Patiala House Court 
ಸುದ್ದಿಗಳು

ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ: ಉಳಿದ ಅಭ್ಯರ್ಥಿಗಳ ಕುರಿತೂ ತನಿಖೆಗೆ ಸೂಚನೆ

ತನಿಖೆಯ ವ್ಯಾಪ್ತಿ ಹಿಗ್ಗಿಸಲು ಪೊಲೀಸರಿಗೆ ನಿರ್ದೇಶಿಸಿದ ನ್ಯಾಯಾಲಯ ಬೇರೆ ವ್ಯಕ್ತಿಗಳು ಅರ್ಹತೆ ಇಲ್ಲದೆಯೂ ಒಬಿಸಿ ಮತ್ತು ವಿಕಲಚೇತನರ ಕೋಟಾದಡಿ ಸವಲತ್ತು ಪಡೆದಿದ್ದಾರೆಯೇ ಎಂದು ಕೂಡ ತನಿಖೆ ನಡೆಸುವಂತೆ ಸೂಚಿಸಿದೆ.

Bar & Bench

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯನ್ನು ಮೋಸದಿಂದ ತೇರ್ಗಡೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ತರಬೇತಿ ನಿರತರಾಗಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿದೆ.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ (ಒಬಿಸಿ) ಹಾಗೂ  ವಿಕಲಾಂಗ ವ್ಯಕ್ತಿಗಳಿಗೆ ಒದಗಿಸಲಾಗುವ ಮೀಸಲಾತಿಯನ್ನು ವಂಚನೆಯಿಂದ ಪಡೆದಿರುವ ಆರೋಪ ಖೇಡ್ಕರ್ ಮೇಲಿದೆ.

ಖೇಡ್ಕರ್‌ ಅವರಿಗೆ ಇಂದು ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೇಂದರ್‌ ಕುಮಾರ್ ಜಂಗಾಲಾ ಅವರು ನ್ಯಾಯಾಲಯ ಬೇರೆ ವ್ಯಕ್ತಿಗಳು ಕೂಡ ಅರ್ಹತೆ ಇಲ್ಲದೆಯೂ ಒಬಿಸಿ ಮತ್ತು ವಿಕಲಚೇತನರ ಕೋಟಾದಡಿ ಸವಲತ್ತು ಪಡೆದಿದ್ದಾರೆಯೇ ಎಂದು ಅರಿಯುವ ನಿಟ್ಟಿನಲ್ಲಿ ತನಿಖೆಯ ವ್ಯಾಪ್ತಿಯನ್ನು ಹಿಗ್ಗಿಸುವಂತೆಯೂ ಪೊಲೀಸರಿಗೆ ನಿರ್ದೇಶಿಸಿದರು.

ಅಲ್ಲದೆ ಯುಪಿಎಸ್‌ಸಿ ಅಧಿಕಾರಿಗಳು ಖೇಡ್ಕರ್‌ ಅವರಿಗೆ ಸಹಾಯ ಮಾಡಿದ್ದರೆ ಎಂಬ ಕುರಿತೂ ದೆಹಲಿ ಪೊಲೀಸರು ತನಿಖೆ ಮಾಡಬೇಕು ಎಂದು ಸೂಚಿಸಿದೆ.

ಯುಪಿಎಸ್‌ಸಿ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಖೇಡ್ಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಯುಪಿಎಸ್‌ಸಿ ನಡೆಸಿದ ತನಿಖೆಯ ಪ್ರಕಾರ, ಖೇಡ್ಕರ್ ತನ್ನ ಹೆಸರು, ತನ್ನ ತಂದೆ ಮತ್ತು ತಾಯಿಯ ಹೆಸರು, ಆಕೆಯ ಛಾಯಾಚಿತ್ರ/ಸಹಿ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸ ತಿರುಚಿ ವಂಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ವ್ಯವಸ್ಥೆ ಮತ್ತು ಸಮಾಜಕ್ಕೆ ಪೂಜಾ ವಂಚಿಸಿದ್ದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಮತ್ತು ಯುಪಿಎಸ್‌ಸಿ ವಾದ ಮಂಡಿಸಿದ್ದವು.  ನಿನ್ನೆಯ (ಬುಧವಾರ) ವಿಚಾರಣೆ ವೇಳೆ ಆರೋಪಿಸಿದ್ದರು.

ಪುಣೆ ಜಿಲ್ಲಾಧಿಕಾರಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಸಂಬಂಧ ದೂರು ನೀಡಿದ್ದೆ. ಆದರೆ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿರಲಿಲ್ಲ. ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೇವಾ ನಿಯಮಗಳಡಿ ಸಮರ್ಥಿಸಿಕೊಳ್ಳಲು ನ್ಯಾಯಾಲಯ ತನಗೆ ಅವಕಾಶ ನೀಡಬೇಕು. ಎಂದು ಪೂಜಾ ವಾದಿಸಿದ್ದರು.

ಈ ಬೆಳವಣಿಗೆಗಳ ನಡುವೆಯೇ ಯುಪಿಎಸ್‌ಸಿ ನಿನ್ನೆ ಖೇಡ್ಕರ್‌ ಅವರ ಆಯ್ಕೆಯನ್ನು ರದ್ದುಗೊಳಿಸಿದ್ದು ಮುಂದೆ ತನ್ನ ಯಾವುದೇ ಪರೀಕ್ಷೆ ಬರೆಯದಂತೆ ಶಾಶ್ವತವಾಗಿ ಡಿಬಾರ್‌ ಮಾಡಿದೆ. ಖೇಡ್ಕರ್ ಅವರು "ಸಿಎಸ್ಇ-2022 ನಿಯಮಗಳನ್ನು ಉಲ್ಲಂಘಿಸಿದ್ದಾರೆ" ಎಂದು ಯುಪಿಎಸ್‌ಸಿ ವಾದಿಸಿದೆ.