ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಜೆ ಜೆ ಆಸ್ಪತ್ರೆಯಲ್ಲಿ ಸೌಲಭ್ಯಗಳಿವೆಯೇ ಎಂಬು ಬಗ್ಗೆ ವೈದ್ಯಾಧಿಕಾರಿಯ ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮುಂಬೈ ನ್ಯಾಯಾಲಯ ನಿರ್ದೇಶನ ನೀಡಿದೆ.
ಭೂಗತ ಪಾತಕಿ ದಾವೂದ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಆರ್ಥರ್ ರೋಡ್ ಜೈಲಿನಲ್ಲಿರುವ ತಮಗೆ, ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ಆರು ವಾರಗಳ ಕಾಲ ತಾತ್ಕಾಲಿಕ ಜಾಮೀನು ನೀಡಬೇಕೆಂದು ಕೋರಿ ಮಲಿಕ್ ಅರ್ಜಿ ಸಲ್ಲಿಸಿದ್ದರು. ಇದೇ ಶುಕ್ರವಾರ ತಮ್ಮನ್ನು ಬಿಡುಗಡೆ ಮಾಡುವಂತೆ ʼರಶ್ಮೀಕಾಂತ್ ಅಂಡ್ ಪಾರ್ಟ್‌ನರ್ಸ್ʼ ನ್ಯಾಯವಾದಿ ಸಂಸ್ಥೆ ಮೂಲಕ ಕೋರಿದ್ದರು.
ಮಲಿಕ್ ಅವರು ವಾಂತಿ, ಭೇದಿ, ಜ್ವರ ಮತ್ತು ಚಳಿಯಿಂದ ಬಳಲುತ್ತಿದ್ದಾರೆ ಎಂದು ಅವರ ಪರ ವಕೀಲ ಕುಶಾಲ್ ಮೋರೆ ಅವರು ಸೋಮವಾರ ನಡೆದ ವಿಚಾರಣೆ ವೇಳೆ ತಿಳಿಸಿದ್ದರು. ಬಳಿಕ ಮಧ್ಯಾಹ್ನ ಅವರನ್ನು ತುರ್ತಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯಕೀಯ ಜಾಮೀನು ಅರ್ಜಿಯ ಅಂತಿಮ ವಿಚಾರಣೆಯನ್ನು ನ್ಯಾಯಾಲಯಕ್ಕೆ ಅನುಕೂಲವಾದಾಗ ನಡೆಸಲಿ ಆದರೆ ಈಗ ಮಲಿಕ್ ಅವರ ಆರೋಗ್ಯ ಪರಿಸ್ಥಿತಿ ಬಲ್ಲ ಖಾಸಗಿ ಆಸ್ಪತ್ರೆಗೆ ಮಲಿಕ್ ಅವರನ್ನು ವರ್ಗಾಯಿಸಬೇಕು ಎಂದು ಅವರು ಪ್ರಾರ್ಥಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಇ ಡಿ ಮಲಿಕ್ ಅವರು ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಖಾಸಗಿ ಆಸ್ಪತ್ರೆಗೆ ರವಾನಿಸುವ ಅಗತ್ಯವಿಲ್ಲ ಎಂದಿತು. ಆಸ್ಪತ್ರೆಯ ಪರಿಶೀಲನೆ ನಡೆಸಿ ಸೌಲಭ್ಯದ ಕುರಿತು ಇ ಡಿ ವಿವರವಾದ ವರದಿ ಸಲ್ಲಿಸಬಹುದು ಎಂದು ತನಿಖಾಧಿಕಾರಿ ತಿಳಿಸಿದರು. ಇದನ್ನು ಅಂಗೀಕರಿಸಿದ ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರು ಮೇ 5ರೊಳಗೆ ವರದಿ ಸಲ್ಲಿಸುವಂತೆ ಇ ಡಿ ಅಧಿಕಾರಿಗೆ ಸೂಚಿಸಿದರು. ವರದಿಯ ಆಧಾರದ ಮೇಲೆ ಮಲಿಕ್ ಮನವಿ ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿತು.