Shikhar Dhawan and Patiala house Court
Shikhar Dhawan and Patiala house Court  Facebook
ಸುದ್ದಿಗಳು

ಕ್ರಿಕೆಟಿಗ ಧವನ್‌ ಕೌಟುಂಬಿಕ ಸಮಾರಂಭಕ್ಕೆ ಮಗನ ಜೊತೆ ಬರಲು ಪರಿತ್ಯಕ್ತ ಪತ್ನಿಗೆ ದೆಹಲಿ ನ್ಯಾಯಾಲಯದ ನಿರ್ದೇಶನ

Bar & Bench

ಮಗುವಿನ ಮೇಲೆ ತಾಯಿ ಮಾತ್ರ ಹಕ್ಕು ಹೊಂದಿಲ್ಲ ಎಂದಿರುವ ದೆಹಲಿಯ ಕೌಟುಂಬಿಕ ನ್ಯಾಯಾಲಯವು ಕ್ರಿಕೆಟಿಗ ಶಿಖರ್‌ ಧವನ್‌ ಅವರ ಕೌಟುಂಬಿಕ ಸಮಾರಂಭಕ್ಕೆ ಒಂಭತ್ತು ವರ್ಷದ ಪುತ್ರನನ್ನು ಕರೆತರುವಂತೆ ಧವನ್‌ ಅವರ ಪರಿತ್ಯಕ್ತ ಪತ್ನಿ ಆಯೇಷಾ ಮುಖರ್ಜಿ ಅವರಿಗೆ ಆದೇಶಿಸಿದೆ [ಶಿಖರ್‌ ಧವನ್‌ ವರ್ಸಸ್‌ ಆಯೇಷಾ ಧವನ್].

ಧವನ್‌ ಅವರ ಕುಟುಂಬವು 2020ರ ಆಗಸ್ಟ್‌ ನಂತರ ಮಗುವನ್ನು ಭೇಟಿ ಮಾಡಿಲ್ಲ ಎಂಬುದನ್ನು ಪರಿಗಣಿಸಿ ಮಗುವನ್ನು ಭಾರತಕ್ಕೆ ಕರೆತರಲು ಆಕ್ಷೇಪಿಸಿರುವ ಆಯೇಷಾ ಅವರನ್ನು ನ್ಯಾಯಾಧೀಶರಾದ ಹರೀಶ್‌ ಕುಮಾರ್‌ ಅವರು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಧವನ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಭಾರತ ಮತ್ತು ಆಸ್ಟ್ರೇಲಿಯಾ (ಆಯೇಷಾ ಜೊತೆ ಮಗು ಇರುವ ದೇಶ) ಎರಡು ಕಡೆ ವಿಚ್ಚೇದನ ಮತ್ತು ಮಗುವಿನ ಕಸ್ಟಡಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಆರಂಭಿಸಿದ್ದಾರೆ.

ಕುಟುಂಬ ಸಮಾಗಮ ಕಾರ್ಯಕ್ರಮವನ್ನು ಮೊದಲಿಗೆ ಜೂನ್‌ 17ಕ್ಕೆ ನಿಗದಿಗೊಳಿಸಲಾಗಿತ್ತು. ಆ ವೇಳೆ ಪುತ್ರನಿಗೆ ಶಾಲೆ ಇರುವುದರಿಂದ ಆತನನ್ನು ಕರೆತರಲಾಗದು ಎಂದು ಆಯೇಷಾ ಆಕ್ಷೇಪಿಸಿದ್ದರು. ಪುತ್ರನ ಶಾಲೆಗೆ ರಜೆ ಇರುವುದರಿಂದ ಕಾರ್ಯಕ್ರಮವನ್ನು ಜುಲೈ 1ಕ್ಕೆ ನಿಗದಿಗೊಳಿಸಲಾಗಿದೆ.

ಕಾರ್ಯಕ್ರಮ ನಿಗದಿಗೂ ಮುನ್ನ ಕುಟುಂಬಕ್ಕೆ ಹತ್ತಿರದ ಸದಸ್ಯರನ್ನು ಸಂಪರ್ಕಿಸಿ ದಿನಾಂಕ ನಿಗದಿ ಮಾಡದೇ ಇರುವುದರಿಂದ ಅದು ವಿಫಲವಾಗಲಿದೆ ಎಂದು ಆಯೇಷಾ ಅವರು ಕಾರ್ಯಕ್ರಮದ ದಿನಾಂಕ ಮರು ನಿಗದಿ ಮಾಡಿದ್ದಕ್ಕೂ ಆಕ್ಷೇಪಿಸಿದ್ದರು.

ಕುಟುಂಬದ ಇತರೆ ಸದಸ್ಯರನ್ನು ಸಂಪರ್ಕಿಸದೇ ಅರ್ಜಿದಾರ ಧವನ್‌ ಕಾರ್ಯಕ್ರಮ ನಿಗದಿ ಮಾಡಿದ್ದರೂ ಅವರು ಕಾರ್ಯಕ್ರಮಕ್ಕೆ ಬಾರದೇ ಇದ್ದರೆ ಅದು ವಿಫಲವಾಗಬಹುದು. ಆದರೆ, ಧವನ್‌ ಮತ್ತು ಅವರ ಪೋಷಕರು ಮಗುವಿನ ಜೊತೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವಂತೆ ಮಗು 2020ರ ಆಗಸ್ಟ್‌ನಿಂದ ಭಾರತಕ್ಕೆ ಭೇಟಿ ನೀಡಿಲ್ಲ. ಧವನ್‌ ಮತ್ತು ಅವರ ಕುಟುಂಬ ಸದಸ್ಯರು ಮಗುವನ್ನು ಭೇಟಿ ಮಾಡುವ ಅವಕಾಶ ಪಡೆದಿಲ್ಲ. ತನ್ನ ಪೋಷಕರು ಮಗುವನ್ನು ಭೇಟಿ ಮಾಡಲು ಧವನ್‌ ಬಯಸುವುದನ್ನು ಅತಾರ್ಕಿಕ ಎನ್ನಲಾಗದು ಎಂದು ನ್ಯಾಯಾಲಯ ಹೇಳಿದೆ.

“ಮಗುವಿನ ಮೇಲೆ ತಾಯಿಗೆ ಮಾತ್ರ ಹಕ್ಕಿಲ್ಲ. ಧವನ್‌ ಅವರು ಕೆಟ್ಟ ತಂದೆ ಆಗಿಲ್ಲ. ಹಾಗಿದ್ದರೂ, ಅರ್ಜಿದಾರರು (ಧವನ್‌) ತಮ್ಮ ಸ್ವಂತ ಮಗನನ್ನು ಭೇಟಿ ಮಾಡಲು ಆಕೆ (ಆಯೇಷಾ) ಏಕೆ ಆಕ್ಷೇಪಿಸುತ್ತಿದ್ದಾರೆ” ಎಂದಿರುವ ನ್ಯಾಯಾಲಯವು ಧವನ್‌ ಅವರು ಮಗುವಿನ ಶಾಶ್ವತ ಕಸ್ಟಡಿ ಕೋರಿಲ್ಲ. ಪರಿತ್ಯಕ್ತ ಪತ್ನಿಯ ಖರ್ಚಿನಲ್ಲಿ ಕೆಲವು ದಿನಗಳ ಕಾಲ ಮಗು ಭಾರತದಲ್ಲಿ ಇರಬೇಕು ಎಂಬ ಬಯಕೆ ಅಷ್ಟೇ ಧವನ್‌ಗೆ ಇದೆ ಎಂದು ನ್ಯಾಯಾಲಯ ಹೇಳಿದೆ.