Jantar Mantar sloganeering incident
Jantar Mantar sloganeering incident  
ಸುದ್ದಿಗಳು

ಜಂತರ್ ಮಂತರ್ ದ್ವೇಷ ಭಾಷಣ: ಪ್ರೀತ್ ಸಿಂಗ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

Bar & Bench

ಜಂತರ್ ಮಂತರ್ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣದ ಆರೋಪಿ ಪ್ರೀತ್‌ ಸಿಂಗ್‌ಗೆ ದೆಹಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು ಘಟನೆಯ ಸಮಯದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣದ ಎಲ್ಲಾ ಜವಾಬ್ದಾರಿಯಿಂದ ಆತ ಮುಕ್ತನಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

ʼಸಭೆ ಸೇರುವ ಮತ್ತು ಚಿಂತನೆಗಳನ್ನು ಪ್ರಸಾರ ಮಾಡುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನದಲ್ಲಿ ನೀಡಲಾಗಿದೆ ಎಂಬುದು ಒಪ್ಪುವ ವಿಚಾರ. ಆದರೆ ಅಂತಹ ಹಕ್ಕುಗಳು ಆತ್ಯಂತಿಕವಲ್ಲʼ ಎಂದು ಅದು ಒತ್ತಿ ಹೇಳಿತು. ʼಆ ಹಕ್ಕುಗಳನ್ನು ಸೂಕ್ತ ನಿರ್ಬಂಧಗಳೊಂದಿಗೆ ಪ್ರಯೋಗಿಸಬೇಕು. ಆರೋಪಿ (ಸಿಂಗ್‌) ಸ್ವಪ್ರೇರಣೆಯಿಂದ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಆಪಾದಿತ ವ್ಯಕ್ತಿಗಳು ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸನ್ನೆಗಳ ಮೂಲಕ ಚಪ್ಪಾಳೆ ತಟ್ಟುವುದರ ಮೂಲಕ ಬೆಂಬಲ ನೀಡಿದರುʼ ಎಂದು ಪೀಠ ತಿಳಿಸಿತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಆಂಟಿಲ್‌ “ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರ ಭಾಷಣ ಅಥವಾ ಸಂದರ್ಶನಗಳು ವಿಶೇಷವಾಗಿ ಧಾರ್ಮಿಕ ಸಮುದಾಯದ ಅಭಿವ್ಯಕ್ತಿಗೆ ಸಂಬಂಧಪಟ್ಟ ಹೇಳಿಕೆಗಳ ಪ್ರಚೋದನಕಾರಿ ಅಂಶದ ಪ್ರಾಥಮಿಕ ವಿಶ್ಲೇಷಣೆಯ ಆಧಾರದ ಮೇಲೆ ಅರ್ಜಿದಾರ ಕಾರ್ಯಕ್ರಮದ ಸಕ್ರಿಯ ಸಂಘಟಕರಾಗಿದ್ದರು ಎಂಬುದನ್ನು ಪರಿಗಣಿಸಿ ವಿಚಾರದ ಹೊಣೆಗಾರಿಕೆಯಿಂದ ಅಥವಾ ಅದರಿಂದ ಉಂಟಾಗುವ ಪರಿಣಾಮಗಳಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆಯಡಿ ವಿವಿಧ ಅಪರಾಧಗಳಿಗಾಗಿ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರ ನಿಲುವು ಗಮನಿಸಿದರೆ, ಆತ ತನ್ನ ಅಧಿಕಾರ ಚಲಾಯಿಸಿದ್ದು ಭಾಗವಹಿಸಿದವರು ಇಂತಹ ಪ್ರಚೋದನಕಾರಿ ಅಭಿಪ್ರಾಯಗಳ ಪ್ರಸಾರ ತಡೆಯಬಹುದಿತ್ತು ಎಂಬ ನಿರೀಕ್ಷೆ ಇತ್ತು. ಅಲ್ಲದೆ ಸಿಂಗ್‌ ಅವರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬಹುದಿತ್ತು ಎಂಬುದಾಗಿ ನ್ಯಾಯಾಲಯ ಹೇಳಿದೆ.

ಆಗಸ್ಟ್ 8ರಂದು ವಸಾಹತುಶಾಹಿ ಕಾಲದ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಭಾರತ್ ಜೊಡೋ ಚಳವಳಿಯಲ್ಲಿ ಆರೋಪಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು. ಬಿಜೆಪಿ ನಾಯಕ ಹಾಗೂ ಸುಪ್ರೀಂಕೋರ್ಟ್‌ ವಕೀಲ ಅಶ್ವಿನ್‌ಕುಮಾರ್‌ ಉಪಾಧ್ಯಾಯ ಸಮಾವೇಶ ಸಂಘಟಿಸಿದ್ದರು.