾಗದು ಎಂದೂ ಅವರು ವಾದಿಸಿದ್ದರು. ತಮ್ಮ ಆರೋಪವನ್ನು ಸಾಬೀತುಪಡಿಸುವ ಜವಾಬ್ದಾರಿಯಲ್ಲಿ ರಮಣಿ ವಿಫಲವಾಗಿದ್ದಾರೆ ಎಂದು ಅಕ್ಬರ್‌ ಹೇಳಿದ್ದರು.

ಅಕ್ಬರ್‌ ಪರ ಹಿರಿಯ ವಕೀಲೆ ಗೀತಾ ಲೂಥ್ರಾ ಮತ್ತು ಕಾರಂಜವಾಲಾ ಮತ್ತು ಕಂಪೆನಿಯಲ್ಲಿ ಹಿರಿಯ ಪಾಲುದಾರರಾದ ಸಂದೀಪ್‌ ಕಪೂರ್‌ ವಾದಿಸಿದ್ದರು. ರಮಣಿಯನ್ನು ಹಿರಿಯ ವಕೀಲೆ ರೆಬೆಕಾ ಜಾನ್‌ ಮತ್ತು ವಕೀಲ ಭವೂಕ್‌ ಚೌಹಾಣ್‌ ಪ್ರತಿನಿಧಿಸಿದ್ದರು.