ಲೈಂಗಿಕ ಕಿರುಕುಳ ಆರೋಪ ಮುಚ್ಚಿಡುವ ಮೂಲಕ ನ್ಯಾಯಾಲಯಕ್ಕೆ ಎಂ ಜೆ ಅಕ್ಬರ್‌ ವಂಚನೆ: ರಮಣಿ ಪರ ವಕೀಲೆ ರೆಬೆಕಾ ಜಾನ್‌ ಆರೋಪ

ಪ್ರಿಯಾ ರಮಣಿ ವಿರುದ್ಧ ಎಂ ಜೆ ಅಕ್ಬರ್‌ 2018ರಲ್ಲಿ ದೂರು ದಾಖಲಿಸುವ ವೇಳೆಗಾಗಲೆ 15 ಮಹಿಳೆಯರು ಅಕ್ಬರ್ ವಿರುದ್ಧ ಆರೋಪ ಮಾಡಿದ್ದರು ಎಂದು ರಮಣಿ ಪರ ವಕೀಲೆ ರೆಬೆಕಾ ಜಾನ್ ಹೇಳಿದ್ದಾರೆ.
Priya Ramani (L), Rebecca John (R)
Priya Ramani (L), Rebecca John (R)

ಸಮಾಜಿ ಸಚಿವ ಹಾಗೂ ಸಂಪಾದಕರಾಗಿದ್ದ ಎಂ ಜೆ ಅಕ್ಬರ್‌ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಹಿರಿಯ ವಕೀಲೆ ರೆಬೆಕಾ ಜಾನ್‌ ಅವರು, “ಎಂ ಜೆ ಅಕ್ಬರ್‌ ಅವರು ಕಳಂಕರಹಿತರಾಗಿ ನ್ಯಾಯಾಲಯದ ಮೆಟ್ಟಿಲೇರಿಲ್ಲ,” ಹಾಗೂ ಅವರು, “ನ್ಯಾಯಾಲಯಕ್ಕೆ ವಂಚಿಸುತ್ತಿದ್ದಾರೆ” ಎಂದು ದೆಹಲಿ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ. ಆ ಮೂಲಕ ಅವರು ಪ್ರಕರಣದ ಸಂಬಂಧ ಶುಕ್ರವಾರ ತಮ್ಮ ವಾದ ಪೂರ್ಣಗೊಳಿಸಿದ್ದಾರೆ.

“ಆರೋಪ ಮಾಡುವ ಸಂದರ್ಭದಲ್ಲಿ ಅಕ್ಬರ್‌ ಅವರು ಹಿರಿಯ ಸಂಪಾದಕರು ಮತ್ತು ಸಚಿವರಾಗಿದ್ದರು… ತಮ್ಮ ವಿರುದ್ಧ ಹಲವು ಲೈಂಗಿಕ ಕಿರುಕುಳ ಆರೋಪಗಳಿವೆ ಎಂದು ಹೇಳುವ ಬಾಧ್ಯತೆ ಅವರಿಗೆ ಇರಲಿಲ್ಲವೇ? ಪ್ರಿಯಾ ರಮಣಿ ಅವರದ್ದು ಮಾತ್ರ ಪ್ರತ್ಯೇಕ ಘಟನೆಯಲ್ಲ ಅಲ್ಲವೇ?" ಎಂದು ಜಾನ್‌ ವಾದಿಸಿದರು.

2018ರ ಅಕ್ಟೋಬರ್‌ನಲ್ಲಿ ಅಕ್ಬರ್‌ ರಮಣಿ ವಿರುದ್ಧ ದೂರು ದಾಖಲಿಸುವ ವೇಳೆಗಾಗಲೆ ಸುಮಾರು 15 ಮಹಿಳೆಯರು ಅಕ್ಬರ್‌ ವಿರುದ್ದ ಆರೋಪ ಮಾಡಿದ್ದರು ಎಂದಿರುವ ಜಾನ್‌, “ನೀವು ಮತ್ತೊಂದು ಬದಿಯಲ್ಲಿರುವವರ ಮೇಲೆ ಅನ್ಯಾಯಯುತವಾಗಿ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದೀರಿ. ಇತರೆ ಮಹಿಳೆಯರು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಪ್ರಸ್ತಾಪಿಸುವಲ್ಲಿ ಅಕ್ಬರ್ ವಿಫಲವಾಗಿದ್ದು, ಕೇವಲ ರಮಣಿಯವರ ಹೇಳಿಕೆ ಮಾತ್ರ ಮಾನಹಾನಿ ಮಾಡಿದೆ ಎಂದು ತೋರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಬರ್ ಅವರು ಕಳಂಕರಹಿತರಾಗಿ‌ ನ್ಯಾಯಾಲಯದ ಮೆಟ್ಟಿಲು ಏರಿಲ್ಲ, ಅವರು ನ್ಯಾಯಾಲಯವನ್ನು ವಂಚಿಸಿದ್ದಾರೆ” ಎಂದು ವಾದಿಸಿದರು.

