ಹೊಸ ಪಾಸ್‌ಪೋರ್ಟ್‌ಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಪುರಸ್ಕರಿಸಿದೆ.
ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ನಿರಪೇಕ್ಷಣಾ ಪತ್ರವು ಮೂರು ವರ್ಷಗಳ ಕಾಲ ಸಿಂಧುತ್ವ ಹೊಂದಿರಲಿದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಆದೇಶದಲ್ಲಿ ಹೇಳಿದ್ದಾರೆ.
ಮತ್ತೆ ಮೂರು ವರ್ಷಗಳ ಬಳಿಕ ರಾಹುಲ್ ಗಾಂಧಿ ಅವರು ನಿರಪೇಕ್ಷಣಾ ಪತ್ರ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಬೇಕಿದೆ. ರಾಹುಲ್ ಅವರು ಹತ್ತು ವರ್ಷಗಳ ಗರಿಷ್ಠ ಅವಧಿಗೆ ಪಾಸ್‌ಪೋರ್ಟ್ ಕೋರಿದ್ದರು.
ಲೋಕಸಭಾ ಸದಸ್ಯರಾಗಿದ್ದ ರಾಹುಲ್ ಗಾಂಧಿ ಅವರು ಅನರ್ಹಗೊಂಡ ಹಿನ್ನೆಲೆಯಲ್ಲಿ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸಿದ್ದು, ಹೊಸ ಪಾಸ್‌ಪೋರ್ಟ್ ಪಡೆಯಲು ನಿರಪೇಕ್ಷಣಾ ಪತ್ರ ಕೋರಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ರಾಹುಲ್ ಗಾಂಧಿ ಅವರು ಹೊಸ ಪಾಸ್‌ಪೋರ್ಟ್‌ಗೆ ಬಿಜೆಪಿ ನಾಯಕ ಸುಬ್ರಮಣಿಯಮ್ ಸ್ವಾಮಿ ಆಕ್ಷೇಪಿಸಿದ್ದರು. ರಾಹುಲ್ ಗಾಂಧಿ ಅವರು ಆರೋಪಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಾನು ದೂರುದಾರನಾಗಿದ್ದು, ಏತಕ್ಕಾಗಿ ರಾಹುಲ್‌ಗೆ ಹತ್ತು ವರ್ಷಗಳಿಗೆ ಪಾಸ್‌ಪೋರ್ಟ್ ನೀಡಬೇಕು ಎಂಬುದಕ್ಕೆ ಸಕಾರಣ ನೀಡಿಲ್ಲ. ಹೀಗಾಗಿ, ಅವರಿಗೆ ಒಂದು ವರ್ಷಕ್ಕೆ ಮಾತ್ರ ನಿರಪೇಕ್ಷಣಾ ಪತ್ರ ನೀಡಬೇಕು. ಪ್ರತಿ ವರ್ಷ ಅದನ್ನು ಪರಿಶೀಲಿಸಬೇಕು ಎಂದು ಲಿಖಿತ ಆಕ್ಷೇಪಣೆಯಲ್ಲಿ ಸ್ವಾಮಿ ವಿವರಿಸಿದ್ದರು.
ಮುಂದುವರಿದು ಸ್ವಾಮಿ ಅವರು “ನಾನು ಈಚೆಗೆ ಬ್ರಿಟನ್‌ಗೆ ತೆರಳಿದ್ದೆ. ರಾಹುಲ್ ಗಾಂಧಿ ತಾನು ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಭಾರತದ ಕಾನೂನಿನ ಪ್ರಕಾರ ರಾಹುಲ್ ಅವರ ಪೌರತ್ವವನ್ನು ನೇರವಾಗಿ ರದ್ದುಪಡಿಸಬೇಕು” ಎಂದು ವಾದಿಸಿದ್ದರು.