ಸುದ್ದಿಗಳು

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣ: ಯಾಸಿನ್ ಮಲಿಕ್ ದೋಷಿ ಎಂದು ಎನ್ಐಎ ವಿಶೇಷ ನ್ಯಾಯಾಲಯದ ತೀರ್ಪು

Bar & Bench

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೋಷಿ ಎಂದು ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಪಿತೂರಿ ಮತ್ತು ದೇಶದ್ರೋಹದ ಅಪರಾಧಗಳಿಗಾಗಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯಡಿ ನ್ಯಾಯಾಲಯ ಯಾಸೀನ್‌ರನ್ನು ತಪ್ಪಿತಸ್ಥ ಎಂದು ಹೇಳಿದೆ.

ನ್ಯಾಯಾಲಯ ಮೇ 25 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಅದಕ್ಕಾಗಿ ಮಲಿಕ್‌ ಆರ್ಥಿಕ ಪರಿಸ್ಥಿತಿ ಕುರಿತು ಎನ್‌ಐಎ ಇನ್ನಷ್ಟೇ ಮೌಲ್ಯಮಾಪನ ಮಾಡಬೇಕಿದೆ. ಮುಂದಿನ ವಿಚಾರಣೆಯ ದಿನದ ಒಳಗಾಗಿ ತನ್ನ ಆಸ್ತಿ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಮಲಿಕ್‌ಗೆ ಸೂಚಿಸಿದೆ.

ಮಲಿಕ್, ಶಬೀರ್ ಶಾ, ರಶೀದ್ ಇಂಜಿನಿಯರ್, ಅಲ್ತಾಫ್ ಫಂಟೂಶ್, ಮಸ್ರತ್ ಹಾಗೂ ಹುರಿಯತ್/ಜಾಯಿಂಟ್ ರೆಸಿಸ್ಟೆನ್ಸ್ ಲೀಡರ್‌ಶಿಪ್ (ಜೆಆರ್‌ಎಲ್) ಸಂಘಟನೆ ಭಯೋತ್ಪಾದಕ ನಿಧಿಯನ್ನು ನೇರವಾಗಿ ಸ್ವೀಕರಿಸಿದ್ದವು ಎಂದು ಮೇಲ್ನೋಟಕ್ಕೆ ದೃಢಪಟ್ಟ ನಂತರ ನ್ಯಾಯಾಲಯ ಮಾರ್ಚ್‌ನಲ್ಲಿ ಆರೋಪ ನಿಗದಿಪಡಿಸಿತ್ತು.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಕಾನೂನುಬಾಹಿರ ಚಟುವಟಿಕೆಗಾಗಿ ನಿಧಿ ಸಂಗ್ರಹಿಸಲು ಮಲಿಕ್‌ ಪ್ರಪಂಚಾದ್ಯಂತ ವಿಸ್ತಾರವಾದ ತಂತ್ರ ರೂಪಿಸಿದ್ದ ಎನ್ನುವುದನ್ನು ನ್ಯಾಯಾಲಯವು ಪರಿಗಣಿಸಿತು. ಆರೋಪ ನಿಗದಿಪಡಿಸಿದ ಬಳಿಕ ಮಲಿಕ್‌ ತಪ್ಪೊಪ್ಪಿಕೊಂಡಿದ್ದ.