ಪ್ರಿಯಾ ರಮಣಿ ಅವರನ್ನು ಏಕಾಂಗಿಯಾಗಿ ಗುರಿಯಾಗಿಸುವ ಮೂಲಕ ಅಕ್ಬರ್‌ ಅವರು ನ್ಯಾಯಾಲಯದಿಂದ ಕೆಲವು ವಿಚಾರಗಳನ್ನು ಮರೆಮಾಚುತ್ತಿದ್ದಾರೆ ಎಂದರು. “ಲೈಂಗಿಕ ಕಿರುಕುಳ ಆರೋಪದ ಆಧಾರದ ಮೇಲೆ ವ್ಯಕ್ತಿಯೊಬ್ಬರು ತಮ್ಮ ಮಾನಹಾನಿಯಾಗಿದೆ ಎಂದು ಹೇಳುವಾಗ ಅದೇ ರೀತಿ ಇತರೆ 15 ಮಹಿಳೆಯರು ಅದೇ ಆರೋಪ ಮಾಡಿದ್ದಾರೆ ಎಂದು ನ್ಯಾಯಯೋಚಿತವಾಗಿ ಬಹಿರಂಗಪಡಿಸಬೇಕಿತ್ತಲ್ಲವೇ” ಎಂದು ಪ್ರಶ್ನಿಸಿದರು.

ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯದ ಸಂಕೀರ್ಣದಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್‌ ಪಾಂಡೆ‌ ಅವರ ಮುಂದೆ ಜಾನ್‌ ವಾದ ಮಂಡಿಸಿದರು. ನ್ಯಾಯಮೂರ್ತಿ ವಿಶಾಲ್‌ ಪಹುಜಾ ಅವರ ವರ್ಗಾವಣೆಯ ಬಳಿಕ ನ್ಯಾಯಾಲಯವು ಹೊಸದಾಗಿ ಅಂತಿಮ ವಾದ ಆಲಿಸಿತು.

ಸಾರ್ವಜನಿಕ ಹಿತ ಮತ್ತು ನಂಬಿಕೆಯ ಹಿನ್ನೆಲೆಯಲ್ಲಿ ರಮಣಿಯವರು ಸತ್ಯ ಹೊರಗೆಡಹಿರುವುದರಿಂದ ಐಪಿಸಿ ಸೆಕ್ಷನ್‌ 499ರ ಅಡಿ ಯಾವುದೇ ರೀತಿಯಲ್ಲೂ ಮಾನಹಾನಿಯಾಗುವಂಥ ತಪ್ಪನ್ನು ಅವರು ಎಸಗಿಲ್ಲ. ಸಂದರ್ಶನಕ್ಕಾಗಿ ರಮಣಿ ಅವರು 1993ರ ಡಿಸೆಂಬರ್‌ನಲ್ಲಿ ಒಬೆರಾಯ್‌ ಹೋಟೆಲ್‌ಗೆ ತೆರಳಿದ್ದಾಗ ನಡೆದಿರುವುದಕ್ಕೆ ಪೂರಕವಾಗಿ ದೃಢೀಕರಿಸಿದ ಸಾಕ್ಷ್ಯವನ್ನು ರಮಣಿ ಅವರ ಸ್ನೇಹಿತೆ ನಿಲೋಫರ್‌ ಸಲ್ಲಿಸಿದ್ದಾರೆ ಎಂದರು.

ರಮಣಿ ಅವರ ಲೇಖನಗಳು ಮತ್ತು ಟ್ವೀಟ್‌ಗಳು ದುರುದ್ದೇಶಪೂರಿತವಲ್ಲ ಸತ್ಯಾಧಾರಿತವಾಗಿದ್ದು, ವಿಸ್ತೃತ ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿವೆ ಎಂದು ಜಾನ್‌‌ ಹೇಳಿದ್ದು, “ಸತ್ಯ ನೋವು ಉಂಟುಮಾಡುವಂಥದ್ದು.. ಆದರೆ ಆ ಮೂಲಕ ನೀವು ದೊಡ್ಡ ಉದ್ದೇಶವನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೀರಿ. ಎಲ್ಲವನ್ನೂ ಮುಕ್ತವಾಗಿ ಹೇಳುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಆಕೆ ದಂಡ ತೆತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಸತ್ಯ ಹೇಳದಿರುವುದು ಹೇಡಿತನಕ್ಕೆ ಸಮನಾಗುತ್ತದೆ” ಎಂದು ರಮಣಿ ಅವರ ಹೇಳಿಕೆಗಳನ್ನು ಸಮರ್ಥಿಸಿದರು.

“…ಕಿರುಕುಳದಲ್ಲಿ ಹಲವು ವಿಧಗಳಿದ್ದು, ಅವುಗಳಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳ ಸೇರಿವೆ. ಪರಭಕ್ಷಕ ಎಂಬ ಪದವನ್ನು ಏಕೆ ಬಳಸಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅಕ್ಬರ್‌ ಮತ್ತು ತಮ್ಮ ನಡುವೆ ಇರುವ ಅಧಿಕಾರ ಮತ್ತು ವಯಸ್ಸಿನ ವ್ಯತ್ಯಾಸವನ್ನು ವಿವರಿಸುವುದಕ್ಕಾಗಿ ಎಂದಿದ್ದಾರೆ… ಲೈಂಗಿಕ ಕಿರುಕುಳ ವಿಚಾರವು ಸಾರ್ವಜನಿಕ ಪ್ರಶ್ನೆಯಾಗಿ ಪರಿವರ್ತನೆಯಾಗುತ್ತದೆ. ಈ ರೀತಿ ಬಹಿರಂಗಪಡಿಸುವಿಕೆಯು ಸಾರ್ವಜನಿಕ ಹಿತ, ಸಾರ್ವಜನಿಕ ಹಿತಾಸಕ್ತಿಗಾಗಿ ಅಲ್ಲ ಎಂದು ಎಂದಿಗೂ ಹೇಳುವಂತಿಲ್ಲ,” ಎಂದರು.

ಆ ಸಂದರ್ಭದಲ್ಲಿ ಭಾರತೀಯ ದಂಡ ಸಂಹಿತೆ ಅಥವಾ ಏಷಿಯನ್‌ ಏಜ್‌ ದೂರು ಪರಿಹಾರ ವ್ಯವಸ್ಥೆ ಒದಗಿಸಿರಲಿಲ್ಲ ಎಂದು ಹಲವು ವರ್ಷಗಳ ಬಳಿಕೆ ಏಕೆ ಈ ವಿಚಾರ ಬಹಿರಂಗಪಡಿಸಲಾಗಿದೆ ಎಂಬುದಕ್ಕೆ ಉತ್ತರಿಸಿದರು. “ಕಾನೂನು ವೇದಿಕೆಯ ಹೊರತಾಗಿ ಸುರಕ್ಷಿತವಾದ ಮೀಟೂ ಅಭಿಯಾನದ ವೇದಿಕೆ ದೊರೆತದ್ದರಿಂದ 2018ರಲ್ಲಿ ಗಜಾಲಾ ಮತ್ತು ರಮಣಿ ಹೇಳಿಕೆ ನೀಡಿದ್ದಾರೆ” ಎಂದರು.

ಇತರೆ 15 ಮಹಿಳೆಯರು ಮಾಡಿದ ಲೈಂಗಿಕ ಕಿರುಕುಳ ಆರೋಪ ಮತ್ತು ಕಿರಿಯ ಸಹೋದ್ಯೋಗಿಯೊಂದಿಗಿನ ಅವರ ಸಮ್ಮತದ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಅಕ್ಬರ್‌ ಅವರ ಅಮೋಘ ಖ್ಯಾತಿಯನ್ನು ಪ್ರಶ್ನೆ ಮಾಡಿರುವುದಾಗಿ ಜಾನ್‌ ಹೇಳಿದ್ದು, “ರಮಣಿ ಅಥವಾ ಯಾವುದೇ ಮಹಿಳೆಯು ಪೂರ್ವಯೋಜಿತವಾಗಿ ಯಾವುದೇ ಪಿತೂರಿ ಮಾಡಿಲ್ಲ. ಆರೋಪಿಸಿದ ಮಹಿಳೆಯರಿಗೆ ಇತರರ ಬಗ್ಗೆ ಮಾಹಿತಿಯೇ ಇಲ್ಲ.. ಇದರ ಜೊತೆಗೆ ಆರೋಪ ಮಾಡಿದ ಮಹಿಳೆಯರು ಉನ್ನತ ಸ್ಥಾನ ಮತ್ತು ಖ್ಯಾತಿ ಪಡೆದ ವೃತ್ತಿಪರರಾಗಿದ್ದಾರೆ. ಸುಳ್ಳು ಅಥವಾ ಅನ್ಯ ಉದ್ದೇಶಗಳು ಅವರ ಆರೋಪದ ಹಿಂದಿಲ್ಲ,” ಎಂದು ಹೇಳಿ ಪ್ರಿಯಾ ರಮಣಿ ಅವರನ್ನು ದೋಷಮುಕ್ತಗೊಳಿಸಬೇಕು ಎಂದು ಕೋರಿದರು.

ಡಿಸೆಂಬರ್‌ 22ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ಅಂದು ಅಕ್ಬರ್‌ ಪರ ವಕೀಲರು ಪ್ರತ್ಯುತ್ತರ ಮಂಡಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